ಸರ್ಕಾರಿ ನೌಕರರ 'ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ'ಯ (NPS) ಪರಿಷ್ಕರಣೆಗೆ ಕೇಂದ್ರ ಸರ್ಕಾರವು ಶುಕ್ರವಾರ 4 ಸದಸ್ಯರ ಸಮಿತಿಯನ್ನು ರಚಿಸಿದೆ.
ಕರ್ನಾಟಕ ರಾಜ್ಯವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆಯನ್ನು(NPS) ಜಾರಿಗೆ ತರಬೇಕೆಂದು ಎನ್‌ಪಿಎಸ್ ನೌಕರರು ಆಗ್ರಹಿಸುತ್ತಿದ್ದಾರೆ.
ಇನ್ನೊಂದೆಡೆ ಪಂಜಾಬ್, ರಾಜಸ್ಥಾನ ಸೇರಿದಂತೆ ಕಾಂಗ್ರೆಸ್ ಆಡಳಿತದ ಹಲವು ರಾಜ್ಯಗಳು ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೊಳಿಸುವುದಾಗಿ ಘೋಷಿಸಿಯಾಗಿವೆ.
ಆದರೆ, ಅದರಿಂದಾಗುವ ಆರ್ಥಿಕ ಹೊರೆಯ ಬಗ್ಗೆ ತಜ್ಞರ ಎಚ್ಚರಿಕೆ ಹಾಗೂ ಕಾರ್ಯಾನುಷ್ಠಾನ ಸಾಧ್ಯತೆ ಸಮಸ್ಯೆಯಿಂದ ಗೊಂದಲಕ್ಕೆ ಸಿಲುಕಿವೆ.
ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಈಗಿರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಾರ್ಪಾಡಿಗೆ ಮುಂದಾಗಿದೆ.
ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಾಗೂ 2024ರ ಸಾರ್ವತ್ರಿಕ ಚುನಾವಣೆಗೆ ಬಿಸಿ ಏರುತ್ತಿರುವ ಈ ಹೊತ್ತಿನಲ್ಲೇ ಕೇಂದ್ರ ಸರಕಾರದ ಈ ನಡೆ ಕುತೂಹಲ ಸೃಷ್ಟಿಸಿದೆ.
ಕಳೆದ ಮಾರ್ಚ್ 23ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್‌ಪಿಎಸ್ ಪರಾಮರ್ಶೆಗೆ ಸಮಿತಿ ರಚಿಸುವುದಾಗಿ ಲೋಕಸಭೆಯಲ್ಲಿ ಘೋಷಿಸಿದ್ದರು. ಆದರೆ, ಕೇವಲ 15 ದಿನದಲ್ಲೇ ಸಮಿತಿ ರಚನೆ ಮಾಡಿರುವುದು ವಿಶೇಷ.
ನಾಲ್ವರು ಸದಸ್ಯರ ಸಮಿತಿಯು ಎನ್‌ಪಿಎಸ್ ಅಡಿಯಲ್ಲಿ ಹಾಲಿ ಇರುವ ಪಿಂಚಣಿ ಸೌಲಭ್ಯಗಳನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಬಗ್ಗೆ ಪರಿಶೀಲಿಸಿ ಅಗತ್ಯ ಶಿಫಾರಸುಗಳನ್ನು ನೀಡಲಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಆಗಬೇಕಾದ ಮಾರ್ಪಾಡುಗಳು, ಈಗಿರುವ ರಚನಾ ವ್ಯವಸ್ಥೆಯಲ್ಲಿ ಮಾಡಬಹುದಾದ ಬದಲಾವಣೆಗಳನ್ನು ಪಟ್ಟಿ ಮಾಡಲಿದೆ.
ಇದರ ಭಾಗವಾಗಿ ರಾಜ್ಯ ಸರಕಾರಗಳ ಜೊತೆಗೂ ಸಮಿತಿಯು ಸಮಾಲೋಚನೆಗಳನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಲಿದೆ.
ಜೊತೆಗೆ ಹೊಸ ಸೌಲಭ್ಯಗಳ ಸೇರ್ಪಡೆಯಿಂದ ಸರಕಾರದ ಬೊಕ್ಕಸ ಹಾಗೂ ಒಟ್ಟಾರೆ ಆಯವ್ಯಯದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಸಮಿತಿ ಪರಿಶೀಲಿಸಲಿದೆ.
ಏನಿದು ಎನ್‌ಪಿಎಸ್? What id NPS?
2004ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರಕಾರವು ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಸ್ಥಗಿತಗೊಳಿಸಿ, ಅದರ ಸ್ಥಾನದಲ್ಲಿ ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್)ಪರಿಚಯಿಸಿತು.
CAPF Constable Exam: ಕನ್ನಡವೂ ಸೇರಿದಂತೆ 15 ಪ್ರಾದೇಶಿಕ ಭಾಷೆಗಳಲ್ಲಿ ಇನ್ಮುಂದೆ CAPF ಪರೀಕ್ಷೆ!
ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಪಿಂಚಣಿಯು ನೌಕರನ ಕೊನೆಯ ಸಂಬಳದ ಶೇ. 50ರಷ್ಟು ಇರುತ್ತಿತ್ತು ಮತ್ತು ಸಂಪೂರ್ಣ ಮೊತ್ತವನ್ನು ಸರ್ಕಾರ ಪಾವತಿಸುತ್ತಿತ್ತು.
ಆದರೆ, ಎನ್‌ಪಿಎಸ್‌ನಲ್ಲಿ ಪಿಂಚಣಿ ಮೊತ್ತವು ನೌಕರರು ತಮ್ಮ ಖಾತೆಗೆ ನೀಡಿದ ಕೊಡುಗೆ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇಲ್ಲಿ ಸರಕಾರಿ ನೌಕರರು ತಮ್ಮ ಸಂಬಳದ ಶೇ. 10 ರಷ್ಟನ್ನು ನಿವೃತ್ತಿ ನಿಧಿಗೆ ನೀಡಬೇಕಾಗುತ್ತದೆ.
ಪಿಂಚಣಿ ನಿಧಿಗೆ ಸರಕಾರ ಶೇ. 14ರವರೆಗೆ ತನ್ನ ಪಾಲು ಸಲ್ಲಿಸುತ್ತದೆ. ಹಳೆಯ ಪಿಂಚಣಿ ವ್ಯವಸ್ಥೆಯು ನೌಕರರ ಸ್ನೇಹಿಯಾಗಿದ್ದು, ಅದನ್ನೇ ಜಾರಿಗೊಳಿಸಬೇಕೆಂದು ಎನ್‌ಪಿಎಸ್ ನೌಕರರು ಆಗ್ರಹಿಸುತ್ತಿದ್ದಾರೆ.