ಅರಣ್ಯ & ಗಣಿ ಇಲಾಖೆ ವ್ಯಾಜ್ಯ ಇತ್ಯಾರ್ಥಕ್ಕೆ ಪ್ರತ್ಯೇಕ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅರಣ್ಯ ಮತ್ತು ಗಣಿ ಇಲಾಖೆ ನಡುವೆ ಇರುವ ವ್ಯಾಜ್ಯ ಮತ್ತು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು
ಎರಡೂ ಇಲಾಖೆಗಳ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಗಿದೆ.
ಮುಖ್ಯ ಖನಿಜ ಮತ್ತು ಉಪ ಖನಿಜ ಕಳ್ಳತನ, ತೆರಿಗೆ ವಂಚನೆ ಬಗ್ಗೆ ತೀವ್ರ ನಿಗಾ ಇಟ್ಟು
ಅಗತ್ಯ ಕ್ರಮ ಕೈಗೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿ ಯೋಜನೆ
ಯಶಸ್ವಿ ಆಗಿರುವುದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರಿಗೆ-ಗಣಿ-ಮುದ್ರಾಂಕ ಇಲಾಖೆ ತೆರಿಗೆ ಸಂಗ್ರಹದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ.
ಆದರೆ ಗುರಿ ಮುಟ್ಟುವ ದಿಕ್ಕಿನಲ್ಲಿ ಸಮರ್ಪಕ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಿ
ಎಂದು ಮುಖ್ಯಮಂತ್ರಿಗಳು ಮೂರೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಈಚೆಗೆ ಸಾರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಇಲಾಖೆಯ
ಕಾರ್ಯಕ್ಷಮತೆ ಮತ್ತು ತೆರಿಗೆ ಸಂಗ್ರಹದ ಗುರಿ ತಲುಪಲು ತೆಗೆದುಕೊಂಡಿರುವ ಕ್ರಮಗಳ ಕುರಿತು
ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮೇಲಿನ ಸೂಚನೆ ನೀಡಿದರು.
ಅರಣ್ಯ ಮತ್ತು ಗಣಿ ಇಲಾಖೆ ನಡುವೆ ಇರುವ ವ್ಯಾಜ್ಯ ಮತ್ತು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು
ಎರಡೂ ಇಲಾಖೆಗಳ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಭೆಯನ್ನು ತ್ವರಿತವಾಗಿ ನಡೆಸಬೇಕು.
ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಗಣಿ ಸಂಪತ್ತು ಸೋರಿಕೆ ಆಗದಂತೆ, ಕಳ್ಳತನ ಆಗದಂತೆ
ಕಟ್ಟೆಚ್ಚರ ವಹಿಸಬೇಕು ಎನ್ನುವ ಸೂಚನೆ ನೀಡಿದರು.
ಮುಖ್ಯ ಖನಿಜ ಮತ್ತು ಉಪ ಖನಿಜ ಕಳ್ಳತನ, ತೆರಿಗೆ ವಂಚನೆ ಬಗ್ಗೆ ತೀವ್ರ ನಿಗಾ ಇಡಬೇಕು.
ಡ್ರೋನ್ ಸಮೀಕ್ಷೆ ಮೂಲಕ ಸರ್ಕಾರಕ್ಕೆ ಸುಳ್ಳು ಲೆಕ್ಕ, ತಪ್ಪು ಲೆಕ್ಕ ಕೊಡುತ್ತಿರುವ ಗಣಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಬೇಕು.
ಡ್ರೋನ್ ಸಮೀಕ್ಷೆ ಬಳಿಕ ನೈಜ ಚಿತ್ರಣ ದೊರಕುತ್ತದೆ.
ಹೀಗಾಗಿ ಈ ಪ್ರಯತ್ನದ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಶಕ್ತಿ ಯೋಜನೆಯಿಂದಾಗಿ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿ ಯೋಜನೆ
ಯಶಸ್ವಿ ಆಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಪಡೆದು ಅದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ಬಸ್ ಗಳ ಖರೀದಿ ಬಳಿಕ ಹೊಸ ಚಾಲಕರು ಮತ್ತು ನಿರ್ವಾಹಕರ ಅಗತ್ಯ ಬೀಳುತ್ತದೆ.
ಅವರ ನೇಮಕದ ಕುರಿತು ಪ್ರತ್ಯೇಕ ಸಭೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮೂರೂ ಇಲಾಖೆ ಅಧಿಕಾರಿಗಳಿಂದ ಸಮಗ್ರ ವಿವರ ಪಡೆದ ಮುಖ್ಯಮಂತ್ರಿಗಳು ಕೊನೆಯದಾಗಿ
ಮೂರೂ ಇಲಾಖೆ ನಿಗದಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಬೇಕು.
ಮೊದಲಿಗೆ ತೆರಿಗೆ ಸೋರಿಕೆ ಮತ್ತು ವಂಚನೆ ಬಗ್ಗೆ ತೀವ್ರ ನಿಗಾ ಇಡಿ ಎನ್ನುವ ಸೂಚನೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಸಚಿವ
ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್
ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಹಣಕಾಸು ಇಲಾಖೆಯ
ಕಾರ್ಯದರ್ಶಿಗಳಾದ ಡಾ. ಪಿ.ಸಿ. ಜಾಫರ್ ಹಾಗೂ ಡಾ. ಎಂ.ಟಿ. ರೇಜು, ಸಾರಿಗೆ ಆಯುಕ್ತ ಎನ್.ವಿ.ಪ್ರಸಾದ್
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ನೋಂದಣಿ ಮಹಾ ಪರಿವೀಕ್ಷಕರಾದ
ಮಮತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು
ಮತ್ತು ನಸೀರ್ ಅಹ್ಮದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.