News

ಬೇಸಿಗೆಯಲ್ಲಿ ಕುಡಿವ ನೀರು, ಮೇವಿನ ಸಮಸ್ಯೆಗಳ ನಿರ್ವಹಣೆ: ಜಿಲ್ಲಾ ಮಟ್ಟದ ಟಾಸ್ಕ್ಪೊರ್ಸ್ ಸಭೆ

07 April, 2023 9:42 AM IST By: Maltesh
Fodder problems in summer: District level taskforce meeting

ಕೊಪ್ಪಳ: ಬೇಸಿಗೆ ಸಮಯದಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ಏಪ್ರೀಲ್ 6ರಂದು ಸಭೆ ನಡೆಯಿತು.

ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲಾ ಕಾಮಗಾರಿಗಳ ಸಣ್ಣಪುಟ್ಟ ದುರಸ್ಥಿಯನ್ನು ವಾರದೊಳಗಾಗಿ ಮಾಡಬೇಕು. ಬೋರ್‌ವೆಲ್‌ಗಳ ಮೇಲೆ ಅವಲಂಭಿತವಾಗಿರುವ ಗ್ರಾಮ ಮತ್ತು ವಾರ್ಡವಾರು ಮಾಹಿತಿ ನೀಡಬೇಕು.

ಪರೀಕ್ಷೆಯಲ್ಲಿ ಕಾಪಿ ಮಾಡಿದ್ರೆ 10 ಕೋಟಿ ದಂಡದ ಜೊತೆ ಜೈಲು ಗ್ಯಾರಂಟಿ!

ಏಪ್ರಿಲ್ ಮತ್ತು ಮೇ ಅಂತ್ಯದವರೆಗೆ ಕುಡಿಯುವ ನೀರಿನ ಸಮಸ್ಯೆಗಳು ಎದುರಿಸುವ ಗ್ರಾಮಗಳ ಪಟ್ಟಿ ಮಾಡಬೇಕು. ತಾಲೂಕು ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಟಾಸ್ಕ್ಪೋರ್ಸ್ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮವಹಿಸಲು ಸೂಕ್ತ ನಿರ್ದೇಶನ ನೀಡಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದಾದರು ದೂರು ಬಂದರೆ 24 ಗಂಟೆಯೊಳಗೆ ಬಗೆಹರಿಸಬೇಕು. ತಾಂಡಾ ಮತ್ತು ಬೇಚಾರಕ ಗ್ರಾಮಗಳು ಬೋರ್‌ವೆಲ್‌ಗಳ ಮೇಲೆ ಅವಲಂಬನೆಯಾಗಿದ್ದರೆ ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು.

ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಿ, ನೀರು ಕುಡಿಯಲು ಯೋಗ್ಯವಿದ್ದಲ್ಲಿ ಮಾತ್ರ ಕುಡಿವ ನೀರಿನ ಬಳಕೆಗೆ ಉಪಯೋಗಿಸಲು ಕ್ರಮಕೈಗೊಳ್ಳಬೇಕು. ಎಲ್ಲಾ ಕುಡಿಯುವ ಯೋಜನೆಗಳಿಗೆ ವಿದ್ಯುತ್ ಸಂಪರ್ಕದ ಆಡಚಣೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಜಿಲ್ಲೆಯಲ್ಲಿ ದುರಸ್ಥಿ ಮಾಡಿಸಲು ಬಾಕಿ ಉಳಿದಿರುವ ಶುದ್ಧ ಕುಡಿವ ನೀರಿನ ಘಟಕಗಳನ್ನು ಸಹ ವಾರದೊಳಗಾಗಿ ದುರಸ್ಥಿಪಡಿಸಲು ಕ್ರಮ ಕೈಗೊಳ್ಳಬೇಕು.

ಬೋರ್‌ವೆಲ್‌ಗಳ ಅವಲಂಬನೆ ಆಗಿರುವ ಗ್ರಾಮಗಳ ಪಟ್ಟಿ ಮಾಡಿ ಒಂದು ಪರ್ಯಾಯ ಯೋಜನೆ ರೂಪಿಸಿ ತಾಂಡಾ ಮತ್ತು ಬೇಚರಕ್ ಗ್ರಾಮಗಳಲ್ಲಿ ಸಹ ಬೋರ್‌ವೆಲ್ ಮೇಲೆ ಅವಲಂಬನೆ ಆಗಿರುವ ಬಗ್ಗೆ ವಿವರ ನೀಡುವಂತೆ ಸೂಚನೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಹಕ ಅಭಿಯಂತರರು ಮಾತನಾಡಿ, ಜಿಲ್ಲೆಯಲ್ಲಿ ದುರಸ್ತಿಗೆ ಬಂದಿರುವ ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

Rain Alert: ರಾಜ್ಯದ ಈ  ಐದು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

ಕನಕಗಿರಿ ಪಟ್ಟಣದ ಕೆರೆ ತುಂಬಿದ್ದು, ಕುಡಿಯುವ ನೀರಿನ ಯಾವುದೇ ಸಮಸ್ಯೆ ಇರುವುದಿಲ್ಲವೆಂದು ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದರು. ಕೆಲವು ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾಗಿದೆ. ಕನಕಗಿರಿ ತಾಲೂಕಿನಲ್ಲಿ ಏಪ್ರಿಲ್ ಮಾಹೆಯಲ್ಲಿ 5 ಗ್ರಾಮಗಳಲ್ಲಿ ಮತ್ತು ಮೇ ಮಾಹೆಯಲ್ಲಿ 9 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಕನಕಗಿರಿ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಗಂಗಾವತಿ ನಗರಕ್ಕೆ ತುಂಗಭದ್ರ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸಿದ್ದಿಕೇರಿಯು ಅಂದಾಜು 6 ಎಕರೆ ಪ್ರದೇಶದಲ್ಲಿ ನೀರು ಲಭ್ಯವಿದ್ದು ಪ್ರತಿ ದಿನ 18.90 ಎಂ.ಎಲ್.ಡಿ ಪ್ರಮಾಣದಲ್ಲಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲವೆಂದು ಗಂಗಾವತಿ ನಗರಸಭೆ ಪೌರಾಯುಕ್ತರು ಮಾಹಿತಿ ನೀಡಿದರು.

ಗಂಗಾವತಿ ಗ್ರಾಮೀಣ ಪ್ರದೇಶದಲ್ಲಿ ಏಪ್ರಿಲ್ ಮಾಹೆಯಲ್ಲಿ 7 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ತಿಳಿಸಿದರು. ಕೆನಾಲ್‌ಗಳಲ್ಲಿ ನೀರು ಬತ್ತಿ ಹೋಗುವ ಮುಂಚೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಯಿತು.

ಕುಷ್ಟಗಿ ನಗರದ 23 ವಾರ್ಡಗಳಲ್ಲಿ 24*7 ಮಾದರಿಯಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದ ವಾರ್ಡಗಳಿಗೆ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದರು.

ಕುಷ್ಟಗಿ ಗ್ರಾಮೀಣ ಪ್ರದೇಶದಲ್ಲಿ 173 ಗ್ರಾಮಗಳಲ್ಲಿ ಕುಡಿಯುವ ನೀರಿನ ಸೌಕರ್ಯವಿದ್ದು, ಜೆ.ಜೆ.ಎಂ ಮತ್ತು ಡಿ.ಬಿ.ಒ.ಟಿ ಯೋಜನೆಯ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮೇ ಅಂತ್ಯಕ್ಕೆ 8 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

ಕಾರಟಗಿ ನಗರದಲ್ಲಿ ಸದ್ಯಕ್ಕೆ ಯಾವುದೇ ವಾರ್ಡನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲವೆಂದು ಮುಖ್ಯಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಮೇ ಅಂತ್ಯದೊಳಗೆ 4 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ತಾಪಂ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು