ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ರೈತನ ಕೈಹಿಡಿದಿದ್ದ, ಸೇವಂತಿ, ಚೆಂಡು. ಮಲ್ಲಿಗೆ,ಗುಲಾಬಿ ಬೆಳೆ ಇಂದು ಬೆಲೆ ಕುಸಿತದಿಂದಾಗಿ ರೈತರ ಕೈಬಿಟ್ಟಿದೆ. ಇದರಿಂದಾಗಿ ಹೂವನ್ನೆ ನಂಬಿ ಬೆಳೆದಿದ್ದ ರೈತರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಬೆಲೆ ಕುಸಿತದ ಪರಿಣಾಮವಾಗಿ ತೋಟಗಳಲ್ಲಿಯೆ ಹೂವುಗಳು ಕೊಳೆಯುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಅದಿಕಮಾಸ ಎನ್ನಲಾಗುತ್ತಿದೆ. ಈ ಮಾಸದಲ್ಲಿ ಗೃಹ ಪ್ರವೇಶ, ಮದುವೆ ಸಮಾರಂಭಗಳಿಲ್ಲ. ಹಬ್ಬಗಳೂ ಇಲ್ಲ. ಇದರಿಂದಾಗಿ ರೈತರಿಗೆ ದೊಡ್ಡ ಹೊಡೆತಬಿದ್ದಿದೆ. 150 ರುಪಾಯಿಗೆ ಒಂದು ಕೆಜಿ ಮಾರಾಟವಾಗುತ್ತಿದ್ದ ಸೇವಂತಿಗೆ 30 ರೂಪಾಯಿಗೂ ಕೇಳುವವರಿಲ್ಲದಂತಾಗಿದೆ.
ಸೇವಂತಿಗೂ ದರ ಕುಸಿತದ ಆತಂಕ:
ಹಬ್ಬಗಳನ್ನೆಲ್ಲಾ ಗಮನದಲ್ಲಿಟ್ಟು ರೈತರು ಚೆಂಡು, ಮಲ್ಲಿಗೆ, ಸೇವಂತಿಗೆ ಹೂವು ಬೆಳೆಯುತ್ತಾರೆ. ಪ್ರತಿವರ್ಷ ಈ ದಿನಗಳಲ್ಲಿಯೂ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಪ್ರಸಕ್ತ ಮಾರುಕಟ್ಟೆಯಲ್ಲಿ ಸೇವಂತಿಗೆಗೆ ಕೆ.ಜಿ.ಗೆ 30 ರಿಂದ 35 ರೂ. ದರ ದೊರೆಯುತ್ತಿದೆ.
ಗಾಯದ ಮೇಲೆ ಬರೆ ಎಳೆದ ಅಧಿಕ ಮಾಸ:
ಆರಂಭದಲ್ಲಿ ಕೊರೋನಾ ಲಾಕ್ಡೌನ್ ಪರಿಣಾಮವಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದರು. ನಂತರ ಲಾಕ್ಡೌನ್ ತೆರವುಗೊಳಿಸಿದರೂ ಸಹ ಮದುವೆ ಮುಂಜುವಿ ಕಾರ್ಯಕ್ರಮಗಳಿಗೆ ಇಂತಿಷ್ಟೇ ಜನರು ಇರಬೇಕು, ಅತ್ಯಂತ ಸರಳವಾಗಿ ಆಚರಿಸಬೇಕೆಂದು ಸರ್ಕಾರ ಆದೇಶ ನೀಡಿದ್ದರಿಂದ ರೈತರ ಹೂವುಗಳಿಗೆ ಬೇಡಿಕೆಯೇ ಬರಲಿಲ್ಲ. ನಂತರ ಗಣೇಶ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಬಾರದು, ಹಾಗೂ ವೈಭವದ ಸಮಾರಂಭಗಳಿಗೆ ಕಡಿವಾಣ ಹಾಕಿದ್ದರಿಂದ ಇನ್ನೂ ಸಕಂಷ್ಟದಲ್ಲಿ ಸಿಲುಕಿದರು. ಇನ್ನೇನು ಮುಂದಾದರೂ ಒಳ್ಳೆಯ ಧಾರಣೆ ಬರಬಹುದೆಂದು ನಿರೀಕ್ಷೆಯಲ್ಲಿದ್ದ ರೈತರಿಗೆ ಅಧಿಕ ಮಾಸ ಗಾಯದ ಮೇಲೆ ಬರೆ ಎಳೆದಿದೆ.
ಸೇವಂತಿ ಕೆಜಿಗೆ 30 ರೂಪಾಯಿ ಕೇಳುವವರಿಲ್ಲ:
ಅಲಂಕಾರದಲ್ಲಿ ಹೆಚ್ಚಾಗಿ ಬಳಸುವ ಚೆಂಡು, ಸೇವಂತಿಗೆ ಹೂವಿನ ಬೇಡಿಕೆ ದಿಢೀರನೆ ಕುಸಿದಿದೆ. ಈಗ ಸಗಟು ಮಾರುಕಟ್ಟೆಯಲ್ಲಿ ಚೆಂಡು ಹೂವು ಕೆಜಿಗೆ 10 ರೂಪಾಯಿ ಮಾತ್ರ ಇದೆ. ಸೇವಂತಿಗೆ 30 ರುಪಾಯಿಗೆ ಕೇಳುವವರೆ ಇಲ್ಲ. ಈ ಬೆಲೆಯಲ್ಲಿ ಬಿಡಿಸಿದ ಕೂಲಿಯೂ ಹೊರಡುವುದಿಲ್ಲ. ಮಾರುಕಟ್ಟೆಗೆ ಸಾಗಿಸಿದ ವೆಚ್ಚ ಸಿಗಲ್ಲ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಚೆಂಡು ಹೂವಿನ ಬೆಲೆ ಕೆಜಿಗೆ 60 ರಿಂದ 70 ರುಪಾಯಿ ಇರುತ್ತಿತ್ತು ಅದೇ ರೀತಿ ಸೇವಂತಿಗೆಯ ಹೂವಿನ ಬೆಲೆ 140-150 ರುಪಾಯಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಸೇವಂತಿಗೆ 30 ರೂಪಾಯಿಗೂ ಖರೀದಿ ಮಾಡುವವರಿಲ್ಲ ಎಂದು ಮಂಡ್ಯ ತಾಲೂಕಿನ ಹೂ ಬೆಳೆಗಾರ ರಾಜೇಗೌಡ ಬಿದರಕಟ್ಟೆ ಬೇಸರ ವ್ಯಕ್ತಪಡಿಸಿದರು.
ಮಾರುಕಟ್ಟೆಗೆ ಹೂವನ್ನು ಕೊಂಡೊಯ್ದು ರೈತರು ಮಾರಾಟವಾಗದೆ ಚರಂಡಿಗೆ ಚೆಲ್ಲುವ ಪರಿಸ್ಥಿತಿ ಉಂಟಾಗಿದೆ. ಬೈಕಲ್ಲೋ ಅಥವಾ ಟಂಟಂನಲ್ಲಿ ಹಾಕಿಕೊಂಡು ಮಾರಾಟ ಮಾಡಲು ಹೋದರೆ ಪೆಟ್ರೋಲ್ ಖರ್ಚೂ ಬರುತ್ತಿಲ್ಲ. ಬಲಿತ ಹೂ ತೋಟಗಳಲ್ಲಿಯೇ ಕೊಳೆಯುತ್ತಿದೆ.
ರಂಗ್ ಕಳೆದುಕೊಂಡಿವೆ ರೋಸ್:
ಸಾಮಾನ್ಯ ಗುಲಾಬಿ ಹೂವಿಗೆ ಈ ಮೊದಲು 10 ರೂ ಇರುತ್ತಿತ್ತು. ಈಗ 2 ರುಪಾಯಿಗೆ ಮಾರಾಟವಾಗುತ್ತಿದೆ. ಬೆಳಗ್ಗೆಯಿಂದ ಸಾಯಂಕಾಲದವರೆಗೆ ಗುಲಾಬಿ ಮಾರಾಟದಲ್ಲಿ 50 ರುಪಾಯಿ ಸಿಗುತ್ತಿಲ್ಲ. ಕೊರೋನಾ ಕಾರಣವೋ ಅಥವಾ ಇನ್ನೇನೋ ಆ ದೇವರೇ ಬಲ್ಲ ಎನ್ನುತ್ತಾರೆ ವ್ಯಾಪಾರಿ ಮಹ್ಮದ್ ಸುಲೇಮಾನ್.
ಹೂ ಕೀಳಿಸಿದ ಕೂಲಿಯೂ ಗಿಟ್ತಿಲ್ಲ:
ಸೇವಂತಿಗೆ ಬಿಡಿಸಲು ಕೂಲಿ ಕೊಡಕ್ಕೂ ಆಗುತ್ತಿಲ್ಲ. ಮನೆಯವರೇ ಹೂವು ಬಿಡಿಸಿ ಖುದ್ದಾಗಿ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿದರೂ ಲಾಭವಿಲ್ಲ. ಹೊಲದಲ್ಲಿಯೇ ಕೊಳೆತು ಹೋಗುವುದಕ್ಕಿಂತ ಹಾಕಿದ ಖರ್ಚಾದರೂ ಬರಲಿ ಎಂದು ಬಿಡಿಸುತ್ತಿದ್ದೇವೆ. ಆದರೆ ಅದೂ ಬರುವ ಗ್ಯಾರೆಂಟಿ ಇಲ್ಲದಂತಾಗಿದೆ.ಹಾಕಿದ ಬಂಡವಾಳವಿರಲಿ, ಗಂಟೆ ಲೆಕ್ಕಚಾರದಲ್ಲಿ ಹೂ ಕೀಳಿಸಿದ ಕೂಲಿಯೂ ಸಿಗದಂತಾಗಿದೆ. ದರ ಕುಸಿತ ನೋಡಿ ದಿಕ್ಕುತೋಚದಂತಾಗಿದ್ದಾರೆ ಎಂದು ರೈತ ರಾಜೇಗೌಡ ಬಿದರಕಟ್ಟೆ ಕಳವಳ ವ್ಯಕ್ತಪಡಿಸಿದ್ದಾರೆ.