ಅಕ್ಟೋಬರ್ ತಿಂಗಳಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ರಾಜ್ಯದಲ್ಲಿ 6.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 25 ಜಿಲ್ಲೆಗಳ 173 ತಾಲೂಕುಗಳು ಪ್ರವಾಹ ಪೀಡಿತವಾಗಿವೆ. 12,700 ಮನೆಗಳು ಕುಸಿದಿವೆ ಎಂಬ ಮಾಹಿತಿ ಪ್ರಾಥಮಿಕ ವರದಿಗಳಿಂದ ಲಭಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸಕ್ತ ವರ್ಷ ರಾಜ್ಯದ 14 ಜಿಲ್ಲೆಗಳಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 245ರಷ್ಟು ಹೆಚ್ಚಿನ ಮಳೆಬಿದ್ದಿದೆ. ಪ್ರವಾಹದಿಂದ 10 ಜನರು ಮೃತಪಟ್ಟಿದ್ದಾರೆ. 993 ಜಾನುವಾರುಗಳ ಸಾವು ಸಂಭವಿಸಿದೆ’ ಎಂದರು.
ಪ್ರವಾಹ ಪೀಡಿತ ಪ್ರದೇಶಗಲ್ಲಿ ಸಮರೋಪಾದಿಯಲ್ಲಿ ನೆರೆ ಪರಿಹಾರ ಕೈಗೊಳ್ಳಲಾಗುತ್ತಿದೆ ಮನೆ ಹಾಳಾದ ಕುಟುಂಬಗಳಿಗೆ ತಲಾ 10 ಸಾವಿರದಂತೆ 12300 ಕುಟುಂಬಗಳಿಗೆ ಒಟ್ಟು 35.48 ಕೋಟಿ ರುಪಾಯಿ ಪಾವತಿಸಲಾಗಿದೆ. ಉಳಿದವರಿಗೆ ಶೀಘ್ರದಲ್ಲಿಯೇ ಬಾಕಿ ಪಾವತಿಸಲಾಗುತ್ತದೆ. ಪ್ರವಾಹ ಸಂತ್ರಸ್ತರಿಗಾಗಿ 230 ಕಾಳಜಿ ಕೇಂದ್ರ ತೆರೆದಿದ್ದು, 38676 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ನೀಡಲು ಸೂಚನೆ ನೀಡಲಾಗಿದೆ. ಮೂಲಸೌಕರ್ಯ ಸೇರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ನಷ್ಟದ ಅಂದಾಜು ಇನ್ನೂ ಸಿಕ್ಕಿಲ್ಲ. ಆದಷ್ಟು ಬೇಗ ವರದಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಅತೀವೃಷ್ಟಿಯಿಂದಾಗಿ ಸಂಭವಿಸಿದ ನಷ್ಟದ ಕುರಿತು ಸಂಪೂರ್ಣ ಮಾಹಿತಿ ಬಂದ ಬಳಿಕವೇ ಕೇಂದ್ರಕ್ಕೆ ನೆರವು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರಾಜ್ಯದ 30 ಜಿಲ್ಲಾಧಿಕಾರಿಗಳ ಖಾತೆಯಲ್ಲಿ 666.50 ಕೋಟಿ ಅನುದಾನ ಲಭ್ಯವಿದೆ. ಪ್ರವಾಹ ಪರಿಸ್ಥಿತಿ ಎದುರಿಸುವುದಕ್ಕಾಗಿ ಆಗಸ್ಟ್ ತಿಂಗಳಿನಿಂದ ಈವರೆಗೆ ವಿವಿಧ ಜಿಲ್ಲೆಗಳಿಗೆ 127.93 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಪ್ರವಾಹ ಪರಿಹಾರಕ್ಕಾಗಿ 162.92 ಕೋಟಿ ಮತ್ತು ಅಗ್ನಿಶಾಮಕ ಇಲಾಖೆಯ ಬಳಕೆಗೆ ರಕ್ಷಣಾ ಸಾಮಗ್ರಿಗಳ ಖರೀದಿಗಾಗಿ 20.09 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.