ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಎನ್.ಬಿ.ಶ್ರೀಧರ ಅವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು ಫೆಲೋಶಿಪ್ ನೀಡಿ ಗೌರವಿಸಿದೆ.
ಕೃಷಿ ಭೂಮಿಯಲ್ಲಿ ಹಾವುಗಳ ನಿರ್ವಹಣೆ ಮತ್ತು ಮುಂಜಾಗ್ರತೆ ಕ್ರಮಗಳು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಡಾ. ಎನ್.ಬಿ. ಶ್ರೀಧರ್ ಅವರು ಪಶುವೈದ್ಯಕೀಯ ವಿಭಾಗದಲ್ಲಿ ವೃತ್ತಿ ಜೊತೆಜೊತೆಗೆ ಹಲವು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ.
ಅಲ್ಲದೇ ಕೃಷಿ ಜಾಗರಣದೊಂದಿಗೂ ಪಶುವೈದ್ಯಕೀಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ರೈತರಿಗೆ ಸದಾ ನೆರವಾಗಿದ್ದಾರೆ. ವೆಬಿನಾರ್, ಫೇಸ್‌ಬುಕ್ ಲೈವ್‌ಗಳ ಮೂಲಕ ರೈತರಿಗೆ ಉಪಯುಕ್ತ ಮಾಹಿತಿಯನ್ನು ಸಹ ನೀಡುತ್ತಿದ್ದರು.
ಡಾ. ಎನ್.ಬಿ.ಶ್ರೀಧರ ಅವರ ಪರಿಚಯ:
ಡಾ ಎನ್.ಬಿ.ಶ್ರೀಧರ ಅವರು ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರದವರಾಗಿದ್ದು ಬಿವಿಎಸ್ಸಿ ಪದವಿಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರಿನಲ್ಲಿ 1990 ರಲ್ಲಿ, ನಂತರ ಬರೇಲಿಯ ಭಾರತೀಯ ಪಶುವೈದ್ಯಕೀಯ ಅನುಸಂಧಾನ ಸಂಸ್ಥಾನದಲ್ಲಿ ಎಂವಿಎಸ್ಸಿಹ ಪದವಿಯನ್ನು ಮುಗಿಸಿ, 1992 ರಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಪಶುಚಿಕಿತ್ಸಾಲಯ ತಾಳಗುಪ್ಪದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಇವರು ಪಶುವೈದ್ಯರಾಗಿ ಸಾಗರ ಪ್ರಾಂತ್ಯದಲ್ಲಿ ಅತ್ಯಂತ ಜನಪ್ರಿಯರಾಗಿದ್ದು ತಮ್ಮನ್ನು ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಪಶುಚಿಕಿತ್ಸಾಲಯ ತಾಳಗುಪ್ಪಕ್ಕೆ "ರಾಜ್ಯದ ಅತ್ಯುತ್ತಮ ಮಾದರಿ ಪಶುಚಿಕಿತ್ಸಾಲಯ" ಎಂಬ ಪ್ರಶಸ್ತಿ ಬಂದರೆ ಡಾ:ಎನ್.ಬಿ. ಶ್ರೀಧರ ಅವರಿಗೆ ಅವರ ಕಡಿಮೆ ವಯಸ್ಸಿನಲ್ಲಿ ರಾಜ್ಯದ "ಶ್ರೇಷ್ಠ ಪಶುವೈದ್ಯ" ಪ್ರಶಸ್ತಿ ದೊರಕಿದ್ದು ಹೆಮ್ಮೆಯ ಸಂಗತಿ. ರಾಜ್ಯದ ಅನೇಕ ಸಂಘ ಸಂಸ್ಥೆಗಳು ಇವರ ಈ ಗಣನೀಯ ಕಾರ್ಯವನ್ನು ಪರಿಗಣಿಸಿ ಸನ್ಮಾನಿಸಿವೆ.
ಜಾನುವಾರುಗಳಲ್ಲಿ ಇವರು ಮಾಡಿದ ಅತ್ಯುತ್ತಮ ಸಂಶೋಧನೆಗೆ ವಿಶ್ವವಿದ್ಯಾಲಯದ ಬಂಗಾರದ ಪದಕದ ಜೊತೆ ಶ್ರೇಷ್ಠ ಸಂಶೋಧನಾ ಪ್ರಬಂಧ ಲೇಖನ ಮತ್ತು ಶ್ರೇಷ್ಠ ಭಿತ್ತಿ ಚಿತ್ರ ಇತ್ಯಾದಿ ಅನೇಕ ಪ್ರಶಸ್ತಿಗಳು ದೊರೆತಿವೆ. ಇವರು ಮಾರ್ಗದರ್ಶನ ಮಾಡಿದ ಅನೇಕ ವಿದ್ಯಾರ್ಥಿಗಳಿಗೆ “ಯುವ ವಿಜ್ಞಾನಿ”, “ಶ್ರೇಷ್ಠ ವೈಜ್ಞಾನಿಕ ಬರಹಗಾರ” ಇತ್ಯಾದಿಗಳು ದೊರೆತಿರುವುದು ಗಮನಾರ್ಹವಾಗಿದೆ.
2004 ರಲ್ಲಿ ಪಿಹೆಚ್‌ಡಿ ಪದವಿಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿ ನಂತರ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರದ ಅಧೀನದ ಪಶುವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರಿನ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು.
ಅನೇಕ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ
ಕ್ಷೇತ್ರ ಪಶುವೈದ್ಯರಾಗಿ ಹೊಂದಿದ 15 ವರ್ಷಗಳ ಅನುಭವ ಇವರಿಗೆ ಪಠ್ಯಪುಸ್ತಕಗಳಲ್ಲಿ ನಮೂದಾಗದೇ ಇರುವ ಕರ್ನಾಟಕದಲ್ಲಿರುವ ಜಾನುವಾರುಗಳಲ್ಲಿ ಇರುವ ಹಲವಾರು ನಿಗೂಢ ಕಾಯಿಲೆಗಳ ಬಗ್ಗೆ ಅದರಲ್ಲೂ ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿರುವ ಸಸ್ಯಜನ್ಯ ವಿಷಬಾಧೆಗಳಾದ ಬಸರಿ ಸೊಪ್ಪಿನ ವಿಷಬಾಧೆ, ವಾಯುವಿಳಂಗ ಗಿಡದ ವಿಷಬಾಧೆ, ಮುಳ್ಳಿಲ್ಲದ ನಾಚಿಕೆ ಗಿಡದ ವಿಷಬಾಧೆ, ಕಳಲೆಯ ವಿಷಬಾಧೆ, ಅಡಿಕೆ ತೊಗರಿನ ವಿಷಬಾಧೆ, ಶಿಲೀಂದ್ರ ಪೀಡಿತ ವಿವಿಧ ಮೇವುಗಳ ವಿಷಬಾಧೆ ಅಲ್ಲದೇ ಇನ್ನೂ ಅನೇಕ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ಮಾಡಿ ಈ ವಿಷಯವನ್ನು ಕ್ಷೇತ್ರ ಪಶುವೈದ್ಯರಿಗೆ ಹಾಗೂ ರೈತರಿಗೆ ಹಲವಾರು ಮಾಧ್ಯಮಗಳ ಮೂಲಕ ತಿಳಿಸಿ, ಸಹಸ್ರಾರು ಜಾನುವಾರುಗಳ ಜೀವ ಉಳಿಸಲು ಕಾರಣವಾಗಿರುತ್ತಾರೆ.
ಅಲ್ಲದೇ ಇನ್ನೂ ಅನೇಕ ಹೊಸ ರೀತಿಯ ಸಸ್ಯಜನ್ಯ ವಿಷಬಾಧೆಯ ಬಗ್ಗೆ ಸಂಶೋಧನೆಯನ್ನು ಕೈಗೊಂಡು ಔಷಧ ಕಂಡುಹಿಡಿದು ಸಹಸ್ರಾರು ಪ್ರಾಣಿಗಳ ಜೀವ ಉಳಿಸಲು ಪಶುವೈದ್ಯರಿಗೆ ಸಹಕಾರಿಯಾಗಿರುತ್ತಾರೆ. ಈ ಸಂಶೋಧನೆ ಮುಂದುವರೆದಿದೆ.
42 ಸ್ನಾತಕೋತ್ತರ ಮತ್ತು 11 ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಪ್ರಧಾನ ಮಾರ್ಗದರ್ಶನ
ಇವರು ಬಹಳ ಕಡಿಮೆ ಅವಧಿಯಲ್ಲಿ 42 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು 11 ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಪ್ರಧಾನ ಮಾರ್ಗದರ್ಶಕಾಗಿದ್ದು 104 ಕ್ಕಿಂತ ಹೆಚ್ಚುಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿರುತ್ತಾರೆ. ಇವರ ಬಹುತೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು 191 ಕ್ಕಿಂತ ಜಾಸ್ತಿ ವೈಜ್ಞಾನಿಕ ಲೇಖನಗಳನ್ನು ಉತ್ತಮ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ. ಅಖಿಲ ಭಾರತ ಮಟ್ಟದ ಮತ್ತು ಅಂತರಾಷ್ಟ್ರೀಯ ಮಟ್ಟದ ಅನೇಕ ವೈಜ್ಞಾನಿಕ ಜರ್ನಲ್‌ಗಳ ಸಲಹಾ ಸಮಿತಿಯ ಸದಸ್ಯರು ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಅಧೀನದ “ಇಂಡಿಯನ್ ಜರ್ನಲ್ ಆಫ್ ಎನಿಮಲ್ ರೀಸರ್ಚ್” ಇತ್ಯಾದಿಗಳ ಲೇಖನಗಳ ನಿರಂತರ ಪರಾಮರ್ಷೆ ಮಾಡಿರುವುದರಿಂದ ಇವರನ್ನು ಸಂಪಾದಕೀಯ ಮಂಡಳಿಯ ಖಾಯಂ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ಇವರ ವೈಜ್ಞಾನಿಕ ಸಾಮರ್ಥ್ಯಕ್ಕೆ ಸಿಕ್ಕ ಮನ್ನಣೆ.
ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ 11 ಪುಸ್ತಕಗಳ ಲೇಖಕರು!
ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ 11 ಪುಸ್ತಕಗಳ ಲೇಖಕರಾದ ಇವರು ಪಶುವೈದ್ಯಕೀಯ ರಂಗಕ್ಕೆ ಸಂಬಂಧಿಸಿದ ರೈತರಿಗೆ ಉಪಯೋಗವಾಗುವ ಕನ್ನಡ ಲೇಖನಗಳು ನಾಡಿನ ಜನಪ್ರಿಯ ಪತ್ರಿಕೆಗಳಾದ ವಿಜಯ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಕ್ಷೀರಸಾಗರ, ಅಡಿಕೆ ಪತ್ರಿಕೆ, ತರಂಗ, ಸುಧಾ, ಕೃಷಿ ಮುನ್ನಡೆ, ಪಶುಸಿರಿ, ಪಶುಬಂಧ ಅಲ್ಲದೇ ಇನ್ನೂ ಹಲವಾರು ದಿನ ಪತ್ರಿಕೆ, ಪಾಕ್ಷಿಕ ಮತ್ತು ಮಾಸಿಕಗಳಲ್ಲಿ ನಿಯಮಿತವಾಗಿ ಬರುತ್ತಿವೆ.
ನಾಡಿನ ಜನಪ್ರಿಯ ಪತ್ರಿಕೆ ವಿಜಯವಾಣಿಯಲ್ಲಿ ಇವರು "ಪ್ರಾಣಿ ಲೋಕ" ಎಂಬ ಅಂಕಣವನ್ನು ನಿಯಮಿತವಾಗಿ ಬರೆದಿರುತ್ತಾರೆ. ಪ್ರಸಕ್ತ ಕನ್ನಡದ ಜನಪ್ರಿಯ ದಿನಪತ್ರಿಕೆಯಾದ ವಿಜಯ ಕರ್ನಾಟಕದಲ್ಲಿ ಇವರು "ಪಶು ಪ್ರೀತಿ" ಅಂಕಣದಲ್ಲಿ ಪ್ರತಿ ವಾರ ರೈತರನ್ನು ತಲುಪುವ ಅನೇಕ ಲೇಖನಗಳನ್ನು ಬರೆಯುತ್ತಿದ್ದಾರೆ.
ಇವರು ಸ್ವಂತ ಯುಟ್ಯೂಬ್ ವಾಹಿನಿಯನ್ನು ಹೊಂದಿದ್ದು, ಈ ವಾಹಿನಿಯಲ್ಲಿ ರೈತರಿಗೆ ಅವಶ್ಯವಿರುವ ಮಾಹಿತಿಯನ್ನು, ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯದ ಕುರಿತು ಎಲ್ಲಾ ತರಗತಿಗಳು, ಪ್ರಾತ್ಯಕ್ಷಿಕೆಗಳು ಇತ್ಯಾದಿಗಳನ್ನು ಹಂಚಿಕೊಂಡಿದ್ದಾರೆ. (https://www.youtube.com/channel/UCzRz9c2xfP_I5BL3rcrOKYw).
2014 ನೇ ಸಾಲಿನ “ಶ್ರೇಷ್ಠ ಲೇಖಕ” ರಾಜ್ಯ ಪ್ರಶಸ್ತಿ
ಸಪ್ನಾ ಪ್ರಕಾಶನ, ಬೆಂಗಳೂರು ಇವರು ಪ್ರಕಟಿಸಿದ “ಹೈನು ಹೊನ್ನು” ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರದಿಂದ 2014 ನೇ ಸಾಲಿನ “ಶ್ರೇಷ್ಠ ಲೇಖಕ” ರಾಜ್ಯ ಪ್ರಶಸ್ತಿ ಬಂದಿರುತ್ತದೆ. ಇವರು ಬರೆದ ಮತ್ತೊಂದು ಕನ್ನಡ ಪುಸ್ತಕವಾದ “ಜಾನುವಾರುಗಳಲ್ಲಿ ವಿಷಬಾಧೆ” ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ 2016 ನೇ ಸಾಲಿನ “ಶ್ರೇಷ್ಟ ಕನ್ನಡ ಕೃಷಿ ಪುಸ್ತಕ” ಪ್ರಶಸ್ತಿ ದೊರೆತಿರುತ್ತದೆ.
ಸಾಕು ಶ್ವಾನದ ಕುರಿತು ಇವರು ಬರೆದ "ನಾಯಿ ಪಾಲನೆ: ಪೋಷಣೆ” ಪುಸ್ತಕವು ಹಲವು ಮರು ಮುದ್ರಣಗಳನ್ನು ಹೊಂದಿರುತ್ತದೆ. ಉತ್ತಮ ಸಂಶೋಧನಾ ಯೋಜನೆಗಳನ್ನು ಪ್ರಧಾನ ಸಂಶೋಧಕರಾಗಿ ನಿರ್ವಹಿಸಿದ್ದಕ್ಕೆ ಇವರಿಗೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 20 ಬಂಗಾರದ ಪದಕಗಳನ್ನು ನೀಡಿರುತ್ತಾರೆ.
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ, ಇವರು ಶಿವಮೊಗ್ಗದಲ್ಲಿ ನೂತನವಾಗಿ ಕರ್ನಾಟಕ ಸರ್ಕಾರದಿಂದ 2017 ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಸಂಸ್ಥೆಯ ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮಾರು 1650ಕ್ಕಿಂತ ಹೆಚ್ಚು ರೈತರಿಗೆ ತರಬೇತಿ
ಅನೇಕ ನಿಗೂಢ ಕಾರಣ ಮತ್ತು ಚಿಕಿತ್ಸೆಯಲ್ಲಿ ಕ್ಷೇತ್ರ ಪಶುವೈದ್ಯರಿಗೆ ನೆರವಾಗಿದ್ದಾರೆ. ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ಇವರು ಜಾನುವಾರುಗಳ ಚಿಕಿತ್ಸೆಯಲ್ಲಿ ಉಪಯೋಗವಾಗುವ ಔಷಧ ಸಸ್ಯಗಳ ಮೂಲಿಕಾವನವನ್ನು ಸ್ಥಾಪಿಸಿದ್ದಾರೆ.
ನಿಯಮಿತವಾಗಿ ರೈತರಿಗೆ “ಗೋಪಾಲ ಗೋಷ್ಠಿ”ಯೆಂಬ ವಿನೂತನ ಕಾರ್ಯಕ್ರಮ ಕೈಗೊಂಡು ವಿಶ್ವವಿದ್ಯಾಲಯದ ವಿಷಯ ತಜ್ಞರನ್ನು ರೈತರ ಹಳ್ಳಿಗೇ ಕರೆದು ಕೊಂಡು ಹೋಗಿ ಸಂವಾದ ನಡೆಸಿ ಅವರ ವೈಜ್ಞಾನಿಕ ಜ್ಞಾನ ಹೆಚ್ಚಿಸುವ ಪ್ರಯತ್ನದಲ್ಲಿದ್ದಾರೆ. ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೈತರಿಗಾಗಿ ಪ್ರತಿ ವರ್ಷಕ್ಕೆ 8 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ವರೆಗೂ ಸುಮಾರು 1650 ಕ್ಕಿಂತ ಹೆಚ್ಚು ರೈತರನ್ನು ತರಬೇತಿಗೊಳಿಸಿದ್ದಾರೆ.
ಪಶುವೈದ್ಯರ ತಾಂತ್ರಿಕತೆಯನ್ನು ಆಧುನಿಕಗೊಳಿಸಲು ಪ್ರತಿ ವರ್ಷ 4 ತರಬೇತಿ ಕಾರ್ಯಕ್ರಮಗಳನ್ನು ವಿವಿಧ ವಿಷಯಗಳಲ್ಲಿ ಹಮ್ಮಿಕೊಂಡು ಸುಮಾರು 481 ಜನರಿಗೆ ತರಬೇತಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ರೈತರ ಜಾನುವಾರುಗಳು ಹಲವಾರು ಕಾರಣಗಳಿಂದ ಗೊಡ್ಡು ಬಿದ್ದು ಕರು ಹಾಕದೇ ರೈತರಿಗೆ ಆರ್ಥಿಕವಾಗಿ ಹೊರೆಯಾಗಿರುವುದನ್ನು ಗಮನಿಸಿ “ಗೋಗರ್ಭ” ಯೋಜನೆಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮತ್ತೊಂದು ಗರಿ.
ಹಳ್ಳಿಯೊಂದನ್ನು ಆಯ್ಕೆ ಮಾಡಿಕೊಂಡು ಈ ಯೋಜನೆಯನ್ನು ಜಾರಿಗೆ ತರುವುದರಿಂದ ರಾಸು ಉತ್ಪಾದಕವಾಗುವವರೆಗೂ ಸಹ ನಿರಂತರ ಅನುಸರಣೆಯಿರುವುದರಿಂದ, ಈ ಯೋಜನೆ ಯಶಸ್ವಿಯಾಗಿದೆ. ಈಗಾಗಲೇ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಈ ರೀತಿಯ 50 ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, 2500 ಕ್ಕಿಂತ ಜಾಸ್ತಿ ಹಸುಗಳು ಉತ್ಪಾದಕತೆಯತ್ತ ಸಾಗಿವೆ.
ಕೊರೊನಾ ಕಾಲಘಟ್ಟದಲ್ಲಿ ಆನ್‌ಲೈನ್ ಮೂಲಕ ರೈತರಿಗೆ ಮಾಹಿತಿ
ಕೊರೋನಾ ಕಾಲದ ಲಾಕ್ ಡೌನ್ ಸಂಕಷ್ಟದಲ್ಲಿ ರೈತರಿಗಾಗಿ ಆನ್‌ಲೈನ್ ಮಾಹಿತಿಗಳನ್ನು ಯುಟ್ಯೂಬ್ ಮತ್ತು ಫೇಸ್‌ಬುಕ್ ಹಾಗೂ ಝೂಂ ಅಥವಾ ಗೂಗಲ್ ಮೀಟ್ ಮಾಧ್ಯಮದ ಮೂಲಕ ಮಾಹಿತಿ ನೀಡುತ್ತಿರುವುದು ಸಹ ಇವರ ಒಂದು ಸಮಾಜಮುಖಿ ಕಾರ್ಯಕ್ಕೆ ಉದಾಹರಣೆಯಾಗಿವೆ.