News

ಮುಸುಕಿನ ಜೋಳ ಬೆಳೆದ ರೈತರ ಖಾತೆಗೆ 5000 ರೂಪಾಯಿ ನೇರ ನಗದು ವರ್ಗಾವಣೆ

07 November, 2020 10:00 AM IST By:

ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಮುಸುಕಿನ ಜೋಳ (ಗೋವಿನ ಜೋಳ) ಬೆಳೆದ ರೈತರಿಗೆ 5000 ಆರ್ಥಿಕ ನೆರವು ನೀಡುವ ಯೋಜನೆಯಡಿ ಜಂಟಿ ಖಾತೆ ಭೂ ಹಿಡುವಳಿಯ ರೈತರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತ ಸಂಪರ್ಕ ಕೇಂದ್ರ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಪ್ರದರ್ಶಿಸಲಾಗಿರುತ್ತದೆ.

ಜಿಲ್ಲೆಯಲ್ಲಿ ಒಟ್ಟಾರೆಯಾಗಿ 12,087 ಮೆಕ್ಕೆ ಜೋಳ ಬೆಳೆದ ಜಂಟಿ ಖಾತೆ ಭೂ ಹಿಡುವಳಿ ಹೊಂದಿದ ರೈತರಿದ್ದಾರೆ. ಇದುವರೆಗೆ ಕೇವಲ 6697 ರೈತರು ದಾಖಲಾತಿ ಸಲ್ಲಿಸಿದ್ದಾರೆ. ಆರ್ಥಿಕ ನೆರವನ್ನು ಡಿ.ಬಿ.ಟಿ. ಮುಖಾಂತರ ರೈತರ ಖಾತೆಗೆ ನೇರ ನಗದು ವರ್ಗಾವಣೆ ಪ್ರಕ್ರಿಯೆಯಲ್ಲಿ ನೀಡಲಾಗುತ್ತಿದೆ. ಸದರಿ ಪ್ರಕ್ರಿಯೆಯಡಿ ಫ್ರೂಟ್‌ ತಂತ್ರಾಂಶದಲ್ಲಿ ನೋಂದಣಿ ಅವಶ್ಯವಿರುತ್ತದೆ

ಜಂಟಿ ಮಾಲಿಕತ್ವ ಹೊಂದಿದ ಪ್ರತಿಯೊಬ್ಬ ರೈತರು ನೋಂದಣಿಗೆ ಬೇಕಾಗಿರುವ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಉತಾರ/ಖಾತೆ, ಮೊಬೈಲ್ ಸಂಖ್ಯೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರವನ್ನು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಆದಷ್ಟು ಬೇಗನೇ ಸಲ್ಲಿಸಲು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಮತ್ತು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಬಹುದಾಗಿದೆ.