News

ಬಿಜೋಪಚಾರದ ಮಹತ್ವ ಕುರಿತು ಜೂನ್ 17ರಂದು ಆನ್ಲೈನ್ ತರಬೇತಿ

16 June, 2021 7:58 PM IST By:
seed treatment

ಕೃಷಿಯಲ್ಲಿ ಬೀಜೋಪಚಾರವು ಅತ್ಯಂತ ಪ್ರಮುಖ ಘಟ್ಟವಾಗಿದೆ. ‘ಉತ್ತಮ ಬೀಜೋಪಚಾರದಿಂದ ಉತ್ತಮ ಬೆಳೆ’ ಎಂಬ ನುಡಿಗಟ್ಟು ಕೂಡ ಕೃಷಿ ವಲಯದಲ್ಲಿ ಪ್ರಚಲಿತದಲ್ಲಿದೆ. ಆದರೆ, ಬಹಳಷ್ಟು ರೈತರು ಸಮರ್ಪಕ ರೀತಿಯಲ್ಲಿ ಬೀಜೋಪಚಾರ ಮಾಡುವುದಿಲ್ಲ. ಇದರಿಂದ ಇಳುವರಿಯ ಮೇಲೆ ಹೊಡೆತ ಬೀಳುತ್ತಿದೆ. ಅದರಲ್ಲೂ ಈಗೀಗ ಕೃಷಿ ಭೂಮಿಗೆ ಕಾಲಿಡುತ್ತಿರುವ ಯುವ ಕೃಷಿಕರು ಬೀಜೋಪಚಾರದ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ.

ಹೀಗಾಗಿ ರೈತರಿಗೆ ಬೀಜೋಪಚಾರದ ಮಹತ್ವ ತಿಳಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆ ರಾಮದುರ್ಗದ ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆ ಅಡಿಯಲ್ಲಿ, ‘ಬಿಜೋಪಚಾರದ ಮಹತ್ವ’ ಕುರಿತು ಜೂನ್ 17ರಂದು ಗುರವಾರ ಬೆಳಗ್ಗೆ 11:30ರಿಂದ 12:30 ಗಂಟೆವರೆಗೆ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿ ನಡೆಯಲಿದ್ದು, ವಿಷಯ ತಜ್ಞರು ಬೀಜೋಪಚಾರದ ವಿಧಾನ ಮತ್ತು ಅದರಿಂದಾಗುವ ಪ್ರಯೋಜನಗಳ ಕುರಿತು ರೈತ ಬಾಂಧವರಿಗೆ ಮಾಹಿತಿ ನೀಡಲಿದ್ದು, ಉಪನ್ಯಾಸದ ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ.

ಕಾಯರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಬೀಜ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಬಿ.ಬಿ.ಪಾಟೀಲ ಅವರು ಭಾಗವಹಿಸಲಿದ್ದು, ರೈತರಿಗೆ ಬೀಜೋಪಚಾರದ ಮಾಹಿತಿ ನೀಡಲಿದ್ದಾರೆ. ಆಸಕ್ತ ರೈತರು https://meet.google.com/hqg-aggs-dmd ಈ ಲಿಂಕ್ ಬಳಸಿಕೊಂಡು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಗೂಗಲ್ ಮೀಟ್ ಆ್ಯಪ್ ಹೊಂದಿರದ ರೈತರು ತಮ್ಮ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್ ಆ್ಯಪ್‌ಗೆ ಭೇಟಿ ನೀಡಿ ಗೂಗಲ್ ಮೀಟ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಒತ್ತಿದರೆ ತರಬೇತಿ ನಡೆಯುವ ವಿಡಿಯೋ ವೇದಿಕೆಗೆ ಸೇರ್ಪಡೆ ಗೊಳ್ಳಬಹುದು.

ನೂಲಿನಂತೆ ಸೀರೆ ಬೀಜದಂತೆ ಬೆಳೆ, ತಾಯಿಯಂತೆ ಮಗು, ಬೀಜದಂತೆ ಬೆಳೆ ಎಂಬ ನಾಣ್ಣುಡಿಗಳು ಕೃಷಿಯಲ್ಲಿ ಬಿತ್ತನೆ ಬೀಜದ ಮಹತ್ವವನ್ನು ಸಾರಿ ಹೇಳುತ್ತವೆ. ಆರೋಗ್ಯವಂತ ಹಾಗೂ ರೋಗರಹಿತ ಉತ್ತಮ ಗುಣಮಟ್ಟದ ಬೀಜವನ್ನು ಬಿತ್ತುವುದರಿಂದ ಹೆಚ್ಚು ಇಳುವರಿ ಸಿಗುತ್ತದೆ. ಉತ್ತಮ ಗುಣಮಟ್ಟದ ಬಿತ್ತನೆ ಬೀಜದ ಉಪಯೋಗವು ಕೃಷಿಯನ್ನು ಲಾಭದಾಯಕವಾಗಿಸುತ್ತದೆ. ಜೊತೆಗೆ ವ್ಯವಸಾಯದಲ್ಲಿ ಯಶಸ್ಸು ಗಳಿಸಲು ಮೂಲಕಾರಣವಾಗಿದೆ.

ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ವಿವಿಧ ರೋಗ/ ಕೀಟನಾಶಕಗಳಿಂದ ಅಥವಾ ಜೈವಿಕ ಅಣುಜೀವಿಗಳಿಂದ ಉಪಚರಿಸುವುದು ಅತ್ಯಂತ ಮುಖ್ಯವಾಗಿದೆ. ಹೀಗೆ ಮಾಡುವುದರಿಂದ ಬೆಳೆಗಳಿಗೆ ಬರಬಹುದಾದ ಹಲವಾರು ರೋಗ ಮತ್ತು ಕೀಟಗಳ ಹಾವಳಿಯನ್ನು ತಪ್ಪಿಸಬಹುದು. ಇದರ ಜೊತೆಗೆ ದ್ವಿದಳ ಧಾನ್ಯದ ಬೀಜವನ್ನು ವಿವಿಧ ಜೈವಿಕ ಅಣುಜೀವಿ ಗೊಬ್ಬರದಿಂದ ಉಪಚರಿಸುವುದರಿಂದ ವಾತಾವರಣದಲ್ಲಿರುವ ಸಾರಜನಕ ಬೆಳೆಗಳಿಗೆ ದೊರಕುವಂತೆ ಮಾಡಬಹುದು. ಬೀಜೋಪಚಾರ ಮಾಡಿ ಬಿತ್ತನೆ ಮಾಡಿದ್ದೇ ಆದರೆ, ಬೆಳೆಗೆ ಹಾನಿ ಮಾಡುವ ಅನೇಕ ಕೀಟ ಹಾಗೂ ರೋಗಗಳನ್ನು ಕಡಿಮೆ ಖರ್ಚಿನಲ್ಲಿ ತಡೆಗಟ್ಟಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಎಂಬ ಆಯ್ಕೆಯ ಮೇಲೆ ಒತ್ತಬೇಕು. ಹೆಚ್ಚಿನ ಸಂಖ್ಯೆಯ ರೈತರು ಪಾಲ್ಗೊಳ್ಳುವ ಮುಲಕ ತರಬೇತಿಯ ಪ್ರಯೋಜನ ಪಡೆಯುವಂತೆ ಆಯೋಜಕರು ತಿಳಿಸಿದ್ದಾರೆ.