News

ಮಾನ್ಸೂನ್ ಧಮಾಕಾ, ಕೃಷಿಗೆ ಒತ್ತು- ಬೆಂಬಲ ಬೆಲೆಯಲ್ಲಿ ಹೆಚ್ಚಳ, ರೈತರಿಗೆ ಡಬಲ್ ಖುಷಿ

02 June, 2020 7:00 PM IST By:

ಕಳೆದ ಮೂರು ತಿಂಗಳಿಂದ ವಿಧಿಸಿದ ಲಾಕ್‌ಡೌನ್‌, ಬೆಲೆ ಕುಸಿತ, ಆದಾಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದ ದೇಶದ ರೈತರಿಗೆ ಕೇಂದ್ರ ಸರ್ಕಾರ ಒಂದರ ಮೇಲೆ ಒಂದು ಸಂತಸದ ಸುದ್ದಿ ನೀಡಿದೆ.

ಒಂದೆಡೆ ಕೇಂದ್ರ ಸರಕಾರ ಮುಂಗಾರು ಬೆಳೆಗಳಿಗೆ ಭರ್ಜರಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ. ಇನ್ನೊಂದೆಡೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಉದ್ದೇಶಕ್ಕಾಗಿ ಪಡೆದ ಗರಿಷ್ಠ 3 ಲಕ್ಷವರೆಗಿನ ಅಲ್ಪಾವಧಿ ಕೃಷಿ ಸಾಲದ ಮರುಪಾವತಿ ಅವಧಿಯನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲು ತೀರ್ಮಾನಿಸಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆ ಆರಂಭಕ್ಕೆ ಮುಂಗಾರು ಮಳೆ ಸಿಂಚನ ಮುನ್ನುಡಿ ಬರೆದರಿಂದ ರೈತರಲ್ಲಿ ಸಹಜವಾಗಿ ಮಂದಹಾಸ ಮೂಡಿದೆ.

ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ಮುಂಗಾರು ಹಂಗಾಮಿನ 14 ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು ಸೇರಿದಂತೆ ಒಟ್ಟು 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 50ರಿಂದ ಶೇ.84ರವರೆಗೂ ಹೆಚ್ಚಳ ಮಾಡಲಾಗಿದೆ.

ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಆದಾಯ ರೈತರಿಗೆ ಲಭಿಸಬೇಕು ಎಂದು 2018–19ರಲ್ಲಿ ರೂಪಿಸಿದ್ದ ನೀತಿಯನ್ನು ಮುಂದಿಟ್ಟುಕೊಂಡು ಬೆಂಬಲ ಬೆಲೆ ನಿಗದಿ ಮಾಡಲಾಗಿದೆ’ ಎಂದು  ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದರು.

ಭತ್ತದ ಬೆಂಬಲ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದರೆ, ಎಣ್ಣೆಬೀಜ, ಬೇಳೆಕಾಳು ಹಾಗೂ ಸಿರಿ ಧಾನ್ಯಗಳ ಬೆಂಬಲ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈಚೆಗೆ ಘೋಷಿಸಿದ್ದ ವಿಶೇಷ ಪ್ಯಾಕೇಜ್‌ ಜಾರಿಗೆ ರೂಪಿಸಿರುವ ನೀಲನಕ್ಷೆಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

‘ಎನ್‌ಡಿಎ 2.0’ ಸರಕಾರ ಒಂದು ವರ್ಷ ಪೂರೈಸಿದ ಬಳಿಕ ಸೋಮವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ಸಂಬಂಧ ಪ್ರಸ್ತಾಪಗಳಿಗೆ ಅನುಮೋದನೆ ದೊರೆತಿದೆ. ಅಲ್ಲದೆ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ನೆರವಾಗುವ ಹಲವು ನಿರ್ಣಯಗಳಿಗೂ ಸಂಪುಟ ಸಭೆ ಹಸಿರು ನಿಶಾನೆ ತೋರಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳ ಸಂಕಷ್ಟಕ್ಕೂ ಸರಕಾರ ಸ್ಪಂದಿಸಿದೆ. ಅವರಿಗೆ ಸುಲಭ ಸಾಲ ನೀಡಲು ‘ಪಿಎಂ ಸ್ವಾನಿಧಿ’ ಹೆಸರಿನ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಈ ಯೋಜನೆ ಜಾರಿಗೊಳ್ಳಲಿದೆ.

ಬೆಂಬಲ ಬೆಲೆ ಪಟ್ಟಿ ಪ್ರತಿ ಕ್ವಿಂಟಾಲಗಳಲ್ಲಿ

ಉತ್ಪನ್ನ- ಏರಿಕೆ- ಬೆಂಬಲ ಬೆಲೆ
ಭತ್ತ -   53  -   1868
ಹತ್ತಿ -   260  -  5515
ಜೋಳ-  275  - 5825
ರಾಗಿ -   145-   3295
ಮೆಕ್ಕೆಜೋಳ- 70-  2620
ಉದ್ದು-    300- 6000
ತೊಗರಿ- 200- 6000
ಹೆಸರು -  145-  7196
ಸೊಯೋಬಿನ್- 170-  3880
ಸೂರ್ಯಕಾಂತಿ- 235-  5885
ಶೇಂಗಾ-   185- 5275
ಗುರೆಳ್ಳು- 775-  6695
ಎಳ್ಳು-  370- 6855