ರೈತರು ಬೆಳೆದ ಬೆಳೆಗಳಿಗೆ ಅವರೇ ಬೆಲೆ ನಿಗದಿಪಡಿಸಬೇಕು. ಅವರ ಉತ್ಪನ್ನಗಳಿಗೆ ರೈತರೇ ಬ್ರ್ಯಾಂಡ್ ಆದಲ್ಲಿ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಅವರು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯದ ಸಹಯೋಗದಲ್ಲಿ ನಡೆದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಪರಿಕಲ್ಪನೆಯಡಿಯ ರೈತರ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ರೈತರನ್ನು ಕೇವಲ ಬೆಳೆ ಬೆಳೆಯುವುದಕ್ಕೆ ಮಾತ್ರವೇ ಸೀಮಿತ ವಾಗಿಡಲಾಗಿದೆ. ತಿಂಗಳುಗಟ್ಟಲೆ ಕಾಲ ರೈತ ಬೆಳೆದ ಬೆಳೆಯಿಂದ ಅರ್ಧ ಗಂಟೆಯಲ್ಲೆ ಮಧ್ಯವರ್ತಿ ಲಾಭ ಮಾಡಿಕೊಳ್ಳುತ್ತಾನೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಆತ್ಮನಿರ್ಭರ್ ಯೋಜನೆಯನ್ನು ಜಾರಿಗೊಳಿಸಿದ್ದು, ರೈತರೇ ತಾವು ಬೆಳೆದ ಉತ್ಪನ್ನಗಳನ್ನು ಸಂಸ್ಕರಿಸಿ ಉದ್ಯಮಿಗಳಾಗುವ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ರೈತರು ತಾವು ಬೆಳೆದ ಉತ್ಪನ್ನಗಳ ಬ್ರ್ಯಾಂಡಿಂಗ್, ಪ್ಯಾಕಿಂಗ್ ಮಾಡಿ ತಮ್ಮ ಕೈಬಿಟ್ಟುಹೋಗುತ್ತಿರುವ ಲಾಭವನ್ನು ಪಡೆದುಕೊಳ್ಳುವಂತಾಗಬೇಕು. ಇಲ್ಲದಿದ್ದರೆ ಮದ್ಯವರ್ತಿಗಳಿಗೆ ಹೆಚ್ಚು ಲಾಭ ಸಿಗುತ್ತದೆ. ರೈತರು ತಾವು ಬೆಳೆದ ಬೆಳೆಯನ್ನು ತಾವೇ ಸಂಸ್ಕರಿಸಿ ಮಾರಾಟ ಮಾಡಿದರೆ ಅವರ ಆದಾಯ ದ್ವಿಗುಣವಾಗುತ್ತದೆ ಎಂದರು.
ಜ. 23ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸಲಾಗುವುದು. ಸಮೀಪದ ಮುಂಟಿಪುರ ಗ್ರಾಮದ ರೈತ ರಾಜಶೇಖರ್ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಬೆಳೆದ ಬೆಳೆಯನ್ನು ವೀಕ್ಷಿಸಿ ಅವರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಚಾಮರಾಜನಗರ ಜಿಲ್ಲೆಗೆ ಅರಿಸಿನ, ಮೈಸೂರು ಬಾಳೆ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೆ ಸಾಂಬಾರು ಬೆಳೆ, ಗದಗಕ್ಕೆ ಬ್ಯಾಡಗಿ ಮೆಣಸಿನಕಾಯಿ, ತುಮಕೂರು, ರಾಮನಗರ, ಹಾಸನ ಜಿಲ್ಲೆಗಳಿಗೆ ತೆಂಗು, ಕೊಡಗಿಗೆ ಕಾಫಿ, ರಾಯಚೂರಿಗೆ ಗುಂಟೂರು ಮೆಣಸಿನಕಾಯಿ, ಶಿವಮೊಗ್ಗ ಜಿಲ್ಲೆಗೆ ಅನಾನಸ್ ಬೆಳೆ, ಬೀದರ್ ಜಿಲ್ಲೆಗೆ ಶುಂಠಿ ಬೆಳೆಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.