News

ಮಣ್ಣಿನ ಆರೋಗ್ಯ ಕಾಪಾಡಲು ರೈತರ ನಿರ್ಲಕ್ಷ್ಯ: ಡಾ.ಬದರಿ ಪ್ರಸಾದ್ ಬೇಸರ

26 July, 2021 11:34 PM IST By:
ಮಣ್ಣಿನೊಂದಿಗೆ ಮಾತುಕತೆ ಕಾರ್ಯಕ್ರಮದ ಸಂಗ್ರಹ ಚಿತ್ರ.

ಮಣ್ಣು ರೈತರ ಹೊನ್ನು’ ಎನ್ನುವ ಅರಿವಿದ್ದರೂ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದೇವೆ ಎಂದು ಗಂಗಾವತಿ ಕೃಷಿ ಮಹಾವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ. ಬದರಿ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

`ಮಣ್ಣಿನೊಂದಿಗೆ ಮಾತುಕತೆ’ ಎಂಬ ಒಂದು ಅನೌಪಚಾರಿಕ ವೇದಿಕೆ ಮೂಲಕ ರೈತರಲ್ಲಿ ಮಣ್ಣಿನ ಮಹತ್ವ, ಗುಣಮಟ್ಟ ಸುಧಾರಣೆ ಕುರಿತು ಜಾಗೃತಿ ಮೂಡಿಸುತ್ತಿರುವ ಅತ್ಯಂತ ಕ್ರಿಯಾಶೀಲ ತಜ್ಞರಾಗಿರುವ ಡಾ. ಬದರಿ ಪ್ರಸಾದ್ ಅವರು ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಕಾಡಜ್ಜಿ ಗ್ರಾಮದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ರೈತರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಈ ವೇಳೆ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳುವುದರ ಮಹತ್ವ ಕುರಿತು ಕೃಷಿಕರಿಗೆ ಮಾಹಿತಿ ನೀಡಿದ ಅವರು, ಕೃಷಿ ಭೂಮಿಗೆ ಮಿತಿ ಮೀರಿ ರಾಯಾಯನಿಕ ಗೊಬ್ಬರ ಹಾಕುವ ಜೊತೆಗೆ, ಹಾನಿಕಾರಕ ಕೀಟ ನಾಶಕ, ಕಳೆ ನಾಶಕಗಳನ್ನು ಸಿಂಪಡಿಸುವ ಮೂಲಕ ಸಜೀವ ಮಣ್ಣನ್ನು ನಿರ್ಜೀವಗೊಳಿಸುತ್ತಿದ್ದೇವೆ. ಹೀಗಾಗಿ ಕೃಷಿ ಪದ್ಧತಿಯನ್ನು ಬದಲಿಸಿಕೊಳ್ಳುವ ಮೂಲಕ ಸಾವಯವ ಕೃಷಿಯತ್ತ ಮರಳಿ, ನಿರ್ಜೀವ ಮಣ್ಣನ್ನು ಸಜೀವಗೊಳಿಸಬೇಕು. ಹಾಗೇ ಮಣ್ಣಿನೊಂದಿಗೆ ಮಾತುಕತೆ ನಡೆಸುವುದು ಒಂದು ಭಾವನಾತ್ಮಕ ಅನುಭವ ಎಂದು ಹೇಳಿದರು.

ರಾಸಾಯನಿಕಗಳು ನಿಧಾನವಾಗಿ ಮಣ್ಣನ್ನು ಸತ್ವರಹಿತವಾಗಿಸುತ್ತವೆ. ಇದರಿಂದ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಮಣ್ಣಿನ ಆರೋಗ್ಯ ನಿರ್ವಹಣೆ ಮಾಡಲು ಸಾವಯವ ಗೊಬ್ಬರಗಳು, ಜೈವಿಕಗೊಬ್ಬರ, ಹಸಿರೆಲೆ ಗೊಬ್ಬರ ಬೀಜಾಮೃತ, ಜೀವಾಮೃತ, ಗೋ ಕೃಪಾಮೃತ ಬಳಸಬೇಕು. ಇದರೊಂದಿಗೆ ರೈತ ಕುಟುಂಬಗಳು ದೇಶಿ ತಳಿ ರಾಸುಗಳ ಅಭಿವೃದ್ಧಿ, ದೇಶಿ ರಾಸುಗಳ ಸಾಕಾಣಿಕೆಗೆ ಆದ್ಯತೆ ನೀಡಬೇಕು. ಇದರೊಂದಿಗೆ ಮಣ್ಣಿನಲ್ಲಿರುವ ಕೋಟ್ಯಂತರ ಸೂಕ್ಶ್ಮಾಣು ಜೀವಿಗಳನ್ನು ರಕ್ಷಿಸಿ, ಬೆಳೆಸಿಕೊಂಡು ಮಣ್ಣಿನ ಆರೋಗ್ಯ ಸಂರಕ್ಷಣೆ ಮಾಡನೇಕು ಎಂದು ಮಾಹಿತಿ ನೀಡಿದರು.

ರೈತರಿಂದ ರೈತರಿಗೆ ಅನುಭವ ಹಂಚಿಕೆ ಆಗುವ ನಿಟ್ಟಿನಲ್ಲಿ ಯಶಸ್ವಿ ರೈತರ ತಾಕುಗಳಲ್ಲಿ (ಹೊಲ, ತೋಟಗಳಲ್ಲಿ) ಸಭೆ ಏರ್ಪಡಿಸುವ ಮೂಲಕ ಇತರೆ ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ‘ಮಣ್ಣಿನೊಂದಿಗೆ ಮಆತುಕತೆ’ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತದೆ. ಪ್ರತಿ ಸಭೆಯಲ್ಲಿ ಯಶಸ್ವಿ ರೈತರಿಗೆ ‘ಸ್ಟಾರ್ ಫಾರ್ಮರ್ ಆಫ್ ದ ಡೇ’ ಗೌರವ ನೀಡುವ ಮೂಲಕ ರೈತರನ್ನು ಅಭಿನಂದಿಸಲಾಗುತ್ತದೆ. ಅಲ್ಲದೇ `ಅನ್ನದಾತನ ಅಂಗಳದಲ್ಲಿ ಒಂದು ಗಿಡ’ ಸಿದ್ಧಾಂತದ ಮೂಲಕ ಸಭೆಯನ್ನು ನಡೆಸಿದ ರೈತರ ಹೊಲದಲ್ಲಿ ಗಿಡ ನಡೆಲಾಗುತ್ತಿದೆ. ಈ ವೇದಿಕೆ ಮೂಲಕ ರೈತರ ಅನುಭವ ಹಂಚಿಕೊಳ್ಳುವ ಜೊತೆ ಜೊತೆಗೆ, ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಪ್ರಯತ್ನವನ್ನು ಸಹ ಮಾಡಿಕೊಂಡು ಬರಲಾಗಿದೆ ಎಂದು ಡಾ. ಬದರಿ ಪ್ರಸಾದ್ ಅವರು ಮಾಹಿತಿ ನೀಡಿದರು.

ತರಬೇತಿಯಲ್ಲಿ ಹಾಜರಿದ್ದ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಅವರು ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸಾವಯವ ಕೃಷಿಕರಿದ್ದಾರೆ. ರೈತರು ಗುಂಪು ರಚನೆ ಮಾಡಿ, ಮಣ್ಣಿನೊಂದಿಗೆ ಮಾತುಕತೆ ವೇದಿಕೆಯ ಮೂಲಕ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವತ್ತ ಮುಖ ಮಾಡಬೇಕು ಎಂಬ ಆಶಯ ವ್ಯಕ್ತ ಪಡಿಸಿದರು. ಉಪ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಹೋಬಳಿ ಮಟ್ಟದಲ್ಲಿ ಮಣ್ಣಿನೊಂದಿಗೆ ಮಾತುಕತೆ ರೈತರ ಗುಂಪು ರಚಿಸಿ, ಮಣ್ಣಿನ ಆರೋಗ್ಯ ಕಾಪಾಡಲು ರೈತ ಬಾಂಧವರನ್ನು ಕೋರಿದರು.