ಕೃಷಿ ಮೇಳ ಎಂದರೆ ಸಹಜವಾಗಿ ಅಲ್ಲಿ ಜನಜಾತ್ರೆ ಇರುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ರೈತ ಬಾಂಧವರು ಅಲ್ಲಿ ಆಗಮಿಸಿರುತ್ತಾರೆ. ಹೊಸ ಹೊಸ ತಳಿಗಳು, ಬೆಳೆಗಳ, ತರಕಾರಿ, ಹಣ್ಣು, ಬಗೆಬಗೆಯ ಸೊಪ್ಪು ಹೀಗೆ ಹತ್ತು ಹಲವಾರು ರೀತಿಯಲ್ಲಿ ಅಲ್ಲಿ ಪ್ರದರ್ಶನಗೊಂಡಿರುತ್ತಾದೆ. ಕೃಷಿ ಚಟುವಟಿಕೆಗಳ ಬಗೆಗಿನ ಚರ್ಚೆಗಳಿಂದಲೇ ತುಂಬಿರುತ್ತಿದ್ದ ಕೃಷಿ ಮೇಳದಲ್ಲಿ ಈ ಬಾರಿ ಅವ್ಯಾವುದೂ ಕಾಣಸಿಗುವುದಿಲ್ಲ. ಕೊರೋದಿಂದಾಗಿ ಈ ವರ್ಷ ಅಲ್ಲಿ ಜನಜಾತ್ರೆಯಿರುವುದಿಲ್ಲ.
ಕೃಷಿ ಚಟುವಟಿಕೆಗೆ ಉತ್ತೇಜನ, ರೈತರ ಸಮಸ್ಯೆಗೆ ಪರಿಹಾರ ನೀಡುವ ಕೃಷಿ ಮೇಳ ಈ ಬಾರಿ ಸಂಪೂರ್ಣ ಡಿಜಿಟಲ್ ಮಯವಾಗಿರಲಿದೆ. ನ. 11 ರಿಂದ 13 ರವರೆಗೆ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಮೇಳ ಆಯೋಜನೆಗೊಳುತ್ತಿದ್ದು, ನಿಗದಿತ ಜನರಿಗಷ್ಟೇ ಮೇಳಕ್ಕೆ ಪ್ರವೇಶ ನೀಡಲಾಗುತ್ತಿದೆ. ಸರಳ ಮತ್ತು ವರ್ಚುವಲ್ ಆಗಿ ಮೇಳ ಆಯೋಜಿಸಲಾಗುತ್ತಿದ್ದು, ಪ್ರತಿದಿನ 200 ರೈತರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಯೂಟ್ಯೂಬ್, ಫೇಸ್ಬುಕ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆಗೆ ಅವಕಾಶವಿದೆ.
ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ನೀಡುವುದಕ್ಕಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನ.11ರಿಂದ 13ರವರೆಗೆ 'ಕೃಷಿ ಮೇಳ' ಆಯೋಜಿಸಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್. ರಾಜೇಂದ್ರ ಪ್ರಸಾದ್ ತಿಳಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,'ಕೊರೊನಾ ಇರುವುದರಿಂದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಪ್ರತ್ಯಕ್ಷ ಹಾಗೂ ಡಿಜಿಟಲ್ ಮುಖಾಂತರವೂ ಮೇಳ ಹಮ್ಮಿಕೊಳ್ಳಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಉಪ ಮಹಾನಿರ್ದೇಶಕ ಎ.ಕೆ.ಸಿಂಗ್ ಅವರು ಆನ್‍ಲೈನ್ ಮೂಲಕ ಬುಧವಾರ (ನ.11) ಬೆಳಿಗ್ಗೆ 11 ಗಂಟೆಗೆ ಮೇಳ ಉದ್ಘಾಟಿಸಲಿದ್ದಾರೆ ಎಂದರು.
‘ಕೊರೊನಾ ಕಾರಣಕ್ಕೆ ಸರಳ ಮೇಳಕ್ಕೆ ಯೋಜನೆ ರೂಪಿಸಿದ್ದು, ಮೇಳದ ವೀಕ್ಷಣೆಗೆ ಪ್ರತಿದಿನ 200 ಮಂದಿಗೆ ಮಾತ್ರ ಅವಕಾಶ ನೀಡುತ್ತೇವೆ. ಮೇಳಕ್ಕೆ 18ರಿಂದ 60 ವರ್ಷದೊಳಗಿನವರಿಗೆ ಮಾತ್ರ ಅವಕಾಶ ನೀಡಿದ್ದು, ಜಿಕೆವಿಕೆ ಪ್ರವೇಶದ್ವಾರದಿಂದ ಸಭಾಂಗಣಕ್ಕೆ ತಲುಪಲು ಸಾರಿಗೆ ವ್ಯವಸ್ಥೆ ಇರಲಿದೆ. ಮೇಳಕ್ಕೆ ಬರುವವರಿಗೆ ಮಾಸ್ಕ್ ಕಡ್ಡಾಯ' ಎಂದು ಮಾಹಿತಿ ನೀಡಿದರು.
3 ಹೊಸ ತಳಿ, 17 ತಂತ್ರಜ್ಞಾನ ಪ್ರಕಟ:
ಕೃಷಿ ಮೇಳದಲ್ಲಿ ಎಲೆ ಚುಕ್ಕೆ ಮತ್ತು ಎಲೆ ರೋಗ ನಿರೋಧಕ, ಹೆಚ್ಚು ಇಳುವರಿ ಕೊಡುವ ನೆಲಗಡಲೆ ಜಿಕೆವಿಕೆ 27, ಅಲಸಂದೆ ಕೆಸಿ 8 ಹಾಗೂ ಮೇವಿನ ಅಲಸಂದೆ ಎಂಎಸಿ 09-3 ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದರ ಜತೆಗೆ 17 ನೂತನ ಕೃಷಿ ತಾಂತ್ರಿಕತೆಯನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
10 ಜಿಲ್ಲೆಗಳ ರೈತರು ಭಾಗಿ:
ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವುದ್ಯಾಲಯ ವ್ಯಾಪ್ತಿಯ 10 ಜಿಲ್ಲೆಯ ರೈತರು ಪಾಲ್ಗೊಳ್ಳಬಹುದು. ಹೀಗೆ ಪಾಲ್ಗೊಳ್ಳುವ ರೈತರಿಗೆ ಒಂದೊಂದು ದಿನ ನಿಗದಿ ಮಾಡಲಾಗಿದೆ. ಅದರಂತೆ ನ. 11 ರಂದು ರಾಮನಾಗರ, ತುಮಕುರು ಮತ್ತು ಹಾಸನ ಜಿಲ್ಲೆಯ ರೈತರು, ನವೆಂಬರ್ 12 ರಂದು ಬೆಂಗಳೂರು ನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನರಗ ಹಾಗೂ ನ. 13 ರಂದು ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಮಗಳೂರು ಭಾಗದ ರೈತರು ಮೇಳಕ್ಕೆ ಬರಬಹುದು ಎಂದು ತಿಳಿಸಿದರು.
ಪ್ರಶಸ್ತಿಗೆ ಅರ್ಜಿ ಹೆಚ್ಚಳ:
ಕೃಷಿ ಮೇಳದ ಅಂಗವಾಗಿ ನೀಡಲಾಗುವ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳಿಗೆ ಅರ್ಜಿಗಳ ಹೆಚ್ಚಳವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಎಲ್ಲಾ ವಿಭಾಗಗಳಿಗೂ ಶೇ. 100 ಹೆಚ್ಚಿನ ಅರ್ಜಿಗಳ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಅರ್ಹ, ಪ್ರಗತಿಪರ ರೈತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯಮಟ್ಟದ ಆರು, ಜಿಲ್ಲಾಮಟ್ಟದ 10 ಹಾಗೂ ತಾಲೂಕುಮಟ್ಟದ 53 ಪ್ರಗತಿಪರ ಯುವ ರೈತ ಹಾಗೂ 41 ರೈತ ಮಹಿಳೆಯ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ರಾಜ್ಯಮಟ್ಟದ ಕೃಷಿ ಪ್ರಶಸ್ತಿಗಳು:
ರಾಜ್ಯ ಮಟ್ಟದ ಪ್ರಶಸ್ತಿಗಳಾದ ಎಚ್.ಡಿ.ದೇವೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಸಿ.ಎಂ.ನವೀನ್ ಕುಮಾರ್ (ಹಾಸನ), ಸಿ.ಬೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಎಂ.ಎನ್.ರವಿಶಂಕರ್ (ಕೋಲಾರ), ಎಂ.ಎಚ್.ಮರಿಗೌಡ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿಗೆ ಎಂ.ಆನಂದ್ (ಹೊಸಕೋಟೆ), ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಗೆ ಕೆ.ಎಂ.ರಾಮಣ್ಣ (ಕೋಲಾರ), ಕೆನರಾ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಗೆ ಎಚ್.ಕೆ.ಸುರೇಶ್ (ಶಿಡ್ಲಘಟ್ಟ), ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಕೃಷಿ ವಿಶ್ವವಿದ್ಯಾಲಯದ ಕೆ.ಶಿವರಾಮು ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಪ್ರಗತಿಪರ ರೈತರಿಗೆ ಒಟ್ಟು 17 ರೈತ ಪ್ರಶಸ್ತಿ, ರೈತ ಮಹಿಳಾ ಪ್ರಶಸ್ತಿಗಳು ಹಾಗೂ ತಾಲ್ಲೂಕು ಮಟ್ಟದ 94 ಪ್ರಶಸ್ತಿಗಳನ್ನು ಮೇಳದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ವಿಶೇಷ ಸವಲತ್ತುಗಳು:
ಜಿ.ಕೆ.ವಿ.ಕೆ. ಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಇರಲಿದೆ. ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆಯಿದೆ. ಉಚಿತ ಪ್ರವೇಶ ಹಾಗೂ ನೇರಪ್ರಸಾರ ವೀಕ್ಷಿಸಿಬಹುದು.
ಈ ವರ್ಷದ ಕೃಷಿ ಮೇಳದ ವಿಭಿನ್ನತೆಗಳು
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್‍ಬುಕ್, ಟ್ಟಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಜೂಮ್ ಸಭೆ
(ಬೆಳಿಗ್ಗೆ 09-00 ಗಂಟೆಯಿಂದ ಸಂಜೆ 05-00 ಗಂಟೆಯವರೆಗೆ) ನೇರವಾಗಿ ವೀಕ್ಷಿಸಬಹುದು
ಕೃಷಿ ಮೇಳ ವೆಬ್‍ಸೈಟ್: www.krishimela2020uasb.com
ಕೃಷಿ ವಿವಿ ವೆಬ್‍ಸೈಟ್:www.uasbangalore.edu.in
ಫೇಸ್‍ಬುಕ್:https://www.facebook.com/sis.uasb
ಜೂಮ್:https://rawe2020.in/krishimela/zoom/
ಯೂಟೂಬ್ https://www.youtube.com/channel/UCT3_lfb8uL8gXMJtckT3Bqg
ಟ್ವಿಟರ್ https://twitter.com/BangaloreUas
ಇನ್ಸಸ್ಟಾಗ್ರಾಮ್ https://www.instagram.com/uasbangalore1964/?hl=en
ವ್ಯಾಟ್ಸ್ ಅಪ್ https://wa.me/919482477812
ಸುದ್ದಿಗೋಷ್ಠಿಯಲ್ಲಿ ಸಂಶೋಧನಾ ನಿರ್ದೇಶಕ ಡಾ. ವೈ.ಜಿ.ಷಡಕ್ಷರಿ, ವಿಸ್ತರಣಾ ನಿರ್ದೇಶಕರು, ಡಾ. ಎಂ. ಬೈರೇಗೌಡ, ಪ್ರಾಧ್ಯಾಪಕರು ಹಾಗೂ ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು ಇದ್ದರು.