News

ಸರ್ಕಾರದ ಯೋಜನೆಗಳು ಕಾಗದಗಷ್ಟೇ ಸೀಮಿತವಾಗುತ್ತಿದೆಯೇ?

15 September, 2020 6:05 PM IST By:

ರೈತ ಸ್ನೇಹಿಯಾಗಬೇಕಿದ್ದ ಕೃಷಿ ಇಲಾಖೆ ಇಂದು ರೈತರ ವಿಶ್ವಾಸ ಕಳೆದುಕೊಳ್ಳುತ್ತಿದೆಯೇ? ಸರ್ಕಾರದ ಪ್ರೋತ್ಸಾಹ ಧನದಡಿ ಕೃಷಿ ಇಲಾಖೆಯಿಂದ ಸಿಗುವ ಯಂತ್ರೋಪಕರಣಗಳು, ಸುಲಭವಾಗಿ ಸಿಗುತ್ತಿಲ್ಲವೇಕೆ ಎಂಬ ಪ್ರಶ್ನೆಗಳು ಹುಟ್ಟುತ್ತಿವೆ. ರೈತರು ಯಾವುದಾದರೂ ಸಹಾಯ ಪಡೆದು ಹೊಸದಾಗಿ ಉದ್ಯಮ ಅಥವಾ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಿ ವ್ಯವಸಾಯದಲ್ಲಿ ಸುಧಾರಣೆ ತರಬೇಕೆಂದು ಬಯಸಿ ಹೋದರೆ ನಿರಾಶೆಯಿಂದ ಮರಳುವಂತಾಗಿದೆ.

ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣೆ ಯೋಜನೆ ಅಡಿ ಉಳುಮೆಯಿಂದ ಕೊಯ್ಲುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ಕೃಷಿ ಇಲಾಖೆಯಿಂದ ನೀಡಲಾಗುವುದು ಎಂದು ಹೇಳಲಾಗುತ್ತದೆ. ಆದರೆ ಕೃಷಿ ಇಲಾಖೆಯಲ್ಲಿ  ಅನುದಾನವಿಲ್ಲ, ಈಗ ಯಾವುದೇ ಕೃಷಿ ಯಂತ್ರೋಪಕರಣಗಳಿಲ್ಲ ಎಂಬ ಉತ್ತರಗಳಿಂದ ರೈತರು ನಿರಾಶರಾಗುತ್ತಿದ್ದಾರೆ. ಕೃಷಿ ಇಲಾಖೆಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ ವಿನಃ ಅವರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.

ಬಹುತೇಕ ಕೃಷಿ ಇಲಾಖೆಯ ಕಚೇರಿಗಳ ಮುಂದೆ ಯಾವ್ಯಾವ ಕೃಷಿ ಯಂತ್ರೋಪಕರಣಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಯಂತ್ರೋಪಕರಣಗಳಿಗೆ ರೈತರಿಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ, ಅದಕ್ಕೆ ಬೇಕಾಗುವ ದಾಖಲಾತಿಗಳು ಸೇರಿದಂತೆ ಯಾವುದೇ ಮಾಹಿತಿ ಲಗತ್ತಿಸಿರುವುದಿಲ್ಲ.

ಸರ್ಕಾರದಿಂದ ಎಲ್ಲಾ ಕೃಷಿ ಇಲಾಖೆಗೆ ಮಾರ್ಗಸೂಚಿ ಕಳುಹಿಸಲಾಗಿರುತ್ತದೆ. ಆದರೆ ಕೃಷಿ ಇಲಾಖೆಯ ಸೂಚನಾ ಫಲಕದಲ್ಲಾಗಲಿ ಹೊರಗಡೆಯಲ್ಲಾಗಲು ಯಾವ ಮಾಹಿತಿ ಲಗತ್ತಿಸಿರುವುದಿಲ್ಲ. ಏನಾದರೊಂದು ಹೊಸದಾಗಿ ಮಾಡಬೇಕೆಂಬ ಉತ್ಸಾಹವುಳ್ಳ ರೈತರು ಕೃಷಿ ಇಲಾಖೆಗೆ ಹೋದರೆ ನಿರಾಶೆಯಿಂದ ಮರಳುತ್ತಾರೆ ವಿನಃ ಖುಷಿಯಿಂದ ಹಿಂದಿರುಗುವುದಿಲ್ಲ.

 ಪ್ರೋತ್ಸಾಹ ಧನದಲ್ಲಿ ಸಿಗುವ  ಕೃಷಿ ಯಂತ್ರೋಪಕರಣಗಳು ಉಳ್ಳವರ ಪಾಲಾಗುತ್ತಿದೆ. ಅರ್ಜಿ ಹಾಕಿ ನಾಲ್ಕೈದು ವರ್ಷಗಳಾದರೂ ಸೌಲಭ್ಯ ಸಿಕ್ಕಿಲ್ಲ. ಹಿಂಬಾಲಕರಿಗೆ ಮಾತ್ರ ಸೌಲಭ್ಯ ಸಿಗುತ್ತದೆ ಎಂಬ ಉತ್ತರಗಳೇ ರೈತರಿಂದ ಸಿಗುತ್ತಿವೆ.

ಕೃಷಿ ಯಂತ್ರೋಪಕರಣಗಳು ಜೇಷ್ಟತೆಯ ಆಧಾರದ ಮೇಲೆ ನೀಡಲಾಗುತ್ತದೆ ಎಂಬುದು ರೈತರಿಗೂ ಗೊತ್ತು. ಆದರೆ ಯಂತ್ರೋಪಕರಣಗಳು ಹೇಗೆ ವಿತರಿಸುತ್ತಾರೆ. ಲಾಟರಿ ಮೂಲಕ ನೀಡಲಾಗುತ್ತದೆಯೋ ಅಥವಾ ಅವಶ್ಯಕತೆಯ ಆಧಾರದ ಮೇಲೆ ನೀಡಲಾಗುತ್ತದೆಯೋ ಎಂಬುದರ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡಿದರೆ ಈ ಪ್ರಶ್ನೆಗಳೇ ಏಳುವುದಿಲ್ಲ. ಇನ್ನಾದರೂ ಕೃಷಿ ಇಲಾಖೆ ರೈತರ ನೆರವಿಗೆ ಬಂದು ಸುಲಭವಾಗಿ ಕೃಷಿ ಯಂತ್ರೋಪಕರಣಗಳು ಸಿಗುವಂತೆ ಮಾಡಿದರೆ ರೈತ ತನ್ನ ನೆಮ್ಮದಿಯ ಜೀವನ ನಡೆಸಬಹುದು.