News

ಹೊಸ ಕೃಷಿ ಕಾಯ್ದೆ ವಿರೋಧಿಸಿ ಡಿ. 14ರಂದು ರೈತರ ಉಪವಾಸ ಸತ್ಯಾಗ್ರಹ

13 December, 2020 8:38 AM IST By:

ಕೃಷಿ ಕಾಯ್ದೆಗಳ ಬಗ್ಗೆ ತಮ್ಮ ನಿಲುವಿಗೆ ಅಂಟಿಕೊಂಡಿರುವ ರೈತರು ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಇದರ ಅಂಗವಾಗಿ ಡಿ.14ರಂದು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.

ನಮ್ಮ ಬೇಡಿಕೆಗಳು ಈಡೇರಿದ ಬಳಿಕವಷ್ಟೇ ಉಳಿದ ವಿಚಾರ’ ಎಂದು ರೈತ ನಾಯಕ ಕನ್ವಲ್‌ಪ್ರೀತ್ ಸಿಂಗ್ ಪನ್ನು ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಸ್ಥಾನದ ಶಹಜಹಾನ್‌ಪುರದಿಂದ ಜೈಪುರ-ದೆಹಲಿ ಹೆದ್ದಾರಿ ಮೂಲಕ ನಾಳೆ ಬೆಳಗ್ಗೆ 11 ಗಂಟೆಗೆ ಸಾವಿರಾರು ರೈತರು ತಮ್ಮ 'ದೆಹಲಿ ಚಲೋ' ಮೆರವಣಿಗೆಯನ್ನು ಪ್ರಾರಂಭಿಸಲಿದ್ದಾರೆ . ದೇಶದ ಇತರ ಭಾಗಗಳ ರೈತರು ಸಹ ಇಲ್ಲಿ ಪ್ರತಿಭಟನಾಕಾರರನ್ನು ಸೇರಿಕೊಳ್ಳಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದರು. 

ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿರುವ ರೈತರು ಸರ್ಕಾರ ಮಾತುಕತೆ ನಡೆಸಲು ಬಯಸಿದರೆ ನಾವು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಮೂರು ಕೃಷಿ ಸಂಬಂಧಿತ ಕಾಯ್ದೆಗಳ್ನು ರದ್ದು ಮಾಡುವ ಕುರಿತು ಮೊದಲು ಚರ್ಚಿಸಬೇಕು. ಇದು ಸಾಧ್ಯಾವಾಗದಿದ್ದಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಆಂದೋಲನವನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ರೈತರು ಯಾವುದೇ ಕಾರಣಕ್ಕೂ ಹಿಂದಡಿ ಇಡುವುದಿಲ್ಲ ಎಂದು ಪನ್ನು ಹೇಳಿದರು.

ಪ್ರತಿಪಕ್ಷಗಳು ರೈತರನ್ನು ಹಾದಿ ತಪ್ಪಿಸುತ್ತಿವೆ: ಕೇಂದ್ರ ಸಚಿವ ಜೋಷಿ

 ಎಪಿಎಂಸಿ ಸೇರಿದಂತೆ ಕೃಷಿ ಸಂಬಂಧಿತ ಕಾಯಿದೆಗಳಿಂದ ರೈತರಿಗೆ ತೊಂದರೆಯಾಗುವುದಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯೂ ಸ್ಥಗಿತಗೊಳ್ಳುವುದಿಲ್ಲ. ಬದಲಾಗಿ ಎಂಎಸ್‌ಪಿ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಭರವಸೆ ನೀಡಿದ್ದಾರೆ.

'ಕೃಷಿ ಸಂಬಂಧಿತವಾಗಿ ತಂದಿರುವ ಮೂರೂ ಕಾಯಿದೆಗಳು ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿವೆ. ಆದರೆ, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಮುಗ್ಧ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದಿದ್ದಾರೆ.