News

ಜಮೀನಿನ ಪಹಣಿಯ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಪಡೆಯಿರಿ

21 August, 2021 8:57 PM IST By:

ರೈತಬಾಂಧವರಿಗಿಲ್ಲದೆ ಸಂತಸದ ಸುದ್ದಿ. ಜಮೀನಿನ ಪಹಣಿಯ ಮಾಹಿತಿಯನ್ನು ಮೊಬೈಲ್ ನಲ್ಲಿಯೇ ಪಡೆದುಕೊಳ್ಳಬಹುದು. ಹೌದು. ಇದಕ್ಕಿಂತ ಮುಂಚಿತವಾಗಿ ಪಹಣಿ ಪಡೆಯಲು ರೈತರು ನಾಡಕಚೇರಿಗಳ ಮುಂದೆ ಗಂಟೆಗಟ್ಟಲೇ ಸರತಿಯಲ್ಲಿ ನಿಲ್ಲುತ್ತಿದ್ದರು. ಕೆಲವು ಸಲ ಸರ್ವರ್ ಸಮಸ್ಯೆಯಿಂದಾಗಿ ಪಹಣಿ ಪಡೆಯದೆ ವಾಪಸ್ಸು ಬರುತ್ತಿದ್ದರು. ಆದರೆ ಈಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ತಂತ್ರಾಂಶದ ಮೂಲಕ ಮೊಬೈಲ್ ನಲ್ಲಿಯೇ ಪಹಣಿಯ ಮಾಹಿತಿಯನ್ನು ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ.

ಸರ್ಕಾರ ಭೂಮಿ ತಂತ್ರಾಂಶದಲ್ಲಿ ಪಹಣಿಯ ವಿವರವನ್ನು ಸಂಗ್ರಹಿಸಿದೆ. ಆನ್ ಲೈನ್ ಮೂಲಕ ರೈತಬಾಂದವರು ಮನೆಯಿಂದಲೇ ಈ ಸೌಲಭ್ಯ ಪಡೆಯಲಿ ಎಂಬ ಉದ್ದೇಶದಿಂದ ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ನಿಮ್ಮ ಜಮೀನಿನ ಪಹಣಿ ಯಾರ ಹೆಸರಿನಲ್ಲಿದೆ, ನಿಮ್ಮ ಜಮೀನಿನ ಮೇಲಿರುವ ಸಾಲ ಸೇರಿದಂತೆ ಇನ್ನಿತರ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಪಡೆಯಬಹುದು. ಇದಕ್ಕಾಗಿ ನೀವು ಈ ಮುಂದಿನ ಲಿಂಕ್  http://www.landrecords.karnataka.gov.in ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ವೆಬ್ ಪೇಜ್ ಓಪನ್ ಆಗುತ್ತದೆ. ಆಗ ಭೂಮಿ ಲೋಗೋ ಮೇಲೆ ಕ್ಲಿಕ್ ಮಾಡಬೇಕು. ಮೇಲ್ಗಡೆ ಬಲಭಾಗದಲ್ಲಿ ನೀವು ಮಾಹಿತಿಯನ್ನು ಕನ್ನಡದಲ್ಲಿ ನೋಡಬೇಕೋ ಅತವಾ ಇಂಗ್ಲೀಷ್ ನಲ್ಲಿ ನೋಡಬೇಕೋ ಎಂಬುದನ್ನು ನಿರ್ಧರಿಸಿ ಅಲ್ಲಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ನಂತರ ಇಂಗ್ಲಿಷ್ ಭಾಷೆ ಆಯ್ಕೆ ಮಾಡಿಕೊಂಡರೆ ಫಾರ್ ಸಿಟಿಜನ್  ಸರ್ವಿಸೆಸ್ ಮೇಲೆ ಅಥವಾ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡರೆ  ನಾಗರಿಕ ಸೇವೆಗಳಿಗಾಗಿ ಮೇಲೆ ಕ್ಲಿಕ್ ಮಾಡಿದರೆ  ಆರ್ಟಿಸಿ, ರೇವಿನ್ಯೂ ಮ್ಯಾಪ್, ವೀವ್ ಆರ್ಟಿಸಿ ಇನ್ಫಾರ್ಮೆಷನ್, ಸೇರಿದಂತೆ  ಇತರ ಸೌಲಭ್ಯಗಳು ಅಲ್ಲಿ ಕಾಣುತ್ತದೆ. ಇಲ್ಲಿ ನೀವು ಆರ್.ಟಿ.ಸಿ ಮತ್ತು ಎಂ.ಆರ್ ವೀಕ್ಷಣೆ ಮೇಲೆ ಕ್ಲಿಕ್ ಮಾಡಿದರೆ ಸಾಕು. ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ಪೇಜ್ ಓಪನ್ ಆಗುತ್ತದೆ.

ನಿಮಗೆ ನೇರವಾಗಿ ಲ್ಯಾಂಡ್ ರೆಕಾರ್ಡ್ ವೆಬ್ ಓಪನ್ ಆಗಬೇಕಾದರೆ https://landrecords.karnataka.gov.in/service2/ ಮೇಲೆ ಕ್ಲಿಕ್ ಮಾಡಿದರೆ ಸಾಕು ಡೈರೆಕ್ಟ್ ಲ್ಯಾಂಡ್ ರೆಕಾರ್ಡ್ ವೆಬ್ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ, ಸರ್ವೆನಂಬರ್ ನಮೂದಿಸಿ ಮಾಹಿತಿ ಪಡೆಯಬಹುದು.

ಜಮೀನಿನ ಖಾತೆ ಬದಲಾವಣೆ, ಹಕ್ಕು ಬದಲಾವಣೆಗೆ, ಬಾಕಿ ಇರುವ ವಹಿವಾಟಿನ ವಿವರಗಳು, ವಹಿವಾಟು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಸಹ ಗಮನಿಸಬಹುದು. ಪಹಣಿ ಗಣಕೀಕೃತಗೊಂಡ ನಂತರದಿಂದ ಜಮೀನಿನ ಮೇಲೆ ಯಾವುದಾದರೂ ವಹಿವಾಟು ನಡೆದಿದ್ದರೆ ಅಂತಹ ವಹಿವಾಟುಗಳ ಸಂಪೂರ್ಣ ಮಾಹಿತಿಯನ್ನು ಸಹ ಇಲ್ಲಿ ನೋಡಬಹುದು. ಜಮೀನು ಕೃಷಿಯೇತರ ಬಳಕೆಗಾಗಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದಲ್ಲಿ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಬಹುದು ಹಾಗೂ ತಂತ್ರಾಂಶ ಮೂಲಕ ಭೂ ಪರಿವರ್ತನೆಯಾಗಿರುವ ಆದೇಶಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈಗ ರೈತರು ಮನೆಯಲ್ಲಿಯೇ ಕುಳಿತು ಪಹಣಿಗೆ ಸಂಬಂಧಿಸಿದ ಮಾಹಿತಿಯನ್ನು ನೋಡಬಹುದು.