ನೂತನ ಕೃಷಿ ಮಸೂದೆಯನ್ನು ರಾತ್ರೋರಾತ್ರಿ ತರಾತುರಿಯಲ್ಲಿ ಜಾರಿಗೆ ತಂದಿಲ್ಲ, ಈ ಸುಧಾರಿತ ಮಸೂದೆ ಬಗ್ಗೆ ಕಳೆದ 20-30 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಸ್ತ್ರೃತವಾಗಿ ಚರ್ಚೆ ನಡೆಸುತ್ತಾ ಬಂದಿವೆ. ಕೃಷಿ ತಜ್ಞರು, ಆರ್ಥಿಕ ತಜ್ಞರು ಮತ್ತು ಪ್ರಗತಿಪರ ರೈತರು ನೂತನ ಕೃಷಿ ಮಸೂದೆಗಳು ಜಾರಿಯಾಗಬೇಕು ಎಂದು ಬೇಡಿಕೆ ಸಲ್ಲಿಸಿದ್ದರಿಂದ ಜಾರಿಗೆ ತರಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಅವರು ಮಧ್ಯ ಪ್ರದೇಶದ ರೈಸನ್ ನಲ್ಲಿ ನಡೆದ 'ಕಿಸಾನ್ ಕಲ್ಯಾಣ್' ರೈತ ಸಮಾವೇಶವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಶೇಖರಣಾ ಸೌಲಭ್ಯಗಳು ಮತ್ತು ಉಗ್ರಾಣಗಳು ಬಹಳ ಮುಖ್ಯ. ರೈತ ಎಷ್ಟೇ ಪ್ರಯತ್ನ ಮಾಡಿದರೂ ಶೇಖರಣೆ ಸರಿಯಿಲ್ಲದಿದ್ದರೆ ದೊಡ್ಡ ನಷ್ಠವಾಗುತ್ತದೆ. ಈ ನಷ್ಟ ಕೇವಲ ರೈತರಿಗಷ್ಟೇ ಅಲ್ಲ, ದೇಶಕ್ಕೆ ಹಾನಿಯಾಗುತ್ತದೆ. ಇದೇ ಕಾರಣಕ್ಕಾಗಿ ನೂತನ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದರು.
ರೈತರ ಜೀವನ ಸುಧಾರಣೆಯಾಗಬೇಕು, ಅವರು ಉದ್ಧಾರವಾಗಬೇಕೆಂಬುದೊಂದೇ ನನ್ನ ಬಯಕೆ, ರೈತರು ಉದ್ಧಾರವಾಗಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಮೂಲಕ ಆಧುನಿಕತೆ ಬರಬೇಕು ಎಂಬುದೇನನ್ನ ಉದ್ದೇಶವೇ ಹೊರತು ಬೇರಾವ ಸ್ವ ಹಿತಾಸಕ್ತಿಯಿಲ್ಲ ಎಂದರು.
ಆಹಾರ ಸಂಸ್ಕರಣಾ ಕೇಂದ್ರಗಳು, ಗೋದಾಮುಗಳು, ಕೋಲ್ಡ್ ಸ್ಟೋರೆಜ್ಗಳು, ಡ್ರೈ ಸ್ಟೋರೇಜುಗಳು ಸ್ಥಾಪಿಸಬೇಕಾಗಿದೆ. ರೈತರಿಗೆ ಕಷ್ಟಕೊಡದೆ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ರೈತರನ್ನು ಹಾದಿತಪ್ಪಿಸುವ ಕೆಲಸ ಮಾಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ನೂತನ ಕೃಷಿ ಮಸೂದೆ ಬಂದು ಆರೇಳು ತಿಂಗಳುಗಳಾಗಿವೆ. ರಾಜಕೀಯ ಲಾಭಕ್ಕಾಗಿ ರೈತರ ಮೂಲಕ ಸುಳ್ಳುಗಳನ್ನು ಹೆಣೆದು ಆಟವಾಡುತ್ತಿರುವುದು ಸರಿಯಲ್ಲ ಎಂದರು.
ರೈತರು ಆತಂಕ ಪಡಬೇಕಾಗಿಲ್ಲ.ಯಾವುದೇ ಕಾರಣಕ್ಕೆ ಬೆಂಬಲ ಬೆಲೆ ರದ್ದುಪಡಿಸುವುದಿಲ್ಲ. ಎಂಎಸ್ ಪಿ ಮುಂದುವರಿಯುತ್ತದೆ. ನೂತನ ಕೃಷಿ ಮಸೂದೆಯಲ್ಲಿ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ಯನ್ನು ತೆಗೆದುಹಾಕಬೇಕೆಂದರೆ ನಾವೇಕೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಬೇಕಾಗಿತ್ತು? ಕನಿಷ್ಠ ಬೆಂಬಲ ಬೆಲೆ ಜಾರಿಯ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ. ಅದು ಮುಂದುವರಿಯುತ್ತದೆ ಎಂದರು.