ಉದ್ಯೋಗ, ಕೆಲಸ ಸೇರಿದಂತೆ ನಾನಾ ಕಾರಣಗಳಿಂದ ವಿದೇಶಗಳಿಗೆ ಹೋಗಿದ್ದ ಭಾರತೀಯರು ಕೊರೋನಾ ಲಾಕ್‍ಡೌನ್‍ನಿಂದಾಗಿ ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ತಾಯ್ನಾಡಿಗೆ ಮೇ 7 ರಿಂದ
ಕರೆತರಲು ಸರಕಾರ ಸಜ್ಜಾಗಿದೆ. ಆರೋಗ್ಯ ತಪಾಸಣೆ ಮಾಡಿ ಕೊರೋನಾ ಸೋಂಕಿತರಲ್ಲದವರನ್ನು ಮಾತ್ರ ವಿಮಾನ, ಹಡಗು ಮೂಲಕ ಕರೆತರಲಾಗುವುದು.
ಒಟ್ಟು ಏಳು ದಿನಗಳ ಕಾಲ 64 ವಿಮಾನಗಳಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಸರಕಾರ ಸಜ್ಜಾಗಿದ್ದು, ವಿಮಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು ಮೂರು ವಿಮಾನಗಳು ಬರಲಿದೆ. ಎರಡನೇ ದಿನ ಲಂಡನ್ ನಿಂದ ವಿಮಾನ ಬಂದರೆ, ಐದನೇ ದಿನ ಅಮೇರಿಕದಿಂದ ವಿಮಾನ ಬರಲಿದೆ. ಮತ್ತು ಆರನೇ ದಿನ ಸಿಂಗಾಪುರದ ಭಾರತೀಯರನ್ನು ಹೊತ್ತ ವಿಮಾನ ಬೆಂಗಳೂರಿನಲ್ಲಿ ಇಳಿಯಲಿದೆ.
ಕೇರಳ ರಾಜ್ಯಕ್ಕೆ ಅತೀ ಹೆಚ್ಚು ಅಂದರೆ 15ವಿಮಾನಗಳು ಬಂದು ಇಳಿಯಲಿದೆ. ಮಲೇಶಿಯಾದಿಂದ ಎರಡು ವಿಮಾನ ಬಿಟ್ಟರೆ ಉಳಿದೆಲ್ಲವೂ ಗಲ್ಫ್ ದೇಶಗಳಿಂದ ವಿಮಾನಗಳು ಬರಲಿದೆ. ಯುಎಇ ನಿಂದ ಮೂರು ವಿಮಾನಗಳು, ಕತಾರ್‍ನಿಂದ ಎರಡು, ಸೌದಿ ಅರೇಬಿಯಾದಿಂದ 3, ಬಹ್ರೇನ್ ನಿಂದ 2, ಕುವೈಟ್, ಮಲೇಶಿಯಾದಿಂದ 2, ಒಮಾನ್ ನಿಂದ ಒಂದು ವಿಮಾನ ಕೇರಳಕ್ಕೆ ಬಂದು ಇಳಿಯಲಿದೆ. ಕೇರಳದ ಕೊಚ್ಚಿ, ಕೋಯಿಕ್ಕೋಡ್ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ವಿಮಾನಗಳು ಬರಲಿದೆ
ತಮಿಳುನಾಡಿಗೆ ವಿದೇಶದಿಂದ 11 ವಿಮಾನಗಳು ಬಂದಿಳಿಯಲಿದೆ. ಮಹಾರಾಷ್ಟ್ರಕ್ಕೆ 7, ದಿಲ್ಲಿಗೆ 11, ತೆಲಂಗಾಣಕ್ಕೆ 7, ಗುಜರಾತ್ ಗೆ 5, ಜಮ್ಮು ಕಾಶ್ಮೀರ ಮತ್ತು ಕರ್ನಾಟಕಕ್ಕೆ ತಲಾ ಮೂರು, ಉತ್ತರ ಪ್ರದೇಶ ಮತ್ತು ಪಂಜಾಬ್ ತಲಾ ಒಂದು ವಿಮಾನಗಳು ಬಂದಿಳಿಯಲಿದೆ.
ವಿದೇಶಗಳಿಂದ ಭಾರತಕ್ಕೆ ಬರುವ ವೆಚ್ಚ ಪ್ರಯಾಣಿಕರೇ ಭರಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.