News

ವಿಶ್ವ ಪರಿಸರ ದಿನ 2021- ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ

05 June, 2021 8:34 AM IST By:
save tree

ಹಸಿರೆ ಉಸಿರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಪ್ರಪಂಚದಾದ್ಯಂತ ಪರಿಸರವನ್ನು ನಾಶಮಾಡಿ ಕಾಂಕ್ರೀಟ್ ಹಾಸಿಗೆಯನ್ನು ಹಾಕುತ್ತಿರುವುದರಿಂದ,ನಾವು ಕೆಲವೇ ವರ್ಷಗಳಲ್ಲಿ ವಿನಾಶದ ಹಾದಿಯನ್ನು ತುಳಿಯುತ್ತಿದ್ದೇವೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಪರಿಸರದಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ.

 ಇದರಿಂದ ಮನುಷ್ಯರಲ್ಲಿ ಹೃದಯ ಹಾಗೂ ಉಸಿರಾಟ ಸಂಬಂಧಿತ ಖಾಯಿಲೆ, ಕ್ಯಾನ್ಸರ್, ನರದೌರ್ಬಲ್ಯತೆ, ಅಪೌಷ್ಠಿಕತೆ, ಹುಟ್ಟು ಸಂಬಂಧಿತ ರೋಗಗಳಂತಹ ಅನೇಕ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಈಗಾಗಲೇ ಸುನಾಮಿ, ಬರ, ಪ್ರವಾಹದಂತಹಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿರುವುದರ ಜೊತೆಗೆ ಇನ್ನೂ ಅತ್ಯಂತ ದಾರುಣವಾದ ಆಮ್ಲಜನಕದ ಕೊರತೆಯನ್ನು ಕೂಡ ಅನುಭವಿಸುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ವಿಶೇಷ ಕಾಳಜಿವಹಿಸಬೇಕು.

ಪರಿಸರದ ಸಂರಕ್ಷಣೆಗೆ ಅದೆಷ್ಟು ಜಾಗೃತಿಗಳು, ಹೋರಾಟಗಳು ನಡೆಯುತ್ತಿವೆ. ಹಾಗೆಯೇ ಜೂನ್ 5ನೇ ದಿನದಂದು “ವಿಶ್ವಪರಿಸರ ದಿನಾಚರಣೆ”ಯಾಗಿ ಆಚರಿಸಲಾಗುತ್ತಿದೆ.ಪ್ರತಿ ವರ್ಷಒಂದೊಂದು ಧ್ಯೇಯವಾಕ್ಯಗಳೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ.2021 ರ ವರ್ಷವನ್ನು “ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ”ಎಂಬ ಧ್ಯೇಯ ವಾಕ್ಯದೊಂದಿಗೆಆಚರಿಸಲಾಗುತ್ತಿದೆ.

1972ರ ವಿಶ್ವ ಸಂಸ್ಥೆ ಮಹಾಸಭೆಯಲ್ಲಿ,  ಪರಿಸರ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಗಿದ್ದು, 1974 ರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಜೂನ್ 5 ರಂದು, ವಿಶ್ವ ಪರಿಸರ ದಿನಾಚರಣೆಆಚರಿಸಲಾಗುತ್ತಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬಂತೆ ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಲ್ಲಿ ಹೆಚ್ಚಿನಜನರು ಗಿಡಗಳನ್ನು ನೆಡಲು ಪ್ರಾರಂಭಿಸಿರುತ್ತಾರೆ.ಹೀಗೆ ನೆಟ್ಟ ಗಿಡಗಳಿಗೆ ನೀರು ಹಾಕುವುದು ಮತ್ತುಅದಕ್ಕಾಗಿ ನೀರಿನ ಅಭಾವ ಉಂಟಾಗುವುದನ್ನು ಸರಿದೂಗಿಸಲು ಜೂನ್ 5 ರನ್ನು ಆಯ್ಕೆ ಮಾಡಲಾಗಿದೆ.ಏಕೆಂದರೆ,ಜೂನ್ ತಿಂಗಳಿಂದ ಮಳೆ ಶುರುವಾಗಲಿದ್ದು, ನೆಟ್ಟ ಗಿಡಗಳನ್ನು ಬೆಳೆಯಲು ಸಹಾಯವಾಗುತ್ತದೆ ಎಂಬಉದ್ದೇಶದಿಂದ ಈ ದಿನವನ್ನು ಪರಿಸರ ದಿನಾಚರಣೆಗೆ ಮೀಸಲಿಡಲಾಗಿದೆ.

ಭಾರತದಜನಸಂಖ್ಯೆ2020 ರಲ್ಲಿ138 ಕೋಟಿ, ಪ್ರಪಂಚದಜನಸಂಖ್ಯೆಯಲ್ಲಿ ಶೇಕಡಾ.17.7 ರಷ್ಟುಹೊಂದಿದ್ದು, 2030 ರಲ್ಲಿ ಚೀನಾವನ್ನು ಬದಿಗಿಟ್ಟು ಜನಸಂಖ್ಯೆಯಲ್ಲಿ ಮೊದಲನೆ ಸ್ಥಾನ ಪಡೆಯಲಿದೆ.ಶೇಕಡಾ 58 ರಷ್ಟು ಭಾರತದ ಜನರು ಹಳ್ಳಿಗಳಲ್ಲಿ ಕೃಷಿ ಅಥವಾ ವ್ಯವಸಾಯವನ್ನು ಪ್ರಮುಖ ಉದ್ಯೋಗವಾಗಿ ತೊಡಗಿಸಿಕೊಂಡಿದ್ದಾರೆ. ಜನಸಂಖ್ಯೆಯ ಅಮಿತವಾದ ಬೆಳವಣಿಗೆಯಿಂದ ಜನರಿಗೆ ಅಗತ್ಯವಾದ ಗಾಳಿ, ನೀರು, ಆಹಾರ, ವಸತಿ ಮತ್ತು ಅತ್ಯಗತ್ಯ ವಸ್ತುಗಳ ಉತ್ಪಾದನೆಯಿಂದ ಪರಿಸರ ಕಲುಷಿತವಾಗುತ್ತಿದೆ. ಹಸಿರುಕ್ರಾಂತಿ ಹೆಸರಿನಲ್ಲಿಅಧಿಕ ಇಳುವರಿಯ ತಳಿಗಳು, ರಾಸಾಯನಿಕಗೊಬ್ಬರ, ಕೀಟನಾಶಕ ಬಳಕೆ ಆರಂಭಿಸಿದೆವು. ಆದರೆ ಅವಿವೇಚನೆ ಬಳಕೆಯಿಂದ ಮಣ್ಣಿನ ಫಲವತ್ತತೆ, ಭೂಸಾರ ಕಳೆದುಕೊಳ್ಳುತ್ತಿದೆ ಮತ್ತು ನೀರು, ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ನೀರು: ಎಲ್ಲಾ ಜೀವಿಗಳಿಗೂ ಶುದ್ಧವಾದ ನೀರು ಅತ್ಯಗತ್ಯವಾದುದು.ಕಾರ್ಖಾನೆಗಳಿಂದ ದೈನಂದಿನ ಚಟುವಟಿಕೆಗಳಿಗೆ, ಮನೆ-ಮಠ, ಊರುಗಳಿಂದ ರಾಸಾಯನಿಕಯುಕ್ತ ಕಲುಷಿತ ನೀರು ಜಲಾಶಯಗಳಿಗೆ, ನದಿ ಕೆರೆಗಳಿಗೆ ಸೇರಿ ಶುದ್ಧ ನೀರನ್ನು ಕಲುಷಿತಗೊಳಿಸುತ್ತಿದೆ.ಕೃಷಿಯಲ್ಲಿ, ದೈನಂದಿನ ಚಟುವಟಿಕೆಗಳಿಗೆ ಅನಗತ್ಯವಾಗಿ ನೀರಿನ ಬಳಕೆಯಿಂದ ಶುದ್ಧ ನೀರಿನ ಪ್ರಮಾಣಕಡಿಮೆಯಾಗುತ್ತಿದೆ ಮತ್ತುಅಂತರ್ಜಲ ಮಟ್ಟ ಕುಸಿಯುತ್ತಿದೆ.ಆದ್ದರಿಂದ ಪ್ರತಿಯೊಬ್ಬರು ಮಳೆ ನೀರು ಕೊಯ್ಲು, ಇಂಗು ಗುಂಡಿ, ಕೃಷಿಯಲ್ಲಿ ಹನಿ ನೀರಾವರಿ, ದೈನಂದಿನ ಕ್ರಿಯೆಯಲ್ಲಿ ನೀರಿನ ಮಿತ ಬಳಕೆ ಮಾಡಬೇಕು.ರಾಸಾಯನಿಕಯುಕ್ತ ನೀರು ಹಾಗುಚರಂಡಿ ನೀರು, ಶುದ್ಧ ನೀರಿಗೆ ಸೇರದ ಹಾಗೆ ಎಚ್ಚರವಹಿಸಬೇಕು.ಸರ್ಕಾರ, ತಮ್ಮಅನೇಕ ಯೋಜನೆಗಳಲ್ಲ್ಲಿ ನೀರಿನ ಶುದ್ಧಿಕರಣ, ಮರುಬಳಕೆ ಮಾಡಲಾಗುತ್ತಿದೆ.

ಗಾಳಿ: ಕಾರ್ಖಾನೆಗಳು, ವಾಹನಗಳ ಹೊಗೆ, ಅರಣ್ಯ ನಾಶ, ಪ್ರಾಣಿ, ಮನುಷ್ಯ ಉಸಿರಾಟದಿಂದ ಹೊರಬರುವ ಗಾಳಿ, ಮುಂತಾದ ಮಾನವನ ಚಟುವಟಿಕೆಗಳಿಂದ ನೀರಿನಹಬೆ, ಇಂಗಾಲ ಡೈಆಕ್ಸೈಡ್, ಮೀಥೇನ್, ನೈಟ್ರಸ್‌ ಆಕ್ಸೈಡ್ ನಂತಹ ಕೆಲವು ಅನಿಲಗಳ ಪ್ರಮಾಣ ಸ್ವಾಭಾವಿಕ ಮಟ್ಟಕ್ಕಿಂತ ಬಹಳಷ್ಟು ಏರಿರುವುದರಿಂದ ಭೂಮಿಯತಾಪಮಾನ ಹೆಚ್ಚಾಗಲು ಕಾರಣವಾಗಿದೆ. ಇದನ್ನು ಹಸಿರುಮನೆ ಪರಿಣಾಮ ಎನ್ನುತ್ತೇವೆ.ಅಮೇರಿಕಾದ ನಾಸಾ ಸಂಸ್ಥೆಯ ಪ್ರಕಾರ ಭೂಮಿಯ ಸರಾಸರಿತಾಪಮಾನ ಕಳೆದ ಒಂದು ಶತಮಾನದಲ್ಲಿ 0.8 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ.ಭೂಮಿಯ ತಾಪಮಾನ ಏರಿಕೆಯಿಂದಮಳೆ ಕಡಿಮೆಯಾಗಿ ನೀರಿನ ಅಪಾರ ಕೊರತೆ ಎದುರಿಸುತ್ತಿದೆ.ಮಾನವ ಬದುಕಿನ ಇತಿಹಾಸದಲ್ಲಿ 2016, 2019ರ ನಂತರ 2020 ಅತೀ ಹೆಚ್ಚಾದ ತಾಪಮಾನ ಹೊಂದಿರುವ ವರ್ಷವಾಗಿದೆ.

ಭೂಮಿ : ಭೂಮಿಯಉಷ್ಣತೆ ಹೆಚ್ಚಾಗುತ್ತಿರುವುದರಿಂದ ಹವಾಮಾನ ವೈಪರೀತ್ಯಕಾಣಿಸುತ್ತಿದೆ. ಕೆಲವು ಕಡೆತೀರ ಹೆಚ್ಚು ಬಿಸಿಲಿದ್ದರೆ, ಮತ್ತೆ ಕೆಲವು ಕಡೆತೀವ್ರ ಚಳಿ, ವಿಪರೀತ ಮಳೆಯಾಗಿ ಪ್ರವಾಹ, ದೈತ್ಯ ಬಿರುಗಾಳಿ, ಸುಂಟರಗಾಳಿ ಇವೆಲ್ಲಾ ಜಾಗತಿಕ ತಾಪಮಾನದ ಪರಿಣಾಮ. ಇದರಿಂದ ಭೂಮಿಯ ಹಿಮ ಕರಗಿ ಸಮುದ್ರ ಸೇರಿ ಸಮುದ್ರದ ಮಟ್ಟಏರಿಕೆಯಾಗಿ ನಿಧಾನವಾಗಿ ಭೂಮಿ ಸಮುದ್ರದ ಪಾಲಾಗುತ್ತಿದೆ.ಅಂತರ್ಜಲ ಅತಿಯಾದ ಬಳಕೆಯಿಂದ ಭೂಮಿಯ ಆಳದಲ್ಲಿ ಅಡಗಿರುವ ಅಪಾರ ಪ್ರಮಾಣದ ನೀರನ್ನು ಹೊರ ಹಾಕುವುದು ಸಹ ಸಮುದ್ರದ ಮಟ್ಟ ಏರಿಕೆಯಾಗಲು ಕಾರಣವಾಗಿದೆ.

ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿರುವ ಸ್ವಾಭಾವಿಕ ಬೆಳೆಗಳು ನಾಶವಾಗಿ, ತೀವ್ರವಾದ ಆಹಾರ ಕೊರತೆಯುಂಟಾಗುತ್ತಿದೆ. ಜೀವ ವೈವಿದ್ಯತೆಯಲ್ಲಿ ತೀವ್ರ ಬದಲಾವಣೆ, ಪಶುಪ್ರಾಣಿಗಳ ಬೆಳವಣಿಗೆಯಲ್ಲಿ, ಸಂತಾನೋತ್ಪತ್ತಿಯಲ್ಲಿ ಕುಂಠಿತ ಹೀಗೆ ಅನೇಕ ಜೀವಿಗಳ ಅವನತಿಯುಂಟಾದರೆ, ಇನ್ನೂ ಅನೇಕ ಕ್ರಿಮಿ ಕೀಟಗಳ ಸಂಖ್ಯೆಅಸಮಾನ್ಯ ಬೆಳವಣಿಗೆಯಾಗುತ್ತದೆ.ಈ ರೀತಿಯ ಏರುಪೇರುಗಳಿಂದ ಇದೇ ಮಾನವ ಕುಲ, ರೋಗರುಜಿನ ಮತ್ತು ಆಹಾರ ಕೊರತೆಯಿಂದ ಬಳಲಿ ಮಾನವ ಸಂಕುಲ ನಾಶದ ಹಾದಿ ಹಿಡಿದಿದೆ.

ಪಟ್ಟಣಗಳಲ್ಲಿ, ಪ್ಲಾಸ್ಟಿಕ್, ನಿರುಪಯುಕ್ತ ವಸ್ತು, ಇತ್ಯಾದಿ, ದಿನೇ ದಿನೇ ಹೆಚ್ಚಾಗಿ ಸಂಗ್ರಹಣೆಯಾಗಿ, ಭೂಮಿಯಲ್ಲಿ ಸೇರಿಕೊಂಡು ಮಣ್ಣು ಮಲಿನಗೊಳ್ಳುತ್ತಿದೆ.ಇದರಿಂದ ಹೊರಬರುವ ವಿಷಕಾರಿ ವಸ್ತುಗಳಿಂದ ಪಾದರಸ, ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದವುಗಳು ಜೀವಿ ಸಂಕುಲನ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಇವುಗಳನ್ನು ಉತ್ತಮ ರೀತಿಯ ವಿಲೇವಾರಿ ಮತ್ತು ಮರುಬಳಕೆ ಮಾಡಿ ಮನುಕುಲಕ್ಕೆ ತೊಂದರೆ ಬಾರದ ಹಾಗೆ ಕಸದಿಂದ ರಸ ಎಂಬಂತೆ ಉಪಯುಕ್ತ ವಸ್ತುಗಳನ್ನಾಗಿ ಮಾಡಲಾಗುತ್ತಿದೆ.ಇದರಿಂದ ಸ್ವಚ್ಚ ಭಾರತದ ನಿರ್ಮಾಣವಾಗುತ್ತಿದೆ.

ಹಳ್ಳಿಗಳಲ್ಲಿ ದಿನೇ ದಿನೇ ಕಾಡು ಕಡಿದು ಕಾಂಕ್ರೀಟ್‌ ರಸ್ತೆಯಾಗುತ್ತಿದೆ, ಹೊಲಗದ್ದೆ ಕೆರೆಗಳನ್ನು ಅಳಿಸಿ, ದೊಡ್ಡದೊಡ್ಡ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪಟ್ಟಣಗಳಲ್ಲಿ ಹೆಚ್ಚು ಕಾರ್ಖಾನೆಗಳು, ಕಟ್ಟಡಗಳು ನಿರ್ಮಾಣವಾಗುತ್ತಿದೆ.ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯು ಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ ಎಲ್ಲಕ್ಕೂ ಬೆಲೆ ಕಟ್ಟುವ ಕಾಲ ಬಹಳ ದೂರವಿಲ್ಲ, ಇರುವಒಂದೇ ಒಂದು ಭೂಗ್ರಹವನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯವಾಗುತ್ತದೆ.

1)            ಜನಸಂಖ್ಯೆಯಲ್ಲಿ ನಿಯಂತ್ರಣ

2)            ಕಡಿಮೆ ರಾಸಾಯನಿಕ ಬಳಕೆ

3)            ಜನರು, ಸಂಘ ಸಂಸ್ಥೆಗಳಿಂದ ಪರಿಸರ ಸಂರಕ್ಷಣೆ ಯೋಜನೆಯಲ್ಲಿ ಕೈಜೋಡಿಸುವುದು

4)            ತ್ಯಾಜ್ಯ ಸಂಸ್ಕರಣೆ, ವಿಲೇವಾರಿ

5)            ನೀರಿನ ಮಿತಬಳಕೆ

6)            ಮಳೆ ನೀರುಕೊಯ್ಲು, ಇಂಗು ಗುಂಡಿ

7)            ಸರಳ ಜೀವನ ಶೈಲಿ

8)            ಪೆಟ್ರೋಲ್, ಡೀಸೆಲ್ ಬದಲಾಗಿ ನವೀಕರಣ ಮೂಲ ಸೌರಶಕ್ತಿ, ಜೈವಿಕಇಂಧನ ಶಕ್ತಿ ಬಳಕೆ

9)            ಅರಣ್ಯೀಕರಣ

10)          ಜೀವ ವೈವಿದ್ಯತೆಗೆಆದ್ಯತೆ

11)          ಪ್ಲಾಸ್ಟಿಕ್, ಲೋಹಗಳ ಬದಲು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ

12)          ಪ್ರಾಣಿ, ಸಸ್ಯ ತ್ಯಾಜ್ಯದಿಂದ ಇಂಧನ, ಗೊಬ್ಬರತಯಾರಿಕೆ

13)          ಅಪಾಯಕಾರಿ ತ್ಯಾಜ್ಯಗಳಾದ ಇಲೆಕ್ರ್ಟಾನಿಕ್ ಉಪಕರಣ, ಗಾಜು, ಪ್ಲಾಸ್ಟಿಕ್‌ಗಳ ಜಾಗೃತಿ ವಿಲೇವಾರಿ– ತ್ಯಾಜ್ಯಗಳ ಸಂಗ್ರಹಣೆ, ವಿಂಗಡಣೆ, ವಿಲೇವಾರಿ

14)          ಕಡಿಮೆ ವಿದ್ಯುತ್ ಶಕ್ತಿಯ ಬಳಕೆ - ನವೀಕರಿಸುವ ಸೌರಶಕ್ತಿಯ ಸೋಲಾರ್ ನೀರಿನ ಹೀಟರ್, ಸೋಲಾರ್ ದೀಪಗಳ ಬಳಕೆ

15)          ಸಾಧ್ಯವಾದಲ್ಲಿ ಸಾವಯವಆಹಾರಉತ್ಪಾದನೆ ಮತ್ತು ಬಳಕೆ

16)          ಸುತ್ತಮುತ್ತಲು ಮರ ಗಿಡಗಳನ್ನು ನೆಡುವುದು.

ಈ ಎಲ್ಲಾ ಕಾರ್ಯಗಳಿಂದ ಪರಿಸರ ಸಂರಕ್ಷಣೆಗಾಗಿ ಹಸಿರುಕ್ರಾಂತಿ ಮಾಡಬೇಕಿದೆ.

ನಮ್ಮ ಹಿರಿಯರ ಮೌಢ್ಯಗಳು ಹಸಿರನ್ನು ರಕ್ಷಿಸಿದಷ್ಟು, ನಮ್ಮ ಆಧುನಿಕತೆ ಖಂಡಿತರಕ್ಷಿಸುತ್ತಿಲ್ಲ. “ಯಾವುದೋ ದೇವಿಯ ಕಾಡೆಂದೊ, ನಾಗನ ಬನವೆಂದೊ, ಭೂತದ ಮಳೆಯೆಂದೊ”ಹೇಗೋ ಕಾಡನ್ನು ರಕ್ಷಿಸುತ್ತಿದ್ದರು.ಈಗ ಒಂದು ಕಾಡಿನ ಮಾತಿರಲಿ, ಬೀದಿ ಬೀದಿಗಳಲ್ಲಿ ಮರಗಳನ್ನು ಬೆಳೆಸುವುದು ದೊಡ್ಡ ಸಾಹಸವಾಗಿದೆ.ಆದರೆ ಮಾನವನ ಆಧುನಿಕ ಚಟುವಟಿಕೆಗಳಿಂದಲೆ ಜಗತ್ತಿನ ಆರ್ಥಿಕ ಪ್ರಗತಿ ಸಾಧ್ಯಎನ್ನುವುದು ಕೂಡ ಸತ್ಯ.ಈ ಆರ್ಥಿಕ ಪ್ರಗತಿ ಮತ್ತು ಪರಿಸರ ಮಾಲಿನ್ಯದಿಂದ ಭೂಮಿಯ ರಕ್ಷಣೆ ನಡುವೆ ಒಂದು ಯುದ್ಧ ಆರಂಭವಾಗಿದೆ. ವಾಣಿಜ್ಯ ಉದ್ಯಮಗಳು, ಏರುತ್ತಿರುವ ಜನಸಂಖ್ಯೆ,ಆದುನಿಕತೆಯ ಬೇಡಿಕೆಗಳನ್ನು ಪೂರೈಸುವುದರಲ್ಲಿ ಹೆಚ್ಚು ಮುಂದಾಗಿದ್ದೇವೆ. ಆದರೆ ಈ ನಮ್ಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿಲ್ಲ. “ಕಡಿಮೆಗೊಳಿಸಿ, ಮರಳಿ ಉಪಯೋಗಿಸಿ, ಪುನರ್ ಬಳಸಿ” ಎಂಬ ಮಾತನ್ನು ಎಲ್ಲರೂ ಪಾಲಿಸಬೇಕಾಗಿದೆ. ಪರಿಸರವನ್ನು ರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದ್ದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶಕೂಡ ಈ ಪರಿಸರ ದಿನಾಚರಣೆಯದ್ದಾಗಿದೆ.

ಲೇಖನ:  ಶ್ರೀಮತಿ ಪ್ರೀತು ಡಿ. ಸಿ.,ಡಾ. ಸವಿತಾಎಸ್. ಎಂ., ಡಾ.ದಿನೇಶ. ಎಂ.ಎಸ್. ಮತ್ತು ಕು.ಚೈತ್ರಾ ಹೆಚ್, ಎಂ. ಕೃಷಿ ವಿಜ್ಞಾನಕೇಂದ್ರ, ಮಾಗಡಿ, ರಾಮನಗರ