News

ಸಿರಿಧಾನ್ಯ ಬೆಳೆಯಲು ಅಗತ್ಯ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ- ಬಿ.ಸಿ. ಪಾಟೀಲ್

03 March, 2021 10:18 PM IST By:

ರಾಜ್ಯದಲ್ಲಿ ರೈತರು ಸಿರಿಧಾನ್ಯ ಬೆಳೆಯಲು ಅಗತ್ಯ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಅವರು ನಗರದ ಡಾ.ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೃಷಿಭವನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸಿರಿಧಾನ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಲು ಸಿರಿಧಾನ್ಯ ಬೆಳೆಯುವ ರೈತರಿಗೆ ಎಕರೆಗೆ ೧೦ ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿದ್ದು, ರೈತರು ಕೃಷಿ ಜತೆಗೆ ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಿರಿಧಾನ್ಯಗಳು ಪೌಷ್ಠಿಕ ಹಾಗೂ ರೋಗನಿರೋಧ ಶಕ್ತಿಯನ್ನು ಹೊಂದಿರುವಂತಹ ಆಹಾರ. ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡದ ಜೀವನದಿಂದಾಗಿ ಜನಸಾಮಾನ್ಯರಲ್ಲಿ ಮಧುಮೇಹ, ರಕ್ತದೊತ್ತಡದಂತಹ ರೋಗಗಳಿಗೆ ತುತ್ತಾಗಬೇಕಾಗಿದೆ. ಈ ರೋಗಗಳಿಂದ ಪಾರಾಗಲು ಆಹಾರದಲ್ಲಿ ಸಿರಿಧಾನ್ಯಗಳನ್ನು ಬಳಸುವುದು ಒಳಿತು ಎಂದರು.
ರಾಜ್ಯದಲ್ಲಿ 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 64 ಸಾವಿರ ಮೆಟ್ರಿಕ್ ಟನ್ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಸಿರಿಧಾನ್ಯ ಹಾಗೂ ಪೌಷ್ಠಿಕ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದರು.
ರಾಜ್ಯದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ಶಾಸಕ ಜೋತಿಗಣೇಶ್, ಜಿಲ್ಲಾಧಿಕಾರಿ ಡಾ. ವೈ.ಎಸ್. ಪಾಟೀಲ್, ಜಿ.ಪಂ. ಸಿಇಓ ಗಂಗಾಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.