ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆ ನಡೆಸಲು ರಾಜ್ಯದ ಎಲ್ಲೆಡೆ ಪ್ರೋತ್ಸಾಹ ನೀಡಲಾಗುವುದು’ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ಕೋಲಾರ ಜಿಲ್ಲೆಯ ನಗರದ ಪಾರಾಂಡಹಳ್ಳಿಯಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಒಳಾಂಗಣ ಮೀನು ಉತ್ಪಾದನೆ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಸಹಜವಾಗಿ ಮೀನುಗಾರಿಕೆಗೆ ಪ್ರೋತ್ಸಾಹ ಸಿಗುತ್ತಿದೆ. ಇದರೊಂದಿಗೆ ಒಳನಾಡಿನಲ್ಲಿ ಸಹ ಮೀನುಗಾರಿಕೆ ನಡೆಯಬೇಕು. ಈ ದಿಸೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪ್ರೋತ್ಸಾಹ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೀನುಗಾರಿಕೆ ಸಹಕಾರ ಸಂಘಗಳಿಗೆ ಮುನ್ನೂರು ಹೆಕ್ಟೇರ್ ಅಥವ ಮೂರು ಕೆರೆಗಳನ್ನು ಮೀನು ಹಿಡಿಯಲು ನೀಡಲಾಗುವುದು. ಗ್ರಾಮ ಪಂಚಾಯಿತಿ ಕೆರೆ, ಜಿಲ್ಲಾ ಪಂಚಾಯಿತಿ ಮತ್ತು ಇತರ ಇಲಾಖೆಗಳಿಗೆ ಸೇರಿದ ಕೆರೆಗಳು ಇವೆ. ನಲವತ್ತು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಇರುವ ಕೆರೆಗಳನ್ನು ಅರ್ಹ ಮೀನುಗಾರಿಕೆ ಸಹಕಾರ ಸಂಘಕ್ಕೆ ನೀಡಲಾಗುವುದು. ಉದ್ಯೋಗ ಕಲ್ಪಿಸುವ ಮೀನುಗಾರಿಕೆಗೆ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಸಚಿವರು ಹೇಳಿದರು.
ಡೀಸಲ್ ಮತ್ತು ಸೀಮೆಎಣ್ಣೆ ಬೆಲೆ ಏರಿಕೆಯಿಂದ ಮೀನುಗಾರಿಕೆಗೆ ಏನೂ ತೊಂದರೆಯಾಗಿಲ್ಲ. ಆದರೆ ಸಬ್ಸಿಡಿ ಬಿಡುಗಡೆಯಲ್ಲಿ ಗೊಂದಲ ಉಂಟಾಗಿದೆ. ಪ್ರಧಾನ ಮಂತ್ರಿಯವರು ಹೊಗೆ ರಹಿತ ರಾಷ್ಟ್ರವನ್ನು ರೂಪಿಸಲು ಯೋಜನೆ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೀಮೆಎಣ್ಣೆ ಉಪಯೋಗ ನಿಲ್ಲಬಹುದು. ಅಂತಹ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಏನು ಮಾಡಬೇಕು ಎಂಬುದನ್ನು ಯೋಚಿಸಬೇಕಾಗಿದೆ. ಸಂಬಂಧಪಟ್ಟ ಕಂಪನಿಗಳ ಪ್ರತಿನಿಧಿಗಳನ್ನು ಕರೆದು ಮಾತನಾಡುತ್ತೇನೆ ಎಂದು ಅಂಗಾರ ತಿಳಿಸಿದರು.
ವಿಭಾಗೀಯ ಅಧಿಕಾರಿ ಚಿಕ್ಕವೀರ ನಾಯಕ್, ಜಿಲ್ಲಾ ನಿರ್ದೇಶಕ ಡಾ.ಅನಂತ, ಅಮರೇಶ್, ಬಾಲಾಜಿ, ಪ್ರಸನ್ನ, ಜಗನ್ ಇದ್ದರು.