ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ. ಲಾಕ್ಡೌನ್ ನಿಂದಾಗಿ ಬೆಲೆ ಏರಿಕೆ, ಅತೀವೃಷ್ಟಿಯಿಂದ ಹಾನಿ ಹೀಗೆ ಹತ್ತು ಹಲವಾರು ಏಳುಬೀಳುಗಳ ಮಧ್ಯೆ ನೊಂದು ಬೆಂದ ಜನತೆಗೆ ಈಗ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯದ ಎಲ್ಲಾ ವಿದ್ಯುತ್ ಕಂಪನಿಗಳ ವಿದ್ಯುತ್ ದರವನ್ನು ಸರಾಸರಿ ಶೇ 5.4 ರಂತೆ, ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ನ.1 ರಿಂದಲೇ ಅನ್ವಯವಾಗಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಆರ್‌ಇಸಿ) ಎಲ್ಲ ಎಸ್ಕಾಂಗಳು, ಮಂಗಳೂರು ವಿಶೇಷ ಆರ್ಥಿಕ ವಲಯ, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಯ ವಿಶೇಷ ಆರ್ಥಿಕ ವಲಯಗಳ ಗ್ರಾಹಕರಿಗೂ ಅನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆದಾರರು ಈವರೆಗೆ 30 ಯೂನಿಟ್‌ಗಳಿಗೆ 3.75 ಪಾವತಿಸುತ್ತಿದ್ದು, ಇನ್ನು ಮುಂದೆ ಪ್ರತಿ ಯೂನಿಟ್‌ಗೆ 4 ಪಾವತಿಸಬೇಕಾಗುತ್ತದೆ. ಅದೇ ರೀತಿ ಈ ಹಿಂದೆ ತಿಂಗಳಿಗೆ 100 ಯೂನಿಟ್‌ಗಳಷ್ಟು ವಿದ್ಯುತ್ ಬಳಸುತ್ತಿದ್ದವರು ಪ್ರತಿ ಯೂನಿಟ್‌ಗೆ 5.20 ಪಾವತಿಸಬೇಕಾಗುತ್ತಿತ್ತು. ಇನ್ನು ಮುಂದೆ ಪ್ರತಿ ಯುನಿಟ್‌ಗೆ 5.45 ಪಾತಿಸಬೇಕು.
ಇತರ ಎಸ್ಕಾಂಗಳಲ್ಲಿ ಗ್ರಾಹಕರು 30 ಯೂನಿಟ್‌ಗಳವರೆಗೆ ಪ್ರತಿ ಯುನಿಟ್‌ಗೆ 3.70 ಪಾವತಿಸುತ್ತಿದ್ದವರು, ಇನ್ನು ಮುಂದೆ 3.95 ಪಾವತಿಸಬೇಕು.
ಗೃಹ ಬಳಕೆಯಡಿ ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಇತರ ಪೌರಸಂಸ್ಥೆಗಳಲ್ಲಿ ಸರಕಾರಿ/ಧರ್ಮಾರ್ಥ ಸಂಸ್ಥೆಗಳು ನಡೆಸುವ ವಿದ್ಯಾಸಂಸ್ಥೆ/ಆಸ್ಪತ್ರೆಗಳಿಗೆ ಪ್ರತಿ ವಿದ್ಯುತ್ ಯೂನಿಟ್‌ಗೆ 25 ಪೈಸೆ ಹೆಚ್ಚಿಸಲಾಗಿದೆ. ಮಾಸಿಕ ವಿದ್ಯುತ್ ಬಳಕೆಯಡಿ 30 ಯೂನಿಟ್‌ವರೆಗೆ ದರವನ್ನು 3.75 ರೂ.ನಿಂದ 4 ರೂ., 31-100ರ ವರೆಗಿನ ಯೂನಿಟ್‌ಗೆ 5.20 ರೂ.ನಿಂದ 5.45 ರೂ.ಗೆ, 101-200 ಯೂನಿಟ್‌ವರೆಗೆ 6.75 ರೂ.ನಿಂದ 7 ರೂ.ಗೆ ಹಾಗೂ 200 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‌ಗೆ ವಿಧಿಸುತ್ತಿರುವ ದರ 7.80ರಿಂದ 8.05 ರೂ.ಗೆ ಏರಿಸಲಾಗಿದೆ.
ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಗೃಹ ಬಳಕೆದಾರರಿಗೆ ಮೊದಲ 30 ಯೂನಿಟ್‌ವರೆಗಿನ ದರ 3.65 ರೂ.ನಿಂದ 3.90ಕ್ಕೆ ಏರಿಸಲಾಗಿದೆ. 31-100 ಯೂನಿಟ್‌ವರೆಗೆ 4.90 ರೂ.ನಿಂದ 5.15 ರೂ., 101-200 ಯೂನಿಟ್‌ವರೆಗೆ 6.45 ರೂ.ನಿಂದ 6.70 ಹಾಗೂ 200 ಮೇಲ್ಪಟ್ಟ ಬಳಕೆಗೆ 7.30 ರೂ.ನಿಂದ 7.55 ರೂ.ಗೆ ಏರಿಸಲಾಗಿದೆ.
ಬೆಸ್ಕಾಂ ಹೊರತುಪಡಿಸಿ ಉಳಿದ ಎಸ್ಕಾಂಗಳ ನಗರಪಾಲಿಕೆ/ ಪೌರ ಸಂಸ್ಥೆಗಳ ಗೃಹ ಬಳಕೆಯ ಮೊದಲ 30 ಯೂನಿಟ್‌ವರೆಗೆ 3.70 ರೂ.ನಿಂದ 3.95 ರೂ.ಗೆ ಏರಿಸಲಾಗಿದೆ. 31-100 ಯೂನಿಟ್‌ವರೆಗೆ 5.20 ರೂ.ನಿಂದ 5.45 ರೂ.ಗೆ, 101-200 ಯೂನಿಟ್‌ಗೆ 6.75 ರೂ.ನಿಂದ 7 ರೂ. ಹಾಗೂ 200 ಮೇಲ್ಪಟ್ಟ ಯೂನಿಟ್ ಬಳಕೆಗೆ 7.80 ರೂ.ನಿಂದ 8.05ಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಈ ದರಗಳು ಸ್ಲಾಬ್‌ವಾರು ಕ್ರಮವಾಗಿ 3.60 ರೂ.ನಿಂದ 3.85 ರೂ.ಗೆ, 4.90 ರೂ.ನಿಂದ 5.15 ರೂ.ಗೆ, 6.45 ರೂ.ನಿಂದ 6.70 ರೂ.ಗೆ ಹಾಗೂ 7.30 ರೂ.ನಿಂದ 7.55 ರೂ.ಗೆ ಹೆಚ್ಚಿಸಲಾಗಿದೆ.
ಗ್ರಾಹಕರ ಮೇಲಾಗುವ ಹೊರೆ ಎಷ್ಟು?
ಯಾವುದೇ ಒಂದು ಮನೆಯಲ್ಲಿ ತಿಂಗಳಿಗೆ 100 ಯೂನಿಟ್ ಬಳಸುತ್ತಿದ್ದರೆ ಈ ಹಿಂದೆ ಅವರಿಗೆ 700 ರಿಂದ 800 ಬಿಲ್ ಬರುತ್ತಿತ್ತು. ಇನ್ನು ಮುಂದೆ ಅದು 900 ರಿಂದ 1,100 ಆಗಬಹುದು. ಇದು ಆಯಾ ಗ್ರಾಹಕರ ಮೇಲೆ ವಿಧಿಸಲಾಗುವ ನಿಶ್ಚಿತ ದರಕ್ಕೆ ಅನುಗುಣವಾಗಿ ಬಿಲ್ ಪ್ರಮಾಣವೂ ವ್ಯತ್ಯಾಸವಾಗುತ್ತದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ದರ ಹೆಚ್ಚಳಕ್ಕೆ ಕಾರಣ:
ರಾಜ್ಯದ ಉಷ್ಣ ಸ್ಥಾವರದ ವಿದ್ಯುತ್ ಮ ತ್ತು ನವೀಕರಿಸಬಹುದಾದ ಇಂಧನ ಮೂಲದ ವಿದ್ಯುತ್ ಖರೀದಿ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಳ. ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಬಂಡವಾಳ ವೆಚ್ಚಕ್ಕಾಗಿ ಪಡೆಯುವ ಸಾಲದ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳ ಕಾರಣ ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿಗದಿತ ವೆಚ್ಚಗಳ ಪಾವತಿ, ಸಿಬ್ಬಂದಿಗೆ ವೇತನ ಪರಿಷ್ಕರಣೆ,ನಿರ್ವಹಣೆ, ಮೇಲ್ವಿಚಾರಣೆ ವೆಚ್ಚ, ಬಂಡವಾಳ ವೆಚ್ಚ ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಸಾಲಗಳ ಮೇಲಿ ಬಡ್ಡಿಯಿಂದಾಗಿ ದರ ಹೆಚ್ಚಳವಾಗುತ್ತಿದೆ ಎನ್ನಲಾಗುತ್ತಿದೆ.