News

ಮನೆಯಲ್ಲೇ ಕುಂಡಗಳಲ್ಲಿ ಡ್ರಾಗನ್ ಹಣ್ಣು ಬೆಳೆಯುವುದು ಎಷ್ಟು ಸುಲಭ ಗೊತ್ತಾ?

20 August, 2021 10:58 AM IST By:
ತಾರಸಿ ತೋಟದಲ್ಲಿ ಬೆಳೆಸಿರುವ ಡ್ರಾಗನ್ ಗಿಡದೊಂದಿಗೆ ಇಂದಿರಾ ಅಶೋಕ್.

ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’ ವಿಟಮಿನ್‌ಗಳನ್ನು ಹೊಂದಿ ಸಮೃದ್ಧವಾಗಿರುವ ಈ ಹಣ್ಣು ತಿನ್ನಲು ಕುಡ ರುಚಿಯಾಗಿರುತ್ತದೆ. ಆದರೆ ಇದನ್ನು ಕೊಂಡುಕೊಳ್ಳುವುದೇ ಕಷ್ಟ. ಆನ್‌ಲೈನ್ ಮಾರುಕಟ್ಟೆಯಲ್ಲಿ ಒಂದು ಹಣ್ಣಿಗೆ 80ರಿಂದ 130 ರೂ. ಬೆಲೆ ಇದೆ. ಇನ್ನು ಒಂದು ಕೆ.ಜಿ ಹಣ್ಣು ಬೇಕೆಂದರೆ ಕನಿಷ್ಠ 200 ರೂ. ಕೊಡಬೇಕು. ಅದರಲ್ಲೂ ಹೆಚ್ಚು ರುಚಿಯಾಗಿರುವ ಕೆಂಪು ತಿರುಳಿನ ಡ್ರಾಗನ್ ಹಣ್ಣಿನ ಬೆಲೆ ಇನ್ನೂ ಹೆಚ್ಚು. ಹೀಗಿರುವಾಗ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಈ ದುಬಾರಿ ಹಣ್ಣನ್ನು ಕೊಂಡು ತಿನ್ನಬೇಕೆಂದರೆ ನೂರು ಬಾರಿ ಯೋಚಿಸಬೇಕು. ಆದರೆ, ಈ ಹಣ್ಣನ್ನು ನಿಮ್ಮ ಮನೆಯಲ್ಲೇ, ಹೂ ಗಿಡಗಳನ್ನು ಬೆಳೆಸುವ ಕುಂಡ ಅಥವಾ ಪಾಟ್‌ನಲ್ಲಿ ಬೆಳೆಸಿದರೆ ಹೇಗೆ? ಇದು ಸಾಧ್ಯವಿದೆ. ಬೆಂಗಳೂರಿನಲ್ಲಿ ಹಲವಾರು ಮಹಿಳೆಯರು ಪಾಟ್‌ಗಳಲ್ಲಿ ಡ್ರಾಗನ್ ಗಿಡ ಬೆಳೆಸಿ, ಹಣ್ಣುಗಳನ್ನು ಪಡೆಯುತ್ತಿದ್ದಾರೆ.

ಅತ್ಯಂತ ಕಡಿಮೆ ನೀರು ಮತ್ತು ಹೆಚ್ಚು ಬಿಸಿಲನ್ನು ಬಯಸುವುದು ಡ್ರಾಗನ್ ಗಿಡದ ಗುಣ. ಹೀಗಾಗಿ ಇದನ್ನು ಬೆಳೆಸುವುದು ತುಂಬಾ ಸುಲಭದ ಕೆಲಸ. ಈ ಕಾರಣದಿಂದಲೇ ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಡ್ರಾಗನ್ ಹಣ್ಣು ಬೆಳೆಯುತ್ತಿದ್ದಾರೆ. ಈಗ ಈ ಅತ್ಯದ್ಭುತವಾದ ಹಣ್ಣನ್ನು ಮನೆಯಲ್ಲೇ ಬೆಳೆದು ಸವಿಯುವುದು ಹೇಗೆ ಎಂಬ ಮಾಹಿತಿಯನ್ನು ‘ಕೃಷಿ ಜಾಗರಣ’ ಈ ಲೇಖನದ ಮುಲಕ ನಿಮ್ಮ ಮುಂದಿರಿಸುತ್ತಿದೆ.

ತೋಟಗಾರಿಕೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಬೆಂಗಳೂರಿನ ಇಂದಿರಾ ಅಶೋಕ್ ಅವರು ತಮ್ಮ ತಾರಸಿ ತೋಟದಲ್ಲಿ ಡ್ರಾಗನ್ ಹಣ್ಣುಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಟೆರೇಸ್ ಮೇಲೆ ಬೆಳೆಸಿರುವ ಎರಡು ಡ್ರಾಗನ್ ಗಿಡಗಳಿಂದ ಒಂದು ಸೀಸನ್‌ನಲ್ಲಿ ಬರೋಬ್ಬರಿ 20 ಹಣ್ಣುಗಳನ್ನು ಇಂದಿರಾ ಅವರು ಪಡೆಯುತ್ತಿದ್ದಾರೆ. ‘ಈ ಹಣ್ಣಿನ ಗಿಡ ಬೆಳೆಸಲು ತಾಳ್ಮೆ ಬೇಕು. ಏಕೆಂದರೆ ಸಾಮಾನ್ಯವಾಗಿ ಹೊಲದಲ್ಲಿ ಬೆಳೆಸುವ ಡ್ರಾಗನ್ ಗಿಡಗಳು ಒಂದೂವರೆ ವರ್ಷಕ್ಕೆ ಫಲ ನೀಡುತ್ತವೆ. ಇನ್ನು ತಾರಸಿ ಮೇಲೆ ಕುಂಡಗಳಲ್ಲಿ ಬೆಳೆಸುವ ಗಿಡಗಳು ಫಲ ನೀಡಲು ಕನಿಷ್ಠ ಮೂರು ವರ್ಷ ಬೇಕಾಗುತ್ತದೆ. ಕೆಲವೊಮ್ಮೆ 4 ವರ್ಷವಾದರೂ ಆಯಿತು’ ಎನ್ನುವ ಇಂದಿರಾ ಅಶೋಕ್, ಮನೆಯಲ್ಲಿ ಡ್ರಾಗನ್ ಹಣ್ಣು ಬೆಳೆಯುವುದು ಹೇಗೆ ಎಂಬ ಕುರಿತು ಮಾಹಿತಿ ಹಂಚಿಕೊAಡಿದ್ದಾರೆ.

ಆರು ಸುಲಭ ಹಂತಗಳಲ್ಲಿ ಡ್ರಾಗನ್ ಗಿಡ ಬೆಳೆಸುವಿಕೆ...

  1. ಮೊದಲು ಗಿಡ ಬೆಳೆಸಲು ಅಗತ್ಯವಿರುವ ಪಾಟ್ ಆಯ್ಕೆ ಮಾಡಿ (ಸ್ವಲ್ಪ ದೊಡ್ಡದಿರಲಿ), ಬಳಿಕ ಅದರಲ್ಲಿ ಕೆಂಪು ಮಣ್ಣು, ತೆಂಗಿನ ನಾರಿನ ಪುಡಿ, ಮರಳು ಮತ್ತು ಸಾವಯವ ಗೊಬ್ಬರ (ಕಾಂಪೋಸ್ಟ್) ತುಂಬಿ.
  2. ನೀವು ಡ್ರಾಗನ್ ಗಿಡದ ರೆಂಬೆಯನ್ನು ಕತ್ತರಿಸಿ ಸಸಿ ಮಾಡುವುದಾದರೆ ಕತ್ತರಿಸಿದ ರೆಂಬೆಯನ್ನು ನಾಲ್ಕು ದಿನ ನೆರಳಲ್ಲಿ ಒಣಗಿಸಿ.
  3. ಒಣಗಿಸಿದ ಡ್ರಾಗನ್ ಗಿಡದ ರೆಂಬೆಯನ್ನು ಪಾಟ್‌ನಲ್ಲಿ ಹಾಕಿ. ರೆಂಬೆ ಊರಿದ ಬಳಿಕ ಪಾಟ್‌ಗೆ ಸ್ವಲ್ಪ ನೀರು ಹಾಕಿ. (ಆರಂಭದಲ್ಲಿ ನರ್ಸರಿಯಿಂದ ಸಸಿ ತಂದರೆ ಉತ್ತಮ.
  4. ನಂತರ ಪಾಟ್ ಅನ್ನು ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಇರಿಸುವುದು ಅತಿ ಮುಖ್ಯ. ಹೆಚ್ಚು ಸಮಯ ಬಿಸಿಲು ಬಿದ್ದಷ್ಟೂ ಡ್ರಾಗನ್ ಗಿಡ ಉತ್ತಮವಾಗಿ ಬೆಳೆಯುತ್ತದೆ.
  5. ಈ ಗಿಡಕ್ಕೆ ಹೆಚ್ಚು ನೀರುಣಿಸುವ ಅಗತ್ಯವಿಲ್ಲ. ಪಾಟ್‌ನ ಮೇಲ್ಪದರದ ಮಣ್ಣು ಒಣಗಿದಂತೆ ಕಂಡರೂ ಒಳಗಿನ ಮಣ್ಣಿನ ತೇವಾಂಶ ಗಮನಿಸಿ, ಒಳಗಡೆಯೂ ಮಣ್ಣು ಒಣಗಿದ್ದರೆ ಮಾತ್ರ ನೀರು ಹಾಕಿ. ಅತಿಯಾಗಿ ನೀರುಣಿಸಿದರೆ ಗಿಡ ಸಾಯುತ್ತದೆ.
  6. ಗಿಡ ದೊಡ್ಡದಾದಂತೆ ಅದಕ್ಕೆ ಆಸರೆ ಬೇಕು. ಹೀಗಾಗಿ ಅದರ ಪಕ್ಕದಲ್ಲೇ ಗಟ್ಟಿಯಾಗಿರುವ ಒಂದು ಕಟ್ಟಿಗೆ ನೆಟ್ಟು, ಅದಕ್ಕೆ ಗಿಡವನ್ನು ಹಗುರವಾಗಿ ಕಟ್ಟಿ.

ಈ ಅಂಶಗಳನ್ನು ಗಮನಿಸಿ

* ಡ್ರಾಗನ್ ಹಣ್ಣಿನ ಗಿಡ ಬೆಳೆಸಲು 10-12 ಇಂಚು ಆಳ ಹಾಗೂ 15-24 ಇಂಚು ಅಗಲವಿರುವ ಕುಂಡ ಬಳಸಿ. ಹೆಚ್ಚುವರಿ ನೀರು ಹೊರ ಹೋಗಲು ಪಾಟ್‌ನಲ್ಲಿ ಎರಡು ಅಥವಾ ಮೂರು ತೂತುಗಳಿರಲಿ.

* ಪ್ಲಾಸ್ಟಿಕ್ ಅಥವಾ ಮಣ್ಣಿನ ಪಾಟ್‌ನಲ್ಲಿ ಈ ಗಿಡ ಬೆಳೆಸಬಹುದು. ಇಲ್ಲವೇ ಹಳೆಯ, ನಿರುಪಯುಕ್ತ ಡ್ರಮ್, ಸಿಂಟೆಕ್ಸುಗಳ ಕೆಳ ಭಾಗವನ್ನು ಕತ್ತರಿಸಿ, ಅದರಲ್ಲಿ ಬೆಳೆಸಬಹುದು. ದೊಡ್ಡ ಪಾಲಿಥಿಲೀನ್ ಚೀಲವೂ ಓಕೆ.

* ದೊಡ್ಡ ಪಾಟ್ ಬಳಸಿದಷ್ಟೂ ಗಿಡದ ಬೇರುಗಳು ಹರಡಿಕೊಳ್ಳಲು ಹೆಚ್ಚು ಸ್ಥಳಾವಕಾಶ ದೊರೆತು ಉತ್ತಮವಾಗಿ ಬೆಳೆಯುತ್ತದೆ.

* ಡ್ರಾಗನ್ ಗಿಡ ನೆಟ್ಟಿರುವ ಪಾಟ್ ಅನ್ನು ದಿನದಲ್ಲಿ ಕನಿಷ್ಠ 8 ಗಂಟೆಗಳ ಕಾಲ ಚೆನ್ನಾಗಿ ಬಿಸಿಲು ಬೀಳುವ ಸ್ಥಳದಲ್ಲಿ ಇರಿಸಲು ಮರೆಯಬೇಡಿ.

* ಸಸ್ಯ ಹೇನುಗಳು ಮತ್ತು ಇರುವೆಗಳು ಈ ಗಿಡವನ್ನು ಹೆಚ್ಚು ಬಾಧಿಸಲಿದ್ದು, ಇವುಗಳಿಂದ ಮುಕ್ತಿ ಪಡೆಯಲು ಸಾವಯವ ಕೀಟನಾಶಕ ಬಳಸಿ.