News

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಶೀಘ್ರ ಶಂಕು ಸ್ಥಾಪನೆ: ಪ್ರಲ್ಹಾದ ಜೋಶಿ

01 January, 2023 3:51 PM IST By: Hitesh
Early foundation stone for implementation of Mahadai Yojana: Pralhad Joshi

ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ

1. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಶೀಘ್ರ ಶಂಕು ಸ್ಥಾಪನೆ: ಪ್ರಲ್ಹಾದ ಜೋಶಿ
2. ಹೊಸ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: 81.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರಧಾನ್ಯ ವಿತರಣೆ!
3. ಹೊಸ ವರ್ಷದ ದಿನವೇ ಶಾಕ್‌: ಸಿಲಿಂಡರ್‌ ದರ 25ರೂ ಹೆಚ್ಚಳ!
4. ರಾಜ್ಯದಲ್ಲಿ ಒಣಹವೆ ಮುಂದುವರಿಕೆ
5. ನಂದಿನಿ ಮತ್ತು ಅಮುಲ್‌ ಬ್ರ್ಯಾಂಡ್‌ ವಿಲೀನಕ್ಕೆ ವಿರೋಧ
6. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಸರ್ಕಾರದಿಂದ ಅಧಿಸೂಚನೆ
7. ಆಧಾರ್‌ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು!
8. ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಣ
9. ಕಳಸಾ ಬಂಡೂರಿ ಯೋಜನೆಗೆ ಅಸ್ತು: ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ
10. ಕುವೆಂಪು ಕವಿಮನೆ ದುರಸ್ತಿಗೆ 1 ಕೋಟಿ ಅನುದಾನ
11. ಕರ್ನಾಟಕದ 865 ಗ್ರಾಮ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುಲು ನಿರ್ಣಯ: ವಿರೋಧ
12. ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಸರ್ಕಾರಿ ಗೋಶಾಲೆ: ಪ್ರಭು ಚವ್ಹಾಣ
13. ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟನೆ: ಶೀಘ್ರ ಎಥನಾಲ್ ಘಟಕ ಪ್ರಾರಂಭ   
14. ತಿರುಪತಿ ಗರ್ಭಗುಡಿ ಮುಚ್ಚುವ ಕುರಿತು ಮುಖ್ಯ ಅರ್ಚಕರಿಂದ ಸ್ಪಷ್ಟನೆ
15. ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ

---------------
Kalasa Banduri Nala Project | ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಜಲ ಆಯೋಗ ಸಮ್ಮತಿ 

----------------

ಮಹದಾಯಿ ಯೋಜನೆ ಅನುಷ್ಠಾನವನ್ನು ಶೀಘ್ರ ಮಾಡಲಾಗುವುದು. ರಾಜ್ಯದ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು, ಎರಡು ತಿಂಗಳ ಒಳಗಾಗಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ಒಪ್ಪಿಗೆ ನೀಡಿದೆ. ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಪರಿಸರ ಇಲಾಖೆಯ ಅನುಮತಿ ಅಗತ್ಯವಿಲ್ಲ. 60 ಎಕರೆ ಭೂಮಿ ಅವಶ್ಯವಿದ್ದು, ಅರಣ್ಯ ಇಲಾಖೆಯ ಒಪ್ಪಿಗೆ ಮಾತ್ರ ಬಾಕಿಯಿದೆ ಎಂದಿದ್ದಾರೆ.
-----------------

-----------------

2. ಕೇಂದ್ರದ ಹೊಸ ಸಮಗ್ರ ಆಹಾರ ಭದ್ರತಾ ಯೋಜನೆಯು ಇಂದಿನಿಂದ  ಪ್ರಾರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಯೋಜನೆಯು NFSA 2013ರ ಕಾಯ್ದೆಯಡಿ 1.35 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸಲು ಉದ್ದೇಶಿಸಲಾಗಿದೆ. ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಡುವ 81.35 ಕೋಟಿ ಜನಸಂಖ್ಯೆಯ ಶೇಕಡ 67ರಷ್ಟು ಜನರಿಗೆ ಆಹಾರ ಧಾನ್ಯ ಪೂರೈಕೆ ಆಗಲಿದೆ. ಅಲ್ಲದೇ  ಒಂದು ರಾಷ್ಟ್ರ - ಒಂದು ಬೆಲೆ - ಒಂದು ಪಡಿತರ ಯೋಜನೆ ಪೂರೈಸಲು ಹೊಸ ಕೇಂದ್ರ ವಲಯ ಯೋಜನೆಯನ್ನು ಪ್ರಾರಂಭಿಸಲು ಸಚಿವ ಸಂಪುಟ ನಿರ್ಧರಿಸಿದೆ.  
-----------------
3. ಹೊಸ ವರ್ಷದ ಪ್ರಾರಂಭದಲ್ಲಿಯೇ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್‌ಗಳ ಬೆಲೆಯಲ್ಲಿ 25 ರೂ. ಏರಿಕೆ ಮಾಡಿವೆ. ಜನವರಿ 1ರಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರುವುದು ವರದಿ ಆಗಿಲ್ಲ. ಇನ್ನು ಕಳೆದ ವರ್ಷ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಒಟ್ಟು 153 ರೂಪಾಯಿ ಹೆಚ್ಚಳವಾಗಿತ್ತು. ಇದೀಗ ವರ್ಷದ ಮೊದಲ ದಿನವೇ 25 ರೂಪಾಯಿ ಹೆಚ್ಚಳ ಮಾಡಲಾಗಿದೆ.
-----------------
4. ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಅತಿ ಕನಿಷ್ಠ ಉಷ್ಣಾಂಶ 12.6 ಡಿಗ್ರಿ ಸೆಲ್ಸಿಯಸ್‌ ಬಾಗಲಕೋಟೆಯಲ್ಲಿ ದಾಖಲಾಗಿದೆ. ಉಳಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ. ಉಳಿದಂತೆ ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
-----------------

amul

ಗುಜರಾತ್‌ನ ಅಮುಲ್‌ ಬ್ರ್ಯಾಂಡ್‌ನೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್ –ನಂದಿನಿ)ಯನ್ನು ವಿಲೀನಗೊಳಿಸುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೇರಿಗೆ ಶುಕ್ರವಾರ ಚಾಲನೆ ನೀಡಿದ್ದ ಅಮಿತ್‌ ಶಾ ಅವರು, ಗುಜರಾತ್‌ ಮತ್ತು ಕರ್ನಾಟಕದ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸುವ ಬಗ್ಗೆ ಮಾತನಾಡಿದ್ದರು. ಗುಜರಾತ್‌ನಲ್ಲಿ ಸಹಕಾರ ಒಕ್ಕೂಟದ ಅಮುಲ್‌ ಹಾಗೂ ಕರ್ನಾಟಕದ ಕೆಎಂಎಫ್‌ ಸಹ ಪ್ರಗತಿಯಲ್ಲಿದೆ. ಹೀಗಾಗಿ, ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಆದರೆ, ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
-----------------
6. ರಾಜ್ಯ ನಾಗರಿಕ ಸೇವೆಗಳಕಾಯ್ದೆ–2020ಅನ್ನು ಜಾರಿಗೊಳಿಸಿ, ಸರ್ಕಾರ ಅಧಿಸೂಚನೆ ಹೊರಡಿಸಿದೆ. ವರ್ಗಾವಣೆ ಪ್ರಕ್ರಿಯೆಯು 2023ರ ಫೆ.28ಕ್ಕೆ ಮುಗಿಯಲಿದೆ. ಶಿಕ್ಷಕರ ವರ್ಗಾವಣೆ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ಇದೀಗ ವರ್ಗಾವಣಾ ವೇಳಾ ಪಟ್ಟಿಯೂ ಬಿಡುಗಡೆಯಾಗಿದ್ದು, ಕಾಯ್ದೆ ತಿದ್ದುಪಡಿಯ ಕರಡು ಅಧಿಸೂಚನೆಗೆ ಸಲ್ಲಿಕೆಯಾದ ಪ್ರಮುಖ ಆಕ್ಷೇಪಣೆಗಳನ್ನು ಪರಿಗಣಿಸಲಾಗಿದೆ. 10ರಿಂದ 20 ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಪಡೆದ ಶಿಕ್ಷಕರ ಕೋರಿಕೆಯಂತೆ ಸೇವಾಅಂಕಗಳನ್ನು ನೀಡಲಾಗಿದೆ.
----------------
7. ಆಧಾರ್‌ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್‌ಜೋಡಣೆ ಕಡ್ಡಾಯ ಮಾಡಲಾಗಿದ್ದು, ಇದೀಗ ಕೊನೆಯ ಗಡುವು ನೀಡಲಾಗಿದೆ. 2023ರ ಮಾರ್ಚ್ 31ರ ಒಳಗೆ ಆಧಾರ್‌ಕಾರ್ಡ್‌ನೊಂದಿಗೆ ಪಾನ್‌ ಕಾರ್ಡ್‌ ಲಿಂಕ್‌ಮಾಡಿಕೊಳ್ಳಬೇಕು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಈ ಅವಧಿಯ ಒಳಗಾಗಿ ಪಾನ್‌ಕಾರ್ಡ್‌ ಲಿಂಕ್‌ಆಗದಿದ್ದರೆ, ಪಾನ್‌ಕಾರ್ಡ್‌ ನಿಷ್ಕ್ರಿಯವಾಗಲಿದೆ. ಆಧಾರ್ ಜೊತೆಗೆ ಪಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಆದರೆ, ಇಲ್ಲಿಯವರೆಗೆ  ಹಲವರು ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್‌ ಲಿಂಕ್ ಮಾಡಿಕೊಂಡಿಲ್ಲ. ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಅಲ್ಲದೇ ಆಧಾರ್‌ನೊಂದಿಗೆ ಪಾನ್‌ ಕಾರ್ಡ್‌ ಜೋಡಣೆ ಮಾಡಿಕೊಳ್ಳದಿದ್ದರೆ, ಮುಗಿದ ಬಳಿಕ ಏಪ್ರಿಲ್ 1ರಿಂದ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ ಅದಾಯ ತೆರಿಗೆ ಇಲಾಖೆ ಎಂದು ಎಚ್ಚರಿಕೆ ನೀಡಲಾಗಿದೆ.
----------------
8. ರಾಜ್ಯದಲ್ಲಿ ಚರ್ಮಗಂಟು ರೋಗ ಹತೋಟಿಯಲ್ಲಿದೆ. ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಚರ್ಮಗಂಟು ರೋಗ ಹೆಚ್ಚಳವಾಗಿದೆ. ಆದರೆ, ನಮ್ಮಲ್ಲಿ ಇಳಿಕೆ ಆಗಿದೆ ಎಂದು ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ. ಇನ್ನು ಚರ್ಮಗಂಟು ರೋಗದಿಂದ ಸಾವನ್ನಪ್ಪುವ ಜಾನುವಾರುಗಳ ಮಾಲೀಕರಿಗೆ ನಷ್ಟ ಭರಿಸಲು ಕ್ರಮವಹಿಸಲಾಗಿದೆ. ಅಲ್ಲದೇ ರೈತರಲ್ಲಿ ಈ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ. ಚರ್ಮಗಂಟು ರೋಗ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುವಂತೆ ಪಶು ವೈದ್ಯರಿಗೂ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
----------------
9. ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ. ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳುಹಿಸಿದ್ದ ಡಿಪಿಆರ್‌ಗೆ ಜಲ ಆಯೋಗದ ಅನುಮತಿ ಸಿಕ್ಕಿದೆ. ಕಳಸಾ ಬಂಡೂರು ಯೋಜನೆಗೆ ಕೇಂದ್ರ ಜಲ ಆಯೋಗ ಸಮ್ಮತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.  
----------------
10. ಕುಪ್ಪಳಿಯ ಕುವೆಂಪು ಕವಿಮನೆ, ಹೇಮಾಂಗಣ ಹಾಗೂ ಸುತ್ತಮುತ್ತಲ ಪ್ರದೇಶಗಳ ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.  ರಾಷ್ಟ್ರಕವಿ ಕುವೆಂಪು ಪ್ರಾಧಿಕಾರದಿಂದ ಕುವೆಂಪು ಅವರ ಮನೆ ದುರಸ್ತಿಗೆ ಸರ್ಕಾರ ದಿಂದ ಸಹಾಯಧನ ನೀಡುವಂತೆ ಮನವಿ ಮಾಡಲಾಗಿತ್ತು.
----------------

11.  ಕರ್ನಾಟಕ ಗಡಿಯಲ್ಲಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್‌ ಮತ್ತು ಭಾಲ್ಕಿ ವ್ಯಾಪ್ತಿಯಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಬದ್ಧತೆಯ ನಿರ್ಣಯವನ್ನು ಮಹಾರಾಷ್ಟ್ರದ ವಿಧಾನಮಂಡಲದಲ್ಲಿ ಈಚೆಗೆ ಅಂಗೀಕರಿಸಲಾಗಿದೆ. ಅಲ್ಲದೇ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೂ ಬಲ ತುಂಬುವ ಪ್ರಸ್ತಾವವನ್ನು ಇದರಲ್ಲಿ ಸೇರಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಈ ನಿರ್ಣಯವನ್ನು ಮಂಡಿಸಿದ್ದಾರೆ. ಮಹಾರಾಷ್ಟ್ರದ ಈ ನಿರ್ಣಯಕ್ಕೆ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಹಾರಾಷ್ಟ್ರದ ಈ ನಿರ್ಣಯವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
----------------
12. ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಶೀಘ್ರದಲ್ಲೇ ಸರ್ಕಾರಿ, ಗೋಶಾಲೆ ನಿರ್ಮಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಚರ್ಮಗಂಟುರೋಗ ಪೀಡಿತ ಜಾನುವಾರುಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಈ ಭಾಗದ ರೈತರು ದೇವರಿಗೆ ಹರಕೆ ಹೊತ್ತು ತಂದುಬಿಡುವ ಜಾನುವಾರುಗಳ ರಕ್ಷಣೆ ಹಾಗೂ ಯಲ್ಲಮ್ಮನ ಗುಡ್ಡದಲ್ಲಿ ನಡೆಯುವ ದನಗಳ ಜಾತ್ರೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.  
----------------
13. ಮೈಶುಗರ್‌ನಲ್ಲಿ ಮುಂದಿನ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡುವ ಮೂಲಕ  ರೈತರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶುಕ್ರವಾರ ಮಂಡ್ಯ ಜಿಲ್ಲೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಮಂಡ್ಯ ಮದ್ದೂರಿನ ಗೆಜ್ಜಲಗೆರೆ ಆವರಣದಲ್ಲಿ ಆಯೋಜಿಸಿದ್ದ  ಮೆಗಾ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ಹಾಲು ಉತ್ಪಾದನೆ ಡೈರಿ ಅಭಿವೃದ್ಧಿ ಮೂಲಕ  ಹಸಿರು ಕ್ರಾಂತಿಯ ನಂತರ ಕ್ಷೀರ  ಕ್ರಾಂತಿಯಾಗುತ್ತಿದೆ. ಕರ್ನಾಟಕ  ಕ್ಷೀರ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ನೀಡಿದೆ ಎಂದರು.
----------------
14. ತಿರುಪತಿ ತಿರುಮಲ ದೇವಾಲಯದ ಗರ್ಭಗುಡಿಯನ್ನು 6ರಿಂದ 8 ತಿಂಗಳು ಮುಚ್ಚುಲಾಗುತ್ತದೆ ಎನ್ನುವ ವರದಿಯನ್ನು ದೇಗುಲದ ಮುಖ್ಯ ಅರ್ಚಕರಾದ ವೇಣುಗೋಪಾಲ ಅವರು ತಳ್ಳಿಹಾಕಿದ್ದಾರೆ. ಗೋಪುರಕ್ಕೆ ಚಿನ್ನದ ಲೇಪನ ಕಾರ್ಯ ನಡೆದಿದ್ದರೂ, ತಿಮ್ಮಪ್ಪನ ಮೂಲ ವಿರಾಟ್ ಮೂರ್ತಿಯ ದರ್ಶನ ಎಂದಿನಂತೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
----------------
15. ಹತ್ತಿ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ  ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಜನವರಿ 4ರಂದು ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಹತ್ತಿ ಖರೀದಿ ಕೇಂದ್ರವನ್ನು ತೆರೆದು ಪ್ರತಿ ಕ್ವಿಂಟಲ್‌ಗೆ 12 ಸಾವಿರ ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
---------------- 

ತಿರುಪತಿ ಗರ್ಭಗುಡಿ ಮುಚ್ಚುವ ಕುರಿತು ಮುಖ್ಯ ಅರ್ಚಕರಿಂದ ಸ್ಪಷ್ಟನೆ