ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ, ಈ ಬಾರಿ ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ.
ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ಸರ್ಕಾರ “ಹಸಿರು ಬರ” ಎಂದು ಉಲ್ಲೇಖಿಸಿದೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ರೈತರ ಕೈಹಿಡಿದಿಲ್ಲ. ಹೀಗಾಗಿ, ಕರ್ನಾಟಕದಲ್ಲಿ ಬರ ಆವರಿಸಿದ್ದು, ಒಟ್ಟು 236 ತಾಲ್ಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ.
216 ತಾಲ್ಲೂಕುಗಳನ್ನು ಬರ ಘೋಷಿತ ತಾಲ್ಲೂಕು ಎಂದು ಘೋಷಿಸಲಾಗಿದೆ.
ದೇಶದಲ್ಲಿ ಬರ ಘೋಷಣೆ ಮಾಡಿದ ಮೊದಲ ರಾಜ್ಯ ಕರ್ನಾಟಕ
ಈ ಬಾರಿ ಮುಂಗಾರಿನಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಹೀಗಾಗಿ, ದೇಶದ ಹಲವು ರಾಜ್ಯಗಳಲ್ಲಿ ಬರ ಕಾಣಿಸಿಕೊಂಡಿದೆ.
ಅವುಗಳಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಕೇರಳ, ಉತ್ತರ ಭಾರತದ ಬಿಹಾರ, ಜಾರ್ಖಂಡ್
ಈಶಾನ್ಯ ಭಾರತದ ರಾಜ್ಯಗಳಾದ ಮಣಿಪುರ ಹಾಗೂ ಮಿಜೋರಾಂ ರಾಜ್ಯಗಳಲ್ಲಿಯೂ ಪ್ರಸಕ್ತ ಸಾಲಿನಲ್ಲಿ ಸಕಾಲಿಕ ಮಳೆಯಾಗದೆ ಸಂಕಷ್ಟ ಎದುರಾಗಿದೆ.
ಬರ ಘೋಷಿಸಿದ ಮೊದಲ ರಾಜ್ಯ
ದೇಶದ ಹಲವು ರಾಜ್ಯಗಳು ಬರವನ್ನು ಎದುರಿಸುತ್ತಿದ್ದರೂ, ಬರ ಘೋಷಣೆ ಮಾಡಿಲ್ಲ. ಬರ ಘೋಷಣೆ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಕರ್ನಾಟಕದಲ್ಲಿ ಮಾತ್ರ ಮುಂಜಾಗ್ರತೆಯಿಂದ ಬರ ಘೋಷಣೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಎರಡು ಹಂತದಲ್ಲಿ ಬರ ಘೋಷಣೆ
ರಾಜ್ಯದಲ್ಲಿ ಎರಡು ಹಂತದಲ್ಲಿ ಬರ ಘೋಷಣೆ ಮಾಡಲಾಗಿದೆ.
ಮೊದಲ ಹಂತದಲ್ಲಿ ಅಂದರೆ, 2023ರ ಆಗಸ್ಟ್ ತಿಂಗಳ ಕೊನೆಗೆ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.
ಎರಡನೇಯ ಹಂತದಲ್ಲಿ 2023ರ ಸೆಪ್ಟಂಬರ್ ಮಾಸದಲ್ಲಿಯೂ ಮಳೆಯಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ 21 ತಾಲ್ಲೂಕುಗಳನ್ನು
ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು 216 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕಗಳೆಂದು
ಘೋಷಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ - 2020ರ ಅನ್ವಯವೇ ಬರ ಘೋಷಣೆ ಮಾಡಲಾಗಿದೆ. ಬರ ನಿರ್ವಹಣೆ ಕೈಪಿಡಿಯ ಮಾರ್ಗಸೂಚಿಯ ಮಾನದಂಡಗಳ
ಅನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ, ಸಮೀಕ್ಷೆಯ ವರದಿಯ ಅನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ
ಕರ್ನಾಟಕದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ.
ಬರ ತಾಲ್ಲೂಕುಗಳ ವಿಂಗಡಣೆ
ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಬರ ಕಾಣಿಸಿಕೊಂಡಿದ್ದು, ಬರ ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ತಾಲ್ಲೂಕು
ಹಾಗೂ ಸಾಧಾರಣ ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಿಸಲಾಗಿದೆ.
ಹಸಿರು ಬರ ಎಂದರೆ ಏನು ?
ಇತ್ತೀಚಿನ ದಿನಗಳಲ್ಲಿ ಭಿನ್ನವಾದ ಹವಾಮಾನ ಇದೆ. ಹವಾಮಾನ ಬದಲಾವಣೆಯಿಂದಾಗಿ ಈ ಬಾರಿ ಮೆಮೊರೆಂಡಮ್‌ನಲ್ಲಿ
ಹಸಿರು ಬರ ಎಂದು ಉಲ್ಲೇಖಿಸಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಏನಿದು ಹಸಿರು ಬರ, ಏನಿದರ ಅರ್ಥ ?
ಕರ್ನಾಟಕದಲ್ಲಿ ಬರ ಎಂದು ಘೋಷಿಸಲಾಗಿರುವ ತಾಲ್ಲೂಕುಗಳ ಹೊರತಾಗಿಯೂ ಹಲವು ಭಾಗದಲ್ಲಿ ಸಮರ್ಪಕ ಮಳೆಯಾಗಿಲ್ಲ.
ಹೀಗಾಗಿ, ರೈತರಿಗೆ ಬೆಳೆಯೂ ಅವರ ಕೈಸೇರಿಲ್ಲ. ಈ ನಡುವೆ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿರುವುದೂ ವರದಿ ಆಗಿದೆ.
ಅಕಾಲಿಕ ಮಳೆಯು ಭೂಮಿಯಲ್ಲಿ ತೇವಾಂಶಕ್ಕೆ ಕಾರಣವಾಗಿದೆ.
ಪರಪೀಡಿತ ವೀಕ್ಷಣೆಗೆ ಬರುವ ಕೇಂದ್ರ ತಂಡದ ಸದಸ್ಯರು ಸಾಮಾನ್ಯವಾಗಿ ಉಪಗ್ರಹ (ಸ್ಯಾಟಲೇಟ್) ಚಿತ್ರಗಳನ್ನು ನೋಡುತ್ತಾರೆ.
ಈ ಸಂದರ್ಭದಲ್ಲಿ ಬರ ಪೀಡಿತ ಪ್ರದೇಶಗಳಲ್ಲಿ ತೇವಾಂಶದ ಹಸಿರು ಹೊದಿಕೆ ಕಾಣಿಸಲಿದೆ.
ಹೀಗಾಗಿ ಇವು ಬರ ಘೋಷಣೆಗೆ ಬಹುದೊಡ್ಡ ಸವಾಲಾಗಿದ್ದು, ಈಗಿನ ಪರಿಸ್ಥಿತಿಯನ್ನು ಹಸಿರು ಬರ ಎಂದು ಘೋಷಿಸಲಾಗಿದೆ ಎಂದಿದ್ದಾರೆ.
ಬರ ಸಮೀಕ್ಷೆಗೆಂದು ಕರ್ನಾಟಕಕ್ಕೆ ಆಗಮಿಸುವ ಕೇಂದ್ರದ ಅಧಿಕಾರಿಗಳಿಗೆ ವೈಜ್ಞಾನಿಕ ಮಾಹಿತಿ ನೀಡಲಾಗುವುದು.
ಈ ಕ್ರಮದಿಂದಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.