News

ಬರ ಪರಿಹಾರ : ಬೆಳಗಾವಿಯಲ್ಲಿ ಸಿಎಂ ಮಹತ್ವದ ಘೋಷಣೆ

12 December, 2023 3:50 PM IST By: Maltesh
drought relief karnataka

ರಾಜ್ಯದ ರೈತರಿಗೆ ಬರ ಪರಿಹಾರವಾಗಿ ರೂ.2,000 ಮೊದಲ ಕಂತಿನ ಬೆಳೆನಷ್ಟ ಪರಿಹಾರಧನವನ್ನು ಈ ವಾರವೇ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ಪರಿಹಾರ ಕಾರ್ಯ ಜೋರಾಗಿ ನಡೆದಿದ್ದು, ಸದ್ಯ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪರಿಣಾಮ ರೈತಾಪಿ ವರ್ಗ ಬೆಳೆ ಕಳೆದುಕೊಂಡು ಸಾಕಷ್ಟು ಸಂಕಷ್ಟದಲ್ಲಿದೆ.

ಹೀಗಾಗಿ ಅವರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಆರ್ಥಿಕ ಪರಿಹಾರವಾಗಿ 2000 ರೂಪಾಯಿಯನ್ನು ಈ ವಾರದಲ್ಲಿ ಹಣ ವರ್ಗಾವಣೆ ಪ್ರಕ್ರಿಯೆಗೆ ಚಳ್ಳಕೆರೆ ತಾಲೂಕಿನಿಂದ ಚಾಲನೆ ನೀಡಲಾಗುವುದು ಎಂದಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿ ಬರ ಪರಿಹಾರ ಕಾರ್ಯಕ್ಕಾಗಿ 18,171 ಕೋಟಿ ನೆರವನ್ನು ನೀಡುವಂತೆ ಮನವಿ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಈ ನಷ್ಟಕ್ಕೆ ಪರಿಹಾರ ನೀಡಲು ರೂ.4,663 ಕೋಟಿ ಕೇಳಿದ್ದೇವೆ. ಆ ಬಳಿಕ ಕೇಂದ್ರದ ತಂಡ ಬಂದು ಬರ ಸಮೀಕ್ಷೆ ಕೂಡ ನಡೆಸಿ ವರದಿ ಸಲ್ಲಿಸಿದೆ.

ಆದರೆ ಸರ್ಕಾರದಿಂದ ನಮ್ಮ ಯಾವುದೇ ಪತ್ರಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಸ್ಪಂದನೆ ಮಾಡಿಲ್ಲ ಹಾಗೂ ಪ್ರಧಾನಿ ಮೋದಿ ಭೇಟಿಗೂ ಅವಕಾಶ ಕಲ್ಪಿಸಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ. ಇಷ್ಟು ದಿನ ಬಿಜೆಪಿ ನಾಯಕರು ರಾಜ್ಯದಲ್ಲಿ ತಮ್ಮ‌ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಾಲು-ತುಪ್ಪದ ಹೊಳೆ ಹರಿಯುತ್ತದೆ ಎಂದು ಹಸಿ ಸುಳ್ಳುಗಳನ್ನು ಡಬಲ್‌ ಎಂಜಿನ್‌ ಸರ್ಕಾರವಿದ್ದಾಗ ಆ ಪಕ್ಷದ ನಾಯಕರು ಸುಳ್ಳುಗಳನ್ನು ಹರಿ ಬಿಟ್ಟಿದ್ದರು. ಅವರ ಆ ಸುಳ್ಳುಗಳನ್ನು ನಂಬಿ ರಾಜ್ಯದ ಜನತೆ ಬಿಜೆಪಿಯ 25 ಸದಸ್ಯರನ್ನು ಲೋಕಸಭೆಗೆ ಕಳಿಸಿಕೊಟ್ಟಿದ್ದರು ಆದರೆ ಆ ನಾಯಕರು ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ ಎಂದು ಸಿಎಂ ಕಿಡಿಕಾರಿದರು.

ರೈತರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ಅವರು ಬೆಳಗಾವಿಯ ಸುವರ್ಣಸೌಧದ ಕಚೇರಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಜಿಲ್ಲೆಯ ರೈತ ಸಂಘಟನೆಗಳ ಪ್ರತಿನಿಧಿಗಳು ಇಂದು ಕೃಷಿ ಸಚಿವರನ್ನು ಭೇಟಿ ಮಾಡು ತಮ್ಮ  ಅಹವಾಲು‌ಗಳನ್ನು ನೀಡಿದರು, ಈ ಸಂದರ್ಭದಲ್ಲಿ ಅವರುಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಕಾನೂನಿನ ಪರಿಮಿತಿ‌ ಹಾಗೂ ಸಂಪನ್ಮೂಲಗಳ ಲಭ್ಯತೆ ಆಧಾರದ ಮೇಲೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಸಚಿವರು ಭರವಸೆ ನೀಡಿದರು.

ಅಷ್ಟೇ ಅಲ್ಲದೆ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಕಾಣಿಸಿಕೊಂಡ ಹಿನ್ನೆಲೆ ಸಾಲ ಮರುಪಾವತಿಗೆ ರೈತರ ಮೇಲೆ ಒತ್ತಡ ಹೇರದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ನಿರ್ದೇಶನ‌ ನೀಡುವಂತೆ ಮುಖ್ಯ ಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.