News

ಠೇವಣಿ ಹಣ ಹಿಂತಿರುಗಿಸದ ಕೋ ಆಪರೇಟಿವ್ ಸೊಸೈಟಿಗೆ 25,000 ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

09 December, 2022 3:41 PM IST By: Kalmesh T
District Consumer Commission fined Rs 25,000 on cooperative society for non-return of deposit

ಕೋ ಆಪರೇಟಿವ್ ಸೊಸೈಟಿಗೆ ಬಡ್ಡಿ ಸಮೇತ ರೂ.54 ಸಾವಿರ ಠೇವಣಿ ಹಣದ ಜೊತೆಗೆ ರೂ.25,000/- ಪರಿಹಾರ ಹಾಗೂ ರೂ.10 ಸಾವಿರ ಪ್ರಕರಣದ ಖರ್ಚು ಕೊಡುವಂತೆ ಆದೇಶಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.

ಬೀದಿಬದಿ ವ್ಯಾಪಾರಿಗಳೆ ಗಮನಿಸಿ: ಪ್ರಧಾನ ಮಂತ್ರಿ ʻಸ್ವನಿಧಿʼ ಯೋಜನೆ ವಿಸ್ತರಣೆ

ಹುಬ್ಬಳ್ಳಿ ಲೋಕಪ್ಪನಹಕ್ಕಳದ ನಿವಾಸಿಯಾದ ಸುಮಂಗಲಾ ಕಲ್ಲವಡ್ಡರರವರು ಹುಬ್ಬಳ್ಳಿಯ, ಹೈದರಾಬಾದ್ ಸ್ಟಾರ್ಸ್ ಮಲ್ಟಿಪರಪಸ್ ಕೋ ಆಪರೇಟಿವ್ ಸೊಸಾಯಿಟಿಯಲ್ಲಿ 2016-2017ರ ಅವಧಿಯಲ್ಲಿ ರೂ.54,000/- ಮೊತ್ತದ 6 ಮುದ್ದತ್ತು ಠೇವಣಿ ಇರಿಸಿದ್ದರು.

ಆ ಠೇವಣಿ ಅವಧಿ 2021ಕ್ಕೆ ಮುಕ್ತಾಯವಾಗಿದ್ದರೂ ತನ್ನ ಠೇವಣಿ ಹಣವನ್ನು ಸೊಸೈಟಿಯವರು ಕೊಡುತ್ತಿಲ್ಲ ಕಾರಣ ಸದರಿ ಸೊಸೈಟಿಯವರ ವರ್ತನೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಆ ಸೂಸೈಟಿಯವರ ಮೇಲೆ ಕ್ರಮ ಕೈಗೊಂಡು ತನ್ನ ಠೇವಣಿ ಹಣ ಮರುಪಾವತಿಸುವಂತೆ ಮತ್ತು ತನಗಾದ ತೊಂದರೆ ಮತ್ತು ಮಾನಸಿಕ ಹಿಂಸೆಗೆ ಈ ಪ್ರಕರಣದ ಖರ್ಚು ವೆಚ್ಚ ಸಮೇತ ಪರಿಹಾರ ಕೊಡಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷೆ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಸದಸ್ಯರು ದೂರುದಾರರು ಎದುರುದಾರರ ಸೊಸಾಯಿಟಿ ಸದಸ್ಯರಿದ್ದರೂ ಅವರಿಂದ ಠೇವಣಿ ರೂಪದಲ್ಲಿ ಪಡೆದ ಹಣವನ್ನು ಸಹಕಾರ ಸಂಘದವರು ತಮ್ಮ ಸಂಘದ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿರುವುದರಿಂದ ದೂರುದಾರರು ಗ್ರಾಹಕರಾಗುತ್ತಾರೆ.

ಮತ್ತು ಎದುರುದಾರರು ಸೇವೆ ನೀಡುವವರ ಅರ್ಥವಿವರಣೆಯಲ್ಲಿ ಬರುತ್ತಾರೆ ಅಂತಾ ಅಭಿಪ್ರಾಯಪಟ್ಟು ಆ ಬಗ್ಗೆ ಠೇವಣಿ ಅವಧಿ ಮುಗಿದರೂ ದೂರುದಾರರ ಠೇವಣಿ ಹಣವನ್ನು ಹಿಂದಿರುಗಿಸದೇ ಇರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ತೀರ್ಪು ನೀಡಿದೆ.

ಠೇವಣಿ ಇಟ್ಟ ದಿನಾಂಕಗಳಿಂದ ಶೇ10% ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಠೇವಣಿ ಹಣ ರೂ.54,000/-ನ್ನು ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ಅವರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.25,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.