ಲಾಕ್ ಡೌನ್ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಕುಟುಂಬಗಳಿಗೆ ಉಚಿತ ಪಡಿತರ ನೀಡುವ ಕಾರ್ಯಕ್ರಮಕ್ಕೆ ಸಂಸದ ಡಾ.ಉಮೇಶ ಜಾಧವ ಅವರು ಚಾಲನೆ ನೀಡಿದರು.
ಬುಧವಾರ ಕಲಬುರಗಿ ನಗರದ ಉದನೂರ ರಸ್ತೆಯ ಮಾಕಾ ಲೇಔಟ್ ನಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ 133 ರಲ್ಲಿ ಆಯ್ದ 10 ಎ.ಎ.ವೈ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಸಾಂಕೇತಿಕವಾಗಿ ಉಚಿತ ಆಹಾರಧಾನ್ಯಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ.ಉಮೇಶ ಜಾಧವ ಅವರು ಕೋವಿಡ್ ಎರಡನೇ ಅಲೆ ಕಾರಣ ಬಡವರು ಮತ್ತು ಶ್ರಮಿಕ ವರ್ಗದ ಕೈಗಳಿಗೆ ಕೆಲಸವಿರಲಿಲ್ಲ. ಈ ವರ್ಗಕ್ಕೆ ಆಹಾರ ಸಮಸ್ಯೆಯಾಗಬಾರದೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಮೇ ತಿಂಗಳಿನಿಂದ ಬರುವ ನವೆಂಬರ್ ಮಾಹೆ ವರೆಗೆ ಒಟ್ಟು 7 ತಿಂಗಳ ಕಾಲ ಎ.ಎ.ವೈ ಮತ್ತು ಬಿ.ಪಿ.ಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ಹಾಗೂ ಆದ್ಯತೇತರ ಪಡಿತರ ಚೀಟಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಿಸಲಾಗುತ್ತಿದ್ದು, ಅರ್ಹರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಈ ಉದ್ದೇಶಕ್ಕಾಗಿ ಜುಲೈ-2021 ಮಾಹೆಗೆ ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಜಿಲ್ಲೆಗೆ 8953 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆಯಾಗಿದೆ. ಎನ್.ಎಫ್.ಎಸ್.ಎ ಮತ್ತು ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಒಟ್ಟಾರೆ ಜಿಲ್ಲೆಯ 63812 ಅಂತ್ಯೋದಯ ಪಡಿತರ ಚೀಟಿಯ 266421ಸದಸ್ಯರು ಮತ್ತು 488047 ಆದ್ಯತಾ ಪಡಿತರ ಚೀಟಿಯ 1655052 ಸದಸ್ಯರು ಹಾಗೂ 18346 ಆದ್ಯತೇತರ ಪಡಿತರ ಚೀಟಿಯ ಸದಸ್ಯರು ಇದರ ಫಲಾನುಭವಿಗಳಾಗಿದ್ದಾರೆ ಎಂದರು.
ಕಳೆದ ವರ್ಷ ಲಾಕ್ ಡೌನ್‌ನಲ್ಲಿಯೂ 8 ತಿಂಗಳ ಉಚಿತ ಆಹಾರಧಾನ್ಯ ನೀಡುವ ಮೂಲಕ ಕೇಂದ್ರ ಸರ್ಕಾರ ಬಡವರ ನೆರವಿಗೆ ಧಾವಿಸಿತ್ತು ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಗುಣಕಿ, ಸಹಾಯಕ ನಿರ್ದೇಶಕ ರವಿ ಭೈರೇ ಸೇರಿದಂತೆ ಸ್ಥಳೀಯ ಆಹಾರ ನಿರೀಕ್ಷಕರು ಇದ್ದರು.
ಅಫಜಲಪುರದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ
ಅಫಜಲಪುರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಕಲಬುರಗಿ ಕಾರ್ಮಿಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಅಫಜಲಪುರ ಅಗ್ನಿಶಾಮಕದಳ ಕಚೇರಿ ಹತ್ತಿರದಲ್ಲಿ ಏರ್ಪಡಿಸಲಾಗಿದ್ದ ಕಟ್ಟಡ ಕಾರ್ಮಿಕರಿಗೆ ನೈರ್ಮಲೀಕರಣ ಸುರಕ್ಷಾ ಕಿಟ್ ಹಾಗೂ ಆಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಅಫಜಲಪುರ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಅಶೋಕ ಟಿ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಫಜಲಪುರ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯನಿರ್ವಾಹಕ ಕಾರ್ಯದರ್ಶಿಗಳು ಹಾಗೂ ಸರ್ಕಾರಿ ಸಹಾಯಕ ಅಭಿಯೋಜಕರಾದ ಸಂತೋಷಕುಮಾರ ಲೋಖಂಡೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಲಬುರಗಿ ಕಾರ್ಮಿಕ ವಿಭಾಗದ ಅಧಿಕಾರಿ ಶ್ರೀಹರಿ ದೇಶಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ 3ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ್ ಹಾಗೂ ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ ಇತರರು ಇದ್ದರು.