ಕೋವಿಡ್-19ರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್.ಎಫ್.ಎಸ್.ಎ. ಹಾಗೂ ಪಿ.ಎಂ.ಜಿ.ಕೆ.ಎ.ವೈ. ಹಂಚಿಕೆಯಡಿ 2021ರ ಆಗಸ್ಟ್ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯ ಎಎವೈ/ ಅಂತ್ಯೋದಯ ಅನ್ನ, ಬಿ.ಪಿ.ಎಲ್./ ಆದ್ಯತಾ ಹಾಗೂ ಎ.ಪಿ.ಎಲ್. (ಆದ್ಯತೇತರ) ಪಡಿತರ ಚೀಟಿ ಕಾರ್ಡುದಾರರಿಗೆ ಕೆಳಗಿನಂತೆ ಪಡಿತರ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಕೋವಿಡ್-19 ನಿಯಮಗಳನ್ನು ಪಾಲಿಸಿ, ಜನದಟ್ಟಣೆ ಉಂಟಾಗದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪಡಿತರ ಆಹಾರ ಧಾನ್ಯವನ್ನು ಪಡೆಯಬೇಕೆಂದು ಡಿ.ಸಿ. ಅವರು ಮನವಿ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ 63,789 ಎಎವೈ ಪಡಿತರ ಚೀಟಿಗಳ 2,66,137 ಸದಸ್ಯರಿಗೆ ಮತ್ತು 4,87,902 ಪಿ.ಎಚ್.ಎಚ್. ಪಡಿತರ ಚೀಟಿಗಳ 16,53,717 ಸದಸ್ಯರಿಗೆ ಹಾಗೂ 18,536 ಎ.ಪಿ.ಎಲ್. (ವಿಲ್ಲಿಂಗ್‌ನೆಸ್) ಪಡಿತರ ಕಾರ್ಡುದಾರರಿಗೆ ಪಡಿತರ ಚೀಟಿಯನ್ನು ವಿತರಿಸಲಾಗುತ್ತದೆ.
ಎಎವೈ/ ಅಂತ್ಯೋದಯ ಅನ್ನ: ಎನ್.ಎಫ್.ಎಸ್.ಎ. ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿ ಹಾಗೂ ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಬಿ.ಪಿ.ಎಲ್./ ಆದ್ಯತಾ: ಎನ್.ಎಫ್.ಎಸ್.ಎ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಮತ್ತು ಪ್ರತಿ ಪಡಿತರ ಚೀಟಿಗೆ 2 ಕೆ.ಜಿ. ಗೋಧಿ ಹಾಗೂ ಪಿ.ಎಂ.ಜಿ.ಕೆ.ಎ.ವೈ. ಯೋಜನೆಯಡಿ ಪ್ರತಿ ಪಡಿತರ ಚೀಟಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಸೇರಿದಂತೆ ಪ್ರತಿ ಸದಸ್ಯರಿಗೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಎ.ಪಿ.ಎಲ್ /ಆದ್ಯತೇತರ (Willingness): ಏಕಸದಸ್ಯ ಇರುವ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಮತ್ತು ಒಂದಕ್ಕಿAತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ದರ 15 ರೂ. ರಂತೆ ವಿತರಿಸಲಾಗುತ್ತದೆ. ಅಂತರರಾಜ್ಯ/ ಅಂತರ್‌ಜಿಲ್ಲೆ ಪೋರ್ಟೆಬಿಲಿಟಿ (Portability): ಅಂತರರಾಜ್ಯ/ ಅಂತರ್‌ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಂಚೋಳಿ ತಾಲೂಕು ಪಡಿತರ ಚೀಟಿದಾರರು ಆಗಸ್ಟ್ 10 ರವರೆಗೆ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ
ಚಿಂಚೋಳಿ ತಾಲೂಕಿನ ಎಲ್ಲಾ ಪಡಿತರ ಚೀಟಿದಾರರು ತಮಗೆ ಸಂಬಂಧಿಸಿದ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ತಮ್ಮ ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರ ಬಯೋಮೆಟ್ರಿಕ್ ನೀಡಿ 2021ರ ಆಗಸ್ಟ್ 10 ರವರೆಗೆ ಈ-ಕೆವೈಸಿ (ಜೀವ ಮಾಪಕ/ಹೆಬ್ಬಟ್ಟಿನ ಗುರುತು ದೃಢೀಕರಣ) ಮಾಡಿಕೊಳ್ಳಬೇಕೆಂದು ಚಿಂಚೋಳಿ ತಹಸೀಲ್ದಾರರಾದ ಅರುಣಕುಮಾರ ಕುಲಕರ್ಣಿ ಅವರು ತಿಳಿಸಿದ್ದಾರೆ.
ಅದರಂತೆ ಚಿಂಚೋಳಿ ತಾಲೂಕಿನಲ್ಲಿ ಒಟ್ಟು 99 ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ವ್ಯವಸ್ಥೆಯ ಮೂಲಕ ಉಚಿತವಾಗಿ ಈ-ಕೆವೈಸಿ ಮಾಡುವ ಕಾರ್ಯವು ಪ್ರಗತಿಯಲ್ಲಿದ್ದು, ಈವರೆಗೆ ತಾಲ್ಲೂಕಿನಲ್ಲಿ 8872 ಅಂತ್ಯೋದಯ ಅನ್ನ ಪಡಿತರ ಚೀಟಿಗಳಿಗೆ ಸಂಬಂಧಿಸಿದ 34856 ಸದಸ್ಯರ ಪೈಕಿ 4097 ಪಡಿತರ ಚೀಟಿಗಳ 14863 ಸದಸ್ಯರ ಮತ್ತು 53019 ಆದ್ಯತಾ ಪಡಿತರ ಚೀಟಿಗಳ ಒಟ್ಟು 168426 ಸದಸ್ಯರ ಪೈಕಿ 34506 ಪಡಿತರ ಚೀಟಿಗಳ 102230 ಸದಸ್ಯರ ಈ-ಕೆವೈಸಿ ಪೂರ್ಣಗೊಂಡಿರುತ್ತದೆ.
ಸರ್ಕಾರದ ನಿರ್ದೇಶನದಂತೆ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರು ಈ-ಕೆವೈಸಿ (ಜೀವ ಮಾಪಕ/ಹೆಬ್ಬಟ್ಟಿನ ಗುರುತು ದೃಢೀಕರಣ) ಮಾಡಿಸಿಕೊಳ್ಳುವುದು ಅತೀ ಅವಶ್ಯವಿರುವ ಹಿನ್ನೆಲೆಯಲ್ಲಿ ಇನ್ನುಳಿದ ಪಡಿತರ ಚೀಟಿದಾರರು ಸಹ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಈ-ಕೆವೈಸಿ ಮಾಡಿಕೊಳ್ಳಲು 2021ರ ಆಗಸ್ಟ್ 10ರವರೆಗೆ ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೇಡಂ ತಾಲೂಕು ಪಡಿತರ ಚೀಟಿದಾರರು ಆಗಸ್ಟ್ 10 ರವರೆಗೆ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ
ಸರ್ಕಾರದ ನಿರ್ದೇಶನದಂತೆ ಸೇಡಂ ತಾಲೂಕಿನ ಅಂತ್ಯೋದಯ (ಎಎವೈ), ಆದ್ಯತಾ ಕುಟುಂಬ (ಪಿಹೆಚ್‌ಹೆಚ್) ಪಡಿತರ ಚೀಟಿಗಳ ಎಲ್ಲಾ ಸದಸ್ಯರ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳ ಮೂಲಕ 2021ರ ಆಗಸ್ಟ್ 10 ರವರೆಗೆ ಇ-ಕೆವೈಸಿ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸೇಡಂ ತಹಸೀಲ್ದಾರರು ತಿಳಿಸಿದ್ದಾರೆ.
ಈಗಾಗಲೇ ಇ-ಕೆವೈಸಿ ಆಗಿರುವ ಅಥವಾ 2020 ಫೆಬ್ರವರಿ ನಂತರ ವಿತರಿಸಿರುವ ಹೊಸ ಪಡಿತರ ಚೀಟಿ/ಜಿಎಸ್‌ಸಿ ಆಗಿರುವ ಪಡಿತರ ಚೀಟಿಗಳ ಇ-ಕೆವೈಸಿ ಆಗಿದ್ದು, ಅವರು ಪುನಃ ಇ-ಕೆವೈಸಿ ಮಾಡಿಸುವ ಅಗತ್ಯವಿರುವುದಿಲ್ಲ. ಪಡಿತರ ಚೀಟಿದಾರರು ಪಡಿತರ ಚೀಟಿಗಳ ಇ-ಕೆವೈಸಿ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಹಣವನ್ನು ನೀಡಬಾರದೆಂದು ಅವರು ತಿಳಿಸಿದ್ದಾರೆ.