ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ..
ಇದನ್ನೂ ಓದಿರಿ: ರಾಜ್ಯದಲ್ಲಿ ಹೆಚ್ಚಾಯ್ತು ಚಳಿ; ಬೆಂಗಳೂರಲ್ಲಿ ದಶಕದಲ್ಲೇ ಕನಿಷ್ಠ ತಾಪಮಾನ!
Gkvk ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನವೆಂಬರ್ 3ರಿಂದ ಕೃಷಿ ಮೇಳ ಪ್ರಾರಂಭವಾಗಲಿದ್ದು, ಮೇಳದಲ್ಲಿ ಆಹಾರ, ವಾಣಿಜ್ಯ ಮತ್ತು ಮೇವು ಬೆಳೆಗಳನ್ನು ಒಳಗೊಂಡಂತೆ 9 ಬೆಳೆಗಳ ಸುಧಾರಿತ ಹೊಸ ತಳಿಗಳ ಬಿಡುಗಡೆ ಆಗಲಿದೆ.
ನ.3ರಂದು ಆರಂಭವಾಗುವ ಕೃಷಿ ಮೇಳದಲ್ಲಿ ಈ ತಳಿಗಳನ್ನು ರೈತರ ಬಳಕೆಗೆ ಮುಕ್ತಗೊಳಿಸಲಾಗುತ್ತದೆ.
ಹೊಸ ತಳಿಗಳಾದ ಭತ್ತ, ಅವರ, ಕೊರಲೆ, ಎಳ್ಳು, ಹುಚ್ಚೆಳ್ಳು, ಮುಸುಕಿನ ಜೋಳ, ಹರಳು ಸಂಕರಣ ತಳಿ (ಔಡಲ), ಮೇವಿನ ಜೋಳದ ಹೊಸ ತಳಿಗಳು ಹೆಚ್ಚು ರೋಗ ನಿರೋಧಕ ಶಕ್ತಿ ಮತ್ತು ಅಧಿಕ ಇಳುವರಿ ನೀಡುವ ಬೆಳೆಗಳಾಗಿವೆ.
ಇವು ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೃಷಿ ವಲಯ 4, 5 ಮತ್ತು 6ರಲ್ಲಿ ಬೆಳೆಯಲು ಸೂಕ್ತವಾಗಿವೆ. ಜಿಕೆವಿಕೆ ಆವರಣದಲ್ಲಿ ನಡೆಯುವ ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿರಿ: KPSC recruitment: ಸಾಂಖ್ಯಿಕ ನಿರೀಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ನೂತನ ತಳಿಗಳ ವಿವರ
ಭತ್ತ: ಕೆ.ಎಂ.ಪಿ-225
ಈ ಬೆಳೆಯು ಅಲ್ಪಾವಧಿ ತಳಿಯಾಗಿದ್ದು, ಬಿತ್ತನೆಯಾದ 120ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಬಹುದು, ಅಕ್ಕಿಯು ಬಿಳಿಯಾಗಿದೆ.
ಈ ತಳಿ ಉದ್ದ ಮತ್ತು ದಪ್ಪವಾಗಿರುತ್ತವೆ. ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದ್ದು, ಐಆರ್-64 ತಳಿಯ ಬದಲು ಕೆಎಂಪಿ-225 ಹಳಿ ಬೆಳೆಯಬಹುದು.
ಈ ಬೆಳೆಯನ್ನು ಬೆಳೆಯುವುದರಿಂದ ಪ್ರತಿ ಎಕರೆಗೆ 24ರಿಂದ 26 ಕ್ವಿಂಟಾಲ್ ಇಳುವರಿ ಬರಲಿದೆ.
ಸಣ್ಣ ಅಕ್ಕಿಯ ಸುಧಾರಿತ ಭತ್ತ: ಆರ್.ಎನ್.ಆರ್.15048
ಈ ತಳಿ ಅಲ್ಪಾವಧಿಯದ್ದಾಗಿದ್ದು, 125 ದಿನಗಳಿಗೆ ಕಟಾವಿಗೆ ಬರುತ್ತದೆ. ಜುಲೈ 3ನೇ ವಾರದಿಂದ ನಾಲ್ಕನೇ ವಾರದೊಳಗೆ ಇದನ್ನು ಬಿತ್ತಬಹುದು, ಅಕ್ಕಿ ಚಿಕ್ಕದಾಗಿದ್ದು, ಉತ್ಕೃಷ್ಟ ದರ್ಜೆಯದಾಗಿದೆ.
ಪ್ರತಿ ಎಕರೆಗೆ 22ರಿಂದ 24 ಕ್ವಿಂಟಾಲ್ ಇಳುವರಿ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿರಿ: ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಲು ಆಗ್ರಹ; ಇಂದು ರಾಷ್ಟ್ರೀಯ ಹೆದ್ದಾರಿ ಬಂದ್
ಮೇವಿನ ಜೋಳ- ಸಿಎನ್‌ಎಸ್‌ಎಸ್- 1
ಮಳೆಯಾಶ್ರಿತ ಮುಂಗಾರು ಅಥವಾ ಹಿಂಗಾರು ಅವಧಿಯಲ್ಲಿ ಬಿತ್ತನೆಗೆ ಸೂಕ್ತವಾದ ತಳಿಯಾಗಿದ್ದು, ಪ್ರತಿ ಎಕರೆಗೆ 22-23 ಟನ್ ಹಸಿರು ಮೇವಿನ ಇಳುವರಿ ನೀಡಲಿದೆ.
ಉತ್ತಮ ಗುಣಮಟ್ಟದ ನಾರಿನಂಶ, ಸಸಾರಜನಕ ಕೊಡುವ ತಳಿಯಾಗಿದ್ದು, ವಲಯ 6ದಲ್ಲಿ ಬೆಳೆಯಲು ಶಿಫಾರಸು ಮಾಡಲಾಗಿದೆ.
ಮುಸುಕಿನ ಜೋಳ: ಎಂಎಎಚ್- 14-138
ಏಕ ಸಂಕರಣ ಮುಸುಕಿನ ಜೋಳದ ತಳಿಯಾಗಿದ್ದು, ಪ್ರತಿ ಎಕರೆಗೆ 34ರಿಂದ 38 ಕ್ವಿಂಟಾಲ್ ಇಳುವರಿ ಬರಲಿದ್ದು, 4 ತಿಂಗಳಲ್ಲಿ ಕಟಾವಿಗೆ ಬರಲಿದೆ.
ಎಲೆ ಅಂಗಮಾರಿ ಮತ್ತು ಕೇದಿಗೆ ರೋಗದ ನಿರೋಧಕ ಶಕ್ತಿ ಹೊಂದಿದೆ, ಕಟಾವಿನ ವೇಳೆಯೂ ಹಸಿರಾಗಿದ್ದು, ಜಾನುವಾರುಗಳಿಗೆ ಉತ್ತಮ ಮೇವು ಆಗಿದೆ. ತೆನೆಗಳು ನೀಳವಾಗಿದ್ದು, ಕಾಳುಗಳು ತೆಳು ಕಿತ್ತಳೆ, ಹಳದಿ ಬಣ್ಣದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತದೆ.
ಅವರೆ- ಎಚ್‌ಎ-5
ಮೂರು ತಿಂಗಳಲ್ಲಿ ಕಟಾವಿಗೆ ಬರಲಿದ್ದು, ಎಕರೆಗೆ 13-14 ಕ್ವಿಂಟಾಲ್ ಹಸಿ ಅವರೆ ಕಾಯಿ ಅಥವಾ 3 ಕ್ವಿಂಟಾಲ್ ವರೆಗೆ ಒಣ ಬೀಜ ಇಳುವರಿ ಬರುತ್ತದೆ.
ಕೊರಲೆ- ಜಿಪಿಯುಬಿಟಿ-2
ಈ ತಳಿ ಪ್ರತಿ ಎಕರೆಗೆ 6ರಿಂದ 8 ಕ್ವಿಂಟಲ್ ಇಳುವರಿ ಹೊಂದಿದ್ದು, 1ಟನ್‌ಗೂ ಅಧಿಕಾ ಮೇವು ಲಭ್ಯವಾಗಲಿದೆ. ಗಿಡಗಳು 110-120 ಸೆಂ.ಮೀ ಮಧ್ಯಮ ಎತ್ತರಕ್ಕೆ ಬೆಳೆಯಲಿದ್ದು, 15ರಿಂದ 20 ತೆಂಡೆಗಳು ಬಿಡುತ್ತವೆ.
ದಟ್ಟ ಮತ್ತು ಉದ್ದನೆಯ ತಲೆ ಹೊಂದಿದ್ದು, 85-90 ದಿನಗಳಲ್ಲಿ ಕಟಾವಿಗೆ ಬರುವ ದುಂಡು ಕೊರಲೆ ಎಂದು ಕರೆಯಲಾಗುತ್ತದೆ.
ಎಳ್ಳು- ಜಿಕೆವಿಕೆಎಸ್-1
ಈ ತಳಿಯ ಎಳ್ಳು ಗಿಡಗಳಲ್ಲಿ ರೆಂಬೆಗಳು, ತುಂಬಿದ ಕಾಯಿಗಳು ಮತ್ತು ಬಿಳಿ ಬಣ್ಣದ ಬೀಜಗಳಿದ್ದು, ಶೇ 47ರಿಂದ 48 ಎಣ್ಣೆ ಅಂಶ ಹೊಂದಿರುತ್ತವೆ. 80-85 ದಿನದಲ್ಲಿ ಕಟಾವಿಗೆ ಬರುತ್ತದೆ. ಪ್ರತಿ ಎಕರೆಗೆ ಎರಡು ಕ್ವಿಂಟಾಲ್ ವರೆಗೆ ಇಳುವರಿ ಬರಲಿದೆ.
ಹುಚ್ಚೆಳ್ಳು- ಕೆಬಿಎಸ್-2
ಪ್ರತಿ ಎಕರೆಗೆ 2 ಕ್ವಿಂಟಾಲ್ ವರೆಗೆ ಇಳುವರಿ ಬರಲಿದ್ದು, ಹೆಚ್ಚು ರೆಂಬೆಗಳು ಮತ್ತು ಕಪ್ಪಾದ ದಪ್ಪನೆಯ ಕಾಯಿ ಹೊಂದಿರುತ್ತವೆ.
ಹರಳು (ಔಡಲ) ಸಂಕರಣ ತಳಿ – ಐಸಿಎಚ್-66
ಎಕರೆಗೆ ಏಳು ಕ್ವಿಂಟಾಲ್ ಇಳುವರಿ ಬರಲಿದ್ದು, ಮೊದಲು ಗೊಂಚಲು ಪಕ್ವತೆಗೆ 95ರಿಂದ 98 ದಿನ ಬೇಕಾಗುತ್ತದೆ. ಕೆಂಪಾದ ಕಾಂಡ ಕಾಯಿಗಳ ಮೇಲೆ ಕಡಿಮೆ ಮುಳ್ಳಾಗಿದ್ದು ಗಿಡದಲ್ಲಿ ಸುಂಕು ಅಥವಾ ಬೂದಿ ಮುಚ್ಚಣಿಕೆ ಕಂಡು ಬರುತ್ತದೆ.
ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿದ್ದು, ಸೊರಗು ರೋಗ ನಿರೋಧಕ ಹಾಗೂ ಹಸಿರು ಜಿಗಿ ಹುಳುವಿನ ಬಾಧೆ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.