News

ದೆಹಲಿಯಲ್ಲಿ ಒಂದು ವಾರ, ರಾಜಸ್ಥಾನದಲ್ಲಿ ಮೇ 3 ರ ವರೆಗೆ ಲಾಕ್ಡೌನ್

19 April, 2021 2:23 PM IST By:
Lockdown

ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದ ಏಪ್ರೀಲ್ 26 ರ ವರೆಗೆ ಕರ್ಫ್ಯೂ ಜಾರಿ ಮಾಡಿ ಸಂಪೂರ್ಣ ಲಾಕ್ಡೌನ್ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ಆರು ದಿನಗಳ ಕಾಲ ಲಾಕ್ಡೋನ್ ಅವಧಿಯಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರಿಗೆ ಭಾಗಿಯಾಗಲು ಸರ್ಕಾರ ಅನುಮತಿ ನೀಡಿದೆ.

ದೆಹಲಿಯಲ್ಲಿ ಭಾನುವಾರ ಒಂದೇ ದಿನ 25,462 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ಮೊದಲು ವಾರಾಂತ್ಯಕ್ಕೆ ಸೀಮಿತವಾಗಿದ್ದ ಲಾಕ್ ಡೌನ್ ಈಗ ಒಂದು ವಾರದವರೆಗೂ ಸಂಪೂ ಲಾಕ್ ಡೌನ್ ವಿಧಿಸಲಾಗಿದೆ. ಅಗತ್ಯ ವಸ್ತುಗಳಾದ ಔಷಧ, ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುದ್ಧಿಗೋಷ್ಟಿಯಲ್ಲಿ ಪ್ರಕಟಿಸಿದರು.
ಜನ ಸಹಕಾರವಿಲ್ಲದೆ ಕೋವಿಡ್ ನಿಯಂತ್ರಣ ಅಸಾಧ್ಯ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಇದರಿಂದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದರು.
ದೆಹಲಿ ಸರ್ಕಾರ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸಾಕಷ್ಟು ಕ್ರಮ ಕೈಗೊಂಡಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಂಡು ಬಂದಿದೆ. ದೆಹಲಿ 4ನೇ ಹಂತದ ಕೊರೊನಾ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ಅಗತ್ಯ ವಸ್ತುಗಳಿಗೆ ಆದ್ಯತೆ ನೀಡುತ್ತೇವೆ. ಆದ್ದರಿಂದ ಸಣ್ಣ ಪ್ರಮಾಣದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೂ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಮುಖ್ಯಮಂತ್ರಿಗಳು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಜತೆ ಸಭೆ ನಡೆಸಿದ ನಂತರ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
160 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ. 29.74 ರಷ್ಟಿದೆ. 20,259 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 74,941 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12,121 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಕಿರಾಣಿ ಅಂಗಡಿ ನೌಕರರು, ಆಹಾರ ಮತ್ತು ಇ-ಕಾಮರ್ಸ್ ವಿತರಣಾ ಸಿಬ್ಬಂದಿಯಿಂದ ಸಂಚಾರಕ್ಕೆ ಇ-ಪಾಸ್ ಅಗತ್ಯವಿದೆ. ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ಕಡ್ಡಾಯಗೊಳಿಸಿದೆ. ಆಮಂತ್ರಣ ಕಾರ್ಡ್ ಅನ್ನು ಹಾಜರುಪಡಿಸಿ, ಮದುವೆಗಳಿಗೆ ಹೋಗುವವರಿಗೆ ಅನುಮತಿ ನೀಡಲಾಗುವುದು.

ದೆಹಲಿ ಮೆಟ್ರೋ ಮತ್ತು ಸಾರ್ವಜನಿಕ ಬಸ್ಸುಗಳು ತಮ್ಮ ಒಟ್ಟು ಸಾಮರ್ಥ್ಯದ 50% ವರೆಗೆ ಕಡಿತಗೊಳಿಸಲಾಗಿದೆ. ಮಾಲ್ ಗಳು, ಜಿಮ್ ಗಳು, ಸಿನೆಮಾಗಳನ್ನು ಮುಚ್ಚಲಾಗುವುದು ಮತ್ತು ಯಾವುದೇ ಧಾರ್ಮಿಕ, ರಾಜಕೀಯ ಅಥವಾ ಸಾಮಾಜಿಕ ಕೂಟಗಳಿಗೆ ಅವಕಾಶ ನೀಡುವುದಿಲ್ಲ.

ರಾಜಸ್ಥಾನದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧ.. ಮೇ 3 ರ ವರೆಗೆ ಶಾಲೆಗಳು ಬಂದ್​

ಕೊರೊನಾ ಎರಡನೇ ಅಲೆ ಆತಂಕದ ಹಿನ್ನೆಲೆ ಮೇ 3 ರ ವರೆಗೆ ಶಾಲೆಗಳನ್ನು ಬಂದ್​ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಾರ್ಗಸೂಚಿಯ ಪ್ರಕಾರ, ಮನೆಯಿಂದ ಕೆಲಸ ಮಾಡಲು ಶಿಕ್ಷಕರಿಗೆ ಸೂಚಿಸಲಾಗಿದ್ದು, ವರ್ಕ್​ ಫ್ರಮ್​ ಹೋಮ್​ ನೀಡಲಾಗಿದೆ.

ಕೊರೊನಾ ವೈರಸ್‌ ಪ್ರಕರಣಗಳ ಬಗ್ಗೆ ಆತಂಕಗೊಂಡ ರಾಜಸ್ಥಾನ ಸರ್ಕಾರವು ರೋಗ ಹರಡುವುದನ್ನು ತಡೆಗಟ್ಟಲು ಇಂದಿನಿಂದ 15 ದಿನಗಳವರೆಗೆ ಕಚೇರಿಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚುವುದು ಸೇರಿದಂತೆ ಹೊಸ ನಿರ್ಬಂಧಗಳನ್ನು ಪ್ರಕಟಿಸಿದೆ.

“ಈ ಹೊಸ ಲಾಕ್‌ಡೌನ್ ನಿರ್ಬಂಧಗಳು ಇಂದು ಬೆಳಗ್ಗೆ 5 ರಿಂದ ಮೇ 3 ರವರೆಗೆ 15 ದಿನಗಳವರೆಗೆ ರಾಜ್ಯದಲ್ಲಿ ಜಾರಿಯಲ್ಲಿರುತ್ತವೆ. ಅಗತ್ಯ ಸೇವೆಗಳನ್ನು ಒದಗಿಸುವ ಅಂಗಡಿಗಳು ಮತ್ತು ಕಚೇರಿಗಳು ಮಾತ್ರ 15 ದಿನಗಳ ಅವಧಿಯಲ್ಲಿ ತೆರೆದಿರುತ್ತವೆ ಎಂದು ಗೃಹ ಕಾರ್ಯದರ್ಶಿ ಅಭಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳು, ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಸೇವಾ ಅಧಿಕಾರಿಗಳು, ಸಾರ್ವಜನಿಕ ಸಾರಿಗೆ ಸಿಬ್ಬಂದಿ, ನಾಗರಿಕ ಅಧಿಕಾರಿಗಳು, ಎಲೆಕ್ಟ್ರಿಷಿಯನ್, ನೈರ್ಮಲ್ಯ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು ಮತ್ತು ಗುರುತಿನ ಚೀಟಿಗಳೊಂದಿಗೆ ಪ್ರಯಾಣಿಸುವ ವೈದ್ಯರ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.