News

ದೆಹಲಿಯಲ್ಲಿ ಕೊರೆಯುವ ಚಳಿ: 15 ವರ್ಷದಲ್ಲೇ ಅತಿ ಕನಿಷ್ಠ ತಾಪಮಾನ

01 January, 2021 2:20 PM IST By:

ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ಹೊಸ ವರ್ಷದ ದಿನದಂದೇ (ಜನವರಿ 1) ದಟ್ಟ ಮಂಜು ಮತ್ತು ತೀವ್ರ ಜಳಿ ಅನುಭವಿಸಿದಂತಾಗಿದೆ. ಕಳೆದ 15 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ 1.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಭಾರಿ ಮಂಜು ಆವರಿಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

2006ರ ಜನವರಿ 8ರಂದು ದೆಹಲಿಯಲ್ಲಿ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈವರೆಗಿನ ಅತಿ ಕನಿಷ್ಠ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್ 1935ರ ಜನವರಿಯಲ್ಲಿ ದಾಖಲಾಗಿತ್ತು.

ಕಳೆದ ವರ್ಷ  2.4 ಡಿಗ್ರಿ ಸೆಲ್ಸಿಯಸ್ ಅತೀ ಕಡಿಮೆ ತಾಪಮಾನ ವರದಿಯಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

 ಬೆಳಿಗ್ಗೆ 6 ಗಂಟೆ ವೇಳೆಗೆ ಸಫ್ದರ್‌ಜಂಗ್ ಮತ್ತು ಪಾಲಂನಲ್ಲಿ ದಟ್ಟ ಮಂಜು ಆವರಿಸಿದ್ದು, ಶೂನ್ಯದಿಂದ 50 ಮೀಟರ್ ಗೋಚರತೆ (ಝೀರೊ ವಿಸಿಬಿಲಿಟಿ) ಇತ್ತು ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನೆ ನೀಡಿದೆ.

ಜನವರಿ 2ರಿಂದ 6ರ ಅವಧಿಯಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಜನವರಿ 4–5ರ ವೇಳೆಗೆ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು.