ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಪಂಜಾಬ್, ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶದ ರೈತರು ಶುಕ್ರವಾರ ಧರಣಿ ನಡೆಸಲು ದೆಹಲಿಗೆ ತೆರಳುತ್ತಿದ್ದು, ಅವರನ್ನು ಹರಿಯಾಣ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯಿದೆಗಳ ರದ್ದತಿಗೆ ಆಗ್ರಹಿಸಿ ರೈತ ಸಂಘಟನೆಗಳು ನವೆಂಬರ್ 26-27ರಂದು ದಿಲ್ಲಿ ಚಲೋ ಜಾಥಾ ಹಮ್ಮಿಕೊಂಡಿದ್ದು, ಪ್ರತಿಭಟನಾಕಾರರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಾಗಿದೆ.
ಈಗಾಗಲೇ ಕೋವಿಡ್ ಸಾಂಕ್ರಾಮಿಕ ಮುಂದಿಟ್ಟುಕೊಂಡು ದಿಲ್ಲಿ ಪೊಲೀಸ್ ಇಲಾಖೆ ಜಾಥಾಕ್ಕೆ ಅನುಮತಿ ನಿರಾಕರಿಸಿದೆ. ರೈತ ಸಂಘಟನೆಗಳ ಮನವಿಗಳನ್ನು ತಿರಸ್ಕರಿಸಲಾಗಿದೆ. ಆದಾಗ್ಯೂ ಅವರು ನಗರವನ್ನು ಸಂಪರ್ಕಿಸುವ ಐದು ಹೆದ್ದಾರಿಗಳಲ್ಲಿ ಜಮಾಯಿಸಿದರೆ ಬಲ ಪ್ರಯೋಗ ಅನಿವಾರ್ಯವಾಗುತ್ತದೆ ಎಂದು ಇಲಾಖೆ ಟ್ವಿಟರ್ ಮೂಲಕ ಎಚ್ಚರಿಸಿದೆ.
ಟ್ರ್ಯಾಕ್ಟರ್, ಇತರೆ ವಾಹನಗಳ ಮೂಲಕ ರೈತರು ಹರಿಯಾಣದ ಗಡಿಯತ್ತ ಹೋಗುತ್ತಿದ್ದಾರೆ. ಇನ್ನೂ ಕೆಲ ರೈತರು ಪಾದಯಾತ್ರೆ ಮೂಲಕ ದೆಹಲಿ ಕಡೆಗೆ ತೆರಳುತ್ತಿದ್ದಾರೆ. ಎಂದು ತಿಳುದುಬಂದಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ದೆಹಲಿ, ಹರಿಯಾಣ ಗಡಿ ಪ್ರದೇಶದ ಫರೀದಾಬಾದ್ ಮತ್ತು ಸಿಂಘು ಗ್ರಾಮಗಳಲ್ಲಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರ ಜೊತೆಗೆ ಸಿಆರ್‌ಪಿಎಫ್ ಯೋಧರನ್ನೂ ಇಲ್ಲಿ ನೇಮಿಸಲಾಗಿದೆ. ನಾಲ್ಕರಿಂದ ಐದು ಜಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ.
ಇದೇ ವೇಳೆ ಈ ಪ್ರದೇಶದ ಮೆಟ್ರೋ ಸೇವೆಯನ್ನು ಮಧ್ಯಾಹ್ನ 2 ಗಂಟೆವರೆಗೆ ರದ್ದುಗೊಳಿಸಲಾಗಿದೆ ರೈತರ ಪ್ರತಿಭಟನೆ ಹಿನ್ನೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ದಿಲ್ಲಿ ಮೆಟ್ರೋ ರೈಲು ನಿಗಮ ಟ್ಟೀಟ್ ಮಾಡಿದೆ. ಇನ್ನು ರೈಲುಗಳು ಕೂಡ ದಿಲ್ಲಿಗೂ ಎರಡರಿಂದ ಮೂರು ನಿಲ್ದಾಣಗಳ ಹಿಂದೆಯೇ ನಿಲುಗಡೆಯಾಗಲಿವೆ. ಜೊತೆಗೆ ನೆರೆ ರಾಜ್ಯದೊಂದಿಗಿನ ಬಸ್ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.
ಆದರೆ ಪಟ್ಟು ಬಿಡದ ಪಂಜಾಬ್ ರೈತರು ಗಡಿಯಲ್ಲೇ ಧರಣಿ ಕೂತಿದ್ದಾರೆ. ಅಡುಗೆಗೆ ಬೇಕಾದ ಸಾಮಾನುಗಳು ಹಾಗೂ ಚಳಿಯ ಕಾರಣಕ್ಕೆ ಕಟ್ಟಿಗೆ, ಹೊದಿಕೆಗಳ ಸಿದ್ಧತೆಯೊಂದಿಗೆ ಬಂದಿರುವ ರೈತರು ಗಡಿ ತೆರೆಯುವವರೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ದೆಹಲಿಯಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ 2 ಲಕ್ಷಕ್ಕೂ ಹೆಚ್ಚು ರೈತರು ಸೇರಬಹುದು ಎಂದು ಅಂದಾಜಿಸಲಾಗುತ್ತಿದೆ.