News

ಸಾಲ ಮನ್ನಾಗೆ ಆಗ್ರಹಿಸಿ ʻದೆಹಲಿ ಚಲೋʼ

25 December, 2023 4:19 PM IST By: Maltesh
Dehali Chalo

1.. ಹಾಲಿನ ದರದಲ್ಲಿ 2 ರೂ ಕಡಿತ!
ಬರದಿಂದ ಈಗಾಗಲೇ ನಲುಗಿರುವ ಅನ್ನದಾತರಿಗೆ ಸದ್ಯ ಶಿವಮೊಗ್ಗ ಚಿತ್ರದುರ್ಗ ದಾವಣಗೆರೆ ಹಾಲು ಒಕ್ಕೂಟ ಮತ್ತೊಂದು ಶಾಕ್‌ ನೀಡಿದೆ. ಹೌದು ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಶಿಮೂಲ್‌ 2 ರೂ ಕಡಿತ ಮಾಡುವುದಾಗಿ ತಿಳಿಸಿದೆ.

ಡಿಸೆಂಬರ್‌ 21 ರಿಂದಲೇ ಈ ಹೊಸ ಆದೇಶ ಜಾರಿಗೆ ಬಂದಿದ್ದು ರೈತರಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಒಕ್ಕೂಟ ನಷ್ಟದ ಹಾದಿ ಹಿಡಿದಿದ್ದೆ ಬೆಲೆ ಇಳಿಕೆಗೆ ಕಾರಣ ಎಂದು ಹೇಳಲಾಗಿದೆ. ಹಾಲಿನ ಉತ್ಪಾದನೆ ಹಾಗೂ ಮಾರಾಟದ ಖರ್ಚು ಸಮತೋಲನ ಕಾಯದ ಕಾರಣ ವೆಚ್ಚ ಕಡಿತ ಮಾಡಲಾಗಿದೆ.

2.. ಸಾಲ ಮನ್ನಾಗೆ ದೆಹಲಿ ಚಲೋ
ರೈತರ ಕೃಷಿ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿ ಫೆ 26 ರಂದು ದೆಹಲಿ ಚಲೋ ನಡೆಸಲಾಗುವುದು ಎಂದು ರೈತ ಮುಖಂಡ ಕುರಬೂರು ಶಾಂತಕುಮಾರ್‌ ಅವರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಈ ಹಿಂದೆ ದೆಹಲಿಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾಗೆ ಪ್ರಧಾನಿ ಮೋದಿ ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ.

ಆದ್ದರಿಂದ ಕೃಷಿ ಸಾಲ ಮನ್ನಾ ಸೇರಿದಂತೆ ಇನ್ನಿತರ ರೈತರ ಬೇಡಿಕೆಗಳನ್ನು ಈಡೇರಿಸಲು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜೊತೆಗೆ ಪೂರ್ವಭಾವಿಯಾಗಿ ಜಾಗೃತಿ ಮೂಡಿಸಲು ದೇಶಾದ್ಯಂತ 6 ಕಿಸಾನ್‌ ಮಹಾಪಂಚಾಯತ್‌ಗಳನ್ನು ಕೂಡ ಈಗಾಗಲೆ ಆಯೋಜನೆ ಮಾಡಲಾಗಿದೆ ಎಂದರು.

3.. ಅಕ್ರಮ ಪಂಪ್‌ಸೆಟ್‌ ಸಕ್ರಮ
ರಾಷ್ಟ್ರೀಯ ರೈತ ದಿನಾಚರಣೆಯ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರು ನಾಡಿನ ಕೃಷಿ ಬಾಂಧವರಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ.ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ನಾಡಿನ ರೈತರ 4 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವುದಾಗಿ ಅವರು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, 4 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂದು ತಿಳಿಸಿದರು.

4.. ನಾಳೆ ಹುಣಸೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ
ಹನುಮ ಜಯಂತಿ ಹಿನ್ನೆಲೆ ಮೈಸೂರು ಜಿಲ್ಲೆಯ ಹುಣಸೂರಿನ ಎಲ್ಲ ಸರ್ಕಾರಿ ಹಾಗೂ ಅನುದಾನಿತ, ಅನುದಾನರಹಿತ, ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಶಾಲೆ ಕಾಲೇಜುಗಳಿಗೆ ಒಂದು ದಿನ ರಜೆಯನ್ನು ಘೋಷಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ( K V Rajendra) ಅವರು ಡಿಸೆಂಬರ್‌ 26 ರಂದು ರಜೆಯನ್ನು ಘೋಷಣೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗೃತ ಎಚ್ಚರಿಕೆಯಾಗಿ ಯಾವುದೇ ಅವಘಡಗಳು ಸಂಭವಿಸದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

5.. ಹೊರಗುತ್ತಿಗೆಯಲ್ಲಿ ಮೀಸಲಾತಿ : ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
ರಾಜ್ಯದ ವಿವಿಧ ಇಲಾಖೆಗಳಲ್ಲಿ ಪ್ರಸ್ತುತವಾಗಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ, ಮೀಸಲಾತಿಯಡಿಯಲ್ಲಿ ಭರ್ತಿ ಮಾಡಿಕೊಳ್ಳಲು ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಮೀಸಲು ಸೇರಿ ಸದ್ಯ ಚಾಲ್ತಿಯಲ್ಲಿರುವ ಮೀಸಲು ನೀತಿ ಈ ಹೊರಗುತ್ತಿದೆ ಸೇವೆಗೆ ಒಳಗಾಗಲಿದೆ. ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡಲು ಇದೇ ಮೊದಲ ಬಾರಿಗೆ ಹೊರುಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಪದ್ಧತಿ ಅಳವಡಿಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ.