News

ದೋಷಯುಕ್ತ ದ್ವಿಚಕ್ರ ವಾಹನ ತಯಾರಿಸಿದ ಟಿ.ವಿ.ಎಸ್. ಮೋಟಾರ ಕಂಪನಿ ಮತ್ತು ಶೋರೂಮ್‌ಗೆ ದಂಡ!

22 May, 2023 8:00 PM IST By: Kalmesh T
Defective two-wheeler manufactured by T.V.S. Fine for motor company and showroom!

ದೋಷಯುಕ್ತ ದ್ವಿ ಚಕ್ರ ವಾಹನ ತಯಾರಿಸಿದ ಟಿ.ವಿ.ಎಸ್. ಮೋಟಾರ ಕಂಪನಿ ಮತ್ತು ಶೋರೂಮ್ ರವರಿಗೆ ದಂಡ ಮತ್ತು ಪರಿಹಾರ ಕೊಡುವಂತೆ ಆದೇಶಿಸಿದ ಗ್ರಾಹಕರ ಆಯೋಗ

ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿ ನಿವಾಸಿ ಅಶೋಕ ಗೌರೋಜಿ ವಕೀಲರು ದಿ:23/10/2020 ರಂದು ಟಿ.ವಿ.ಎಸ್. ಕಂಪನಿಯ ಸ್ಕೂಟಿ ಪೆಪ್ ಪ್ಲಸ್ ವಾಹನವನ್ನು ಧಾರವಾಡದ ಸರೂರ ಮೋಟಾರ್ಸ್ ಅನ್ನುವ ಡೀಲರ್‌ನಿಂದ ರೂ.67,500/- ಗೆ ಖರೀದಿಸಿದ್ದರು.

ನಂತರ ಆ ವಾಹನವನ್ನು ದೂರುದಾರ ಅಶೋಕ ರಸ್ತೆಯಲ್ಲಿ ಸಾವಧಾನವಾಗಿ ಓಡಿಸುವಾಗ ಅದು ಒಮ್ಮಿಂದೊಮ್ಮೆ ಬಂದ್ ಬೀಳುವುದು ಮತ್ತು ಆ ವಾಹನದ ಬ್ರೆಕ್ ಫೇಲ್ ಆಗುವುದು ಇತ್ಯಾದಿ, ದೋಷಗಳೊಂದಿಗೆ ವಾಹನ ಖರೀದಿಸಿದ ಒಂದು ತಿಂಗಳಿನಿಂದಲೇ ಸರೂರ್ ಮೋಟಾರ್ಸ್‍ರವರಿಗೆ ವಾಹನ ಸಮೇತ ದೂರು ಸಲ್ಲಿಸುತ್ತಿದ್ದರು.

ಅಲ್ಲಿಯ ಮೆಕ್ಯಾನಿಕ್ ದೋಷ ಸರಿಪಡಿಸಿದ್ದೇವೆ ಅಂತಾ ದೂರುದಾರರಿಗೆ ಕೊಟ್ಟರೂ ಆ ವಾಹನ ಪದೇ ಪದೇ ಅಂತಹದೇ ದೋಷಗಳಿಂದ ತೊಂದರೆ ಕೊಡುತ್ತಿತ್ತು.

ಅದರಿಂದ ರಸ್ತೆಯ ಮೇಲೆ ವಾಹನ ಓಡಿಸುವಾಗ ಒಮ್ಮಿಂದೊಮ್ಮೆ ಬಂದ್ ಬೀಳುವುದರಿಂದ ತನ್ನ ಜೀವಕ್ಕೆ ತೊಂದರೆಯಾಗುವ ಪ್ರಸಂಗಗಳು ಬಂದಿದ್ದವೆಂದು ಹೇಳಿ ಆ ವಾಹನದ ಉತ್ಪಾದನೆಯಲ್ಲಿ ದೋಷ ಇದೆ ಮತ್ತು ತನಗೆ ಅದರಿಂದ ತೊಂದರೆಯಾಗಿದೆ ಅಂತಾ ಹೇಳಿ ವಾಹನ ತೆಗೆದುಕೊಂಡು ಅದರ ಮೌಲ್ಯ ವಾಪಸ್ಸು ಕೊಡುವಂತೆ ಮತ್ತು ತನಗೆ ಆಗಿರುವ ತೊಂದರೆಗೆ ಪರಿಹಾರ ಮತ್ತು ಪ್ರಕರಣದ ಖರ್ಚು ನೀಡುವಂತೆ ಕೋರಿ ದೂರುದಾರ ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ದಿ:23/10/2020 ರಂದು ಟಿ.ವಿ.ಎಸ್. ಕಂಪನಿಯ ಸ್ಕೂಟಿ ಪೆಪ್ ಪ್ಲಸ್ ಉತ್ಪಾದಿಸಿದ ದ್ವಿಚಕ್ರ ವಾಹವನ್ನು ಖರೀದಿಸಿದ ಸುಮಾರು ಒಂದು ತಿಂಗಳ ನಂತರದಿಂದ ಪದೇ ಪದೇ ಅದು ರಸ್ತೆಯಲ್ಲಿ ಸಡನ್ನಾಗಿ ನಿಲ್ಲುವುದು, ಬ್ರೆಕ್ ಫೇಲ್ ಆಗುವುದು ಸರೂರ ಮೋಟಾರ್ಸ್‍ರವರು ಹಾಜರು ಮಾಡಿದ ಜಾಬ್ ಕಾರ್ಡನಿಂದ ಕಂಡು ಬರುತ್ತದೆ.

ಹೊಸ ವಾಹನ ಆ ರೀತಿ ಪದೇ ಪದೇ ಬಂದ್ ಬೀಳುವುದು, ಬ್ರೇಕ್ ಫೇಲ್ ಆಗುವುದು ಉತ್ಪಾದನಾ ದೋಷ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಆ ವಾಹನದ ಉತ್ಪಾದನೆಯಲ್ಲಿ ದೊಷ ಕಂಡುಬಂದಿರುವುದರಿಂದ ಮತ್ತು ಪದೇ ಪದೇ ಅಂತಹದೇ ದೋಷಗಳು ಆಗುತ್ತಿರುವುದರಿಂದ ದೂರುದಾರರಿಗೆ ಆ ವಾಹನ ಓಡಿಸಲು ತೊಂದರೆ ಅಂತಾ ಅಭಿಪ್ರಾಯಪಟ್ಟು ಆ ವಾಹನದ ಮೌಲ್ಯವನ್ನು ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ.

ಈಗಾಗಲೇ ಆ ವಾಹನವನ್ನು ಸುಮಾರು ಒಂದು ವರ್ಷ 5200 ಕಿ.ಮೀ. ಗಿಂತ ಹೆಚ್ಚು ಓಡಿಸಿರುವುದರಿಂದ ಅದರ ಖರೀದಿ ಮೌಲ್ಯ ರೂ.67,500/- ದಲ್ಲಿ ರೂ.17,500/- ಡೆಪ್ರಿಸಿಯೇಷನ್ ಮೌಲ್ಯ ತೆಗೆದು ಇನ್ನುಳಿದ ರೂ. 50,000/- ಅನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎಲ್ಲ ಎದುರುದಾರರು ದೂರುದಾರರಿಗೆ ಕೊಡುವಂತೆ

ಮತ್ತು ವಾಹನದ ದೋಷದಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತ ಮಾನಸಿಕ ತೊಂದರೆಗಾಗಿ ರೂ.25,000/- ಪರಿಹಾರ ಹಾಗೂ ರೂ.5,000/- ಪ್ರಕರಣದ ಖರ್ಚು ಕೊಡಿಸುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.