News

ಕೊರೋನಾ ಕರ್ಫ್ಯೂ ವಿಸ್ತರಣೆ ಬಗ್ಗೆ ಮೇ 10ಕ್ಕೆ ನಿರ್ಧಾರ: ಸಿಎಂ ಯಡಿಯೂರಪ್ಪ

06 May, 2021 1:22 PM IST By:

ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಈಗಿರುವ ಕೊರೋನಾ ಕರ್ಫ್ಯೂ ವಿಸ್ತರಣೆ ಸಾಧ್ಯತೆ ಬಹಳವೇ ಇದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಯಥಾಸ್ಥಿತಿಯೇ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಿರುವ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆಗಳು ಅಥವಾ ಲಾಕ್ ಡೌನ್ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಬಂದ ಬಳಿಕವಷ್ಟೇ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

 ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಇನ್ನೂ ಎರಡು ವಾರಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.ರಾಜ್ಯದಲ್ಲಿ ನಿನ್ನೆ ಒಂದೇ ದಿನ 50 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು ಮೇ ಮದ್ಯಭಾಗದ ವೇಳೆ 5 ಲಕ್ಷ ಗಡಿ ದಾಟುವ ಸಾದ್ಯತೆ ಇದೆ.ಹೀಗಾಗಿ ಎರಡು ವಾರ ಲಾಕ್ ಡೌನ್ ಮಾಡುವಂತೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಕಂಪೂಟೇಷನಲ್ ಮತ್ತು ಡಾಟಾ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ, ಶಶಿಕುಮಾರ್ ಗಣೇಶನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುವ ಮೂಲಕ ಕಠಿಣ ಕ್ರಮ ಕೈಗೊಂಡು ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕೇರಳದಲ್ಲಿ, ಮೇ 8-16ರವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌

ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮೇ 8 ರಿಂದ 16ರವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದಾರೆ.

ಸದ್ಯ ಕೇರಳದಲ್ಲಿ ರಾತ್ರಿ 9 ಗಂಟೆಯಿಂದ ಆರಂಭಿಸಿ ಬೆಳಿಗ್ಗೆ 5 ಗಣಟೆವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿದೆ. ಜತೆಗೆ ವಾರಾಂತ್ಯದಲ್ಲಿ ಭಾಗಶಃ ಲಾಕ್‌ಡೌನ್‌ ಮಾಡದರಿಯ ನಿರ್ಬಂಧಕಾಜ್ಞೆಗಳು ಜಾರಿಯಲ್ಲಿವೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯ ಹೊಡೆತ ಜೋರಾಗಿದ್ದು, ಹಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಭಾಗಶಃ ಲಾಕ್‌ಡೌನ್‌, ನಿರ್ಬಂಧಕಾಜ್ಞೆಗಳು ಜಾರಿಯಲ್ಲಿವೆ.