News

ಕಬ್ಬು ಬೆಳೆಗಾರರ ಸಂಕಷ್ಟದ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚೆ: ಪರಿಹಾರಕ್ಕೆ ಆಗ್ರಹ

21 December, 2022 9:59 AM IST By: Hitesh
Debate in Vidhan Parishad on sugarcane farmers' plight: Demand for relief

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು, ಸಕ್ಕರೆ ಕಂಪನಿ ಮಾಲೀಕರಿಂದ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಹಾಗೂ ಕಂಪನಿಗಳು ರೈತರಿಂದ ಉಳಿಸಿಕೊಂಡಿರುವ ಬಾಕಿ ಮೊತ್ತವನ್ನು ಶೀಘ್ರ ಪಾವತಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದ ಹಲವು ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ಹಲವರು ಬೆಂಬಲವನ್ನೂ ನೀಡಿದ್ದಾರೆ. ಕಬ್ಬು ಬೆಳೆಗಾರರ ಸಂಕಷ್ಟದ ಕುರಿತು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಸುದೀರ್ಘ ಚರ್ಚೆ ನಡೆಯಿತು.  

ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್‌ ರಾಠೋಡ್‌ ಮಾತನಾಡಿ ಪ್ರತಿ ಟನ್‌ಗೆ ಆಂಧ್ರಪ್ರದೇಶದಲ್ಲಿ 3,200 ರೂಪಾಯಿ, ತಮಿಳುನಾಡಿನಲ್ಲಿ 3,150 ರೂಪಾಯಿ,, ಉತ್ತರ ಪ್ರದೇಶದಲ್ಲಿ 3,500 ರೂಪಾಯಿ, ಹರಿಯಾಣದಲ್ಲಿ 3,700 ರೂಪಾಯಿ, ಪಂಜಾಬ್‌ನಲ್ಲಿ  3,800 ರೂಪಾಯಿ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಅತಿ ಕಡಿಮೆ ದರ ನೀಡಲಾಗುತ್ತಿದೆ. ಇದು ಕಬ್ಬು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ ಎಂದರು.   

ಸಕ್ಕರೆ ಸಚಿವ ಶಂಕರ್‌ ಪಾಟೀಲ ಮುನೇನಕೊಪ್ಪ ಅವರು ಮಾತನಾಡಿ, ಬೇರೆ ರಾಜ್ಯಗಳಲ್ಲಿ ಎಸ್‌ಎಪಿ ಕಾನೂನು ಇದೆ. ಕರ್ನಾಟಕದಲ್ಲಿ ಈ ಕಾನೂನು ಜಾರಿಗೊಳಿಸಿಲ್ಲ. ಎಫ್‌ಆರ್‌ಪಿ ಆಧಾರದ ಮೇಲೆ ಹಲವು ಕಾರ್ಖಾನೆಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ನೀಡುತ್ತಿವೆ. 73 ಕಾರ್ಖಾನೆಗಳ ಪೈಕಿ 34ರಲ್ಲಿ ಎಥನಾಲ್‌ ಉತ್ಪಾದನೆ ಮಾಡಲಾಗುತ್ತಿದೆ. ಹೊಸದಾಗಿ ಎಥನಾಲ್‌ ತಯಾರಿಸಲು 41 ಕಾರ್ಖಾನೆಗಳು ಅರ್ಜಿ ಸಲ್ಲಿಸಿವೆ.

ಜತೆ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.   

 ಕಬ್ಬು ಬೆಳೆ ಲಾಭದಾಯಕ ಎಂದು ಸರ್ಕಾರವೇ ಹೇಳುತ್ತಿದೆ. ಆದರೆ, ರೈತರಿಗೆ ನ್ಯಾಯಬದ್ಧವಾದ ಬೆಲೆಯನ್ನು ಏಕೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಂಕರ ಪಾಟೀಲ ಮುನೇನಕೊಪ್ಪ ಅವರು, ತೂಕದಲ್ಲಿ ಮೋಸ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಕ್ರಮ ಕೈಗೊಳ್ಳುತ್ತಿದ್ದು, ಇದೇ  ಮೊದಲ ಬಾರಿ ದಾಳಿ ನಡೆಸಲಾಗಿದೆ. ಈ ರೀತಿ ದಾಳಿಗಳು ನಿರಂತರವಾಗಿ ನಡೆಯಲಿವೆ.  ತೂಕದಲ್ಲಿ ಮೋಸ ಮಾಡಿದರೆ ಕ್ರಮ  ಜರುಗಿಸಲಾಗುವುದು ಎಂದರು.