News

ಮದುವೆ ಸಮಾರಂಭಕ್ಕೆ ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ-ಪಾಸ್ ಇದ್ದರಷ್ಟೇ ಪ್ರವೇಶ

18 April, 2021 9:48 AM IST By:
Marriage

ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮದುವೆಯಲ್ಲಿ 100 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದುವೆಗಳಲ್ಲಿ ಭಾಗವಹಿಸಲು ಪಾಸ್ ಕಡ್ಡಾಯ. ಮದುವೆ ಸಮಾರಂಭಕ್ಕೆ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯಗೊಳಿಸಿದೆ.

ಒಳಾಂಗಣ ಕಾರ್ಯಕ್ರಮಕ್ಕೆ 100, ಹೊರಾಂಗಣಕ್ಕೆ 200 ಜನರಿಗೆ ಪಾಸ್‌ ನೀಡಲಾಗುವುದು. ಪಾಸ್ ಇದ್ದರಷ್ಟೇ ಮದುವೆ ಸಮಾರಂಭಗಳಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಅವಲೋಕಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಜೊತೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಬಳಿಕ ಕಂದಾಯ ಸಚಿವ ಆರ್‌. ಅಶೋಕ, ಈ ವಿಷಯ ತಿಳಿಸಿದರು.

ಈಗಾಗಲೇ ಕಲ್ಯಾಣ ಮಂಟಪ ಬುಕ್ ಆಗಿರುವ ಮದುವೆಗಳಿಗೆ ಪಾಸ್ ನಿಯಮ ಅನ್ವಯಿಸುವುದಿಲ್ಲ. ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೂ ಪಾಸ್‌ ಪಡೆಯಬೇಕು’ ಎಂದರು.

ನಿರ್ಬಂಧ ಮೀರಿ ಜಾತ್ರೆ ನಡೆದರೆ ಡಿಸಿ, ಎಸ್ಪಿಗಳನ್ನೇ ಹೊಣೆ ಮಾಡುವ ಎಚ್ಚರಿಕೆ ನೀಡಲಾಗಿದೆ. ಜಾತ್ರೆ ನಡೆಯದಂತೆ ಮೊದಲೇ ಕ್ರಮ ಕೈಗೊಳ್ಳಬೇಕೆ ವಿನಾ ಜನಸಮೂಹದ ಮೇಲೆ ಲಾಠಿ ಪ್ರಹಾರ ನಡೆಸದಂತೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆ ಆಗಬಾರದು. ಕೋವಿಡ್‌ ನಿರ್ವಹಣೆಗೆ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು. ಸೋಂಕಿನಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಬೇರೆ ದೇಶಗಳಲ್ಲಿ ಕೋವಿಡ್‌ ಮೂರನೇ ಅಲೆ ಕಾಣಿಸಿಕೊಂಡಿದೆ. ನಾವು ಆ ಹಂತಕ್ಕೆ ಹೋಗಬಾರದೆಂದು ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಎರಡನೇ ಅಲೆ ನಿಯಂತ್ರಿಸಲು ಯಾವುದೇ ಸಮಸ್ಯೆ ಆಗಬಾರದು. ಡೇಟಾ ಎಂಟ್ರಿ, ಸಿಬ್ಬಂದಿ ವೇತನ ಸಮಸ್ಯೆ ಆಗದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಬೆಂಗಳೂರಿನಲ್ಲಿ ಸೋಂಕು ನಿಯಂತ್ರಿಸಲು ಏ. 19 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಗರದ ಸಂಸದರು ಶಾಸಕರು ಮತ್ತು ಅಧಿಕಾರಿಗಳ ಜತೆ ಸಂವಾದ ನಡೆಸಲಿದ್ದಾರೆ ಎಂದರು.

ಹೊಸ ನಿಯಮಗಳು ಏನು?

ಹೊಸದಾಗಿ ನಿಗದಿಯಾಗುವ ಮದುವೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ

ಮಿತಿಗಿಂತ ಹೆಚ್ಚು ಜನ ಸೇರಿದರೆ ಕಲ್ಯಾಣ ಮಂಟಪಕ್ಕೆ ಬೀಗ

ಮದುವೆ ಆಯೋಜಿಸಿದವರ ವಿರುದ್ಧ ಎಫ್ಐಆರ್

ತಹಶೀಲ್ದಾರ ಪಾಸ್ ವಿತರಿಸಿ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಬೇಕು

ಒಳಾಂಗಣ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಜನಮಿತಿ 100

ಹೊರಾಂಗಣ ಕಾರ್ಯಕ್ರಮಗಳಿಗೆ ಜನಮಿತಿ 100

ಜಾತ್ರೆ ನಡೆದರೆ ಜಿಲ್ಲಾಧಿಕಾರಿ, ಎಸ್.ಪಿ ಗಳೇ ಹೊಣೆ