News

ಕಳಪೆ ಗುಣಮಟ್ಟದ ಈರುಳ್ಳಿಗೂ ಬಂಗಾರದ ಬೆಲೆ- ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ

21 October, 2020 1:37 PM IST By:

ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರೆಕೆಯಾಗುತ್ತಲೇ ಇದ್ದು, ಕಳೆದ ಒಂದು ವಾರದಿಂದ  ಪ್ರತಿ ದಿನ ಬೆಲೆ ಹೆಚ್ಚಾಗುತ್ತಲೇ ಇದೆ. ಕಳಪೆ ಗುಣಮಟ್ಟದ ಈರುಳ್ಳಿಗೂ ಇದೀಗ ಬೇಡಿಕೆ ಬರುತ್ತಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸಹ ಈರುಳ್ಳಿ ಬೆಲೆ 100 ರ ಗಡಿ ದಾಟಿತ್ತು. ಈ ವರ್ಷವೂ ಸಹ ಉತ್ತಮ ಗುಣಮಟ್ಟದ ಈರುಳ್ಳಿ ಸೆಂಚುರಿ ಬಾರಿಸಿದೆ.

ಮಹಾರಾಷ್ಟ್ರ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಈರುಳ್ಳಿ ಸರಬರಾಜು ಸ್ಥಗಿತವಾ ಗಿದ್ದು, ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಪಿಎಂಸಿಯಲ್ಲಿ ಸಣ್ಣ ಈರುಳ್ಳಿ ಬೆಲೆ 60 ಇದ್ದರೆ, ಮಧ್ಯಮ ಈರುಳ್ಳಿಯ ದರ 80-90 ಹಾಗೂ ದೊಡ್ಡ ಈರುಳ್ಳಿಯ ದರ 100 ರುಪಾಯಿಗೆ ಮಾರಾಟವಾಗುತ್ತಿದೆ.. ಇನ್ನೆರಡು ದಿನಗಳಲ್ಲಿ ಇದು 120-130 ರೂಪಾಯಿ ದಾಟಲಿದೆ ಎನ್ನುವ ಮಾತುಗಳು ವರ್ತಕರಿಂದ ಕೇಳಿ ಬರುತ್ತಿದೆ.

ಕರ್ನಾಟಕಕ್ಕೆ ಹೆಚ್ಚಾಗಿ ಈರುಳ್ಳಿ ಮಹಾರಾಷ್ಟ್ರ, ಪೂನಾ, ನಾಸಿಕ್, ಕೊಲ್ಲಾಪುರ ಭಾಗದಿಂದ ಬರುತ್ತದೆ. ಉತತ್ರ ಕರ್ನಾಟಕದಲ್ಲಿಯೂ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತಿದೆ. ಆದರೆ ಈ ವರ್ಷ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದ್ದರಿಂದ ಎಪಿಎಂಸಿಗೆ ಆವಕ ಕಡಿಮೆಯಾಗಿದೆ.

ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದ್ದ ವೇಳೆ ಉಂಟಾದ ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದು, ಎಕರೆಗೆ ಸರಾಸರಿ 250 ಚೀಲದಷ್ಟು ಸಿಗುತ್ತಿದ್ದ ಈರುಳ್ಳಿಯ ಪ್ರಮಾಣ 70 ಚೀಲಗಳಿಗೆ ಇಳಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನುವುದು ಈರುಳ್ಳಿ ವರ್ತಕರ ಮಾತು.  ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಮಳೆ ಸುರಿದರೆ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.