News

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲು- ಸಮಾನ ಆಸ್ತಿ ಹಕ್ಕು (Property rights) ಎತ್ತಿ ಹಿಡಿದ ಸುಪ್ರಿಂ

12 August, 2020 11:13 AM IST By:

 ಭಾರತೀಯ ಹಿಂದೂ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳು 2005ಕ್ಕೆ ಮುನ್ನ ತಮ್ಮ ತಂದೆ ತೀರಿಹೋಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಿಗಬೇಕಿರುವ ಸಮಪಾಲು ಪಡೆಯಲು ಅರ್ಹರು (Daughters have equal coparceners rights ) ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಪ್ರಕಟಿಸಿದೆ. 

ಅಲ್ಲದೆ ತನ್ನಿಂದ ಈ ಸ್ಪಷ್ಟನೆಗಾಗಿ ಕಾಯುತ್ತ, ಇತ್ಯರ್ಥಪಡಿಸದೆ ಇರುವ ಆಸ್ತಿ ಹಕ್ಕು (property rights) ಪ್ರಕರಣಗಳನ್ನು 6 ತಿಂಗಳೊಳಗೆ ಇತ್ಯರ್ಥಗೊಳಿಸುವಂತೆ ಎಲ್ಲ ಕೆಳ ನ್ಯಾಯಾಲಯಗಳಿಗೆ ಸೂಚಿಸಿದೆ.

ಒಮ್ಮೆ ಪುತ್ರಿ (Daughters) ಯಾದವಳು ಯಾವಾಗಲೂ ಪುತ್ರಿಯೇ ಆಗಿರುತ್ತಾಳೆ. ಪುತ್ರಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಆಕೆಯ ಜೀವನಪರ್ಯಂತ ಹಕ್ಕಿರುತ್ತದೆ. ತಂದೆ ಬದುಕಿರಲಿ ಅಥವಾ ಬದುಕಿಲ್ಲದೆ ಇರಲಿ, ಆಕೆಗೆ ಸಮಾನ ಹಕ್ಕು ಇರುತ್ತದೆ ಎಂದು ನ್ಯಾ. ಅರುಣ್ ಮಿಶ್ರಾ ಅವರ ತ್ರಿಸದಸ್ಯ ಪೀಠ ಮಂಗಳವಾರ ನೀಡಿರುವ ಆದೇಶದಲ್ಲಿ ತಿಳಿಸಿದೆ.

ಹಿಂದೂ ಅವಿಭಕ್ತ ಕುಟುಂಬಗಳ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಸಮಪಾಲು ಪಡೆಯುವ ಹಕ್ಕುಳ್ಳವರು ಎಂದು 2005ರ ಸೆ. 9ರಂದು ಸುಪ್ರೀಂ ಕೋರ್ಟ್‌ (Supreme court) ತೀರ್ಪು ನೀಡಿತ್ತು. ಆ ತೀರ್ಪಿನ ಅನ್ವಯ ಹಿಂದೂ ಉತ್ತರಾಧಿಕಾರ ಕಾಯ್ದೆ (ಎಚ್‌ಎಸ್‌ಎ) ರೂಪಿಸಲಾಗಿದೆ. ಆದರೆ 2005ಕ್ಕೂ ಮುನ್ನ ತಂದೆ ತೀರಿದ್ದಲ್ಲಿ ಈ ಕಾಯ್ದೆ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಇತ್ತು. ಈಗ ಈ ಕುರಿತಾಗಿ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಸ್ಪಷ್ಟತೆ ಲಭಿಸಿದೆ.

ಅನುಕೂಲವೇನು?

ಈ ತೀರ್ಪಿನಿಂದಾಗಿ 2005ರಲ್ಲಿ ಎಚ್‌ಎಸ್‌ಎ ಕಾಯ್ದೆ ತಿದ್ದುಪಡಿ ಆಗುವುದಕ್ಕೂ ಮುನ್ನ ಅಥವಾ ತಿದ್ದುಪಡಿಯ ಅನಂತರ ಪುತ್ರಿ ಜೀವಂತ ಇರಲಿ, ಇಲ್ಲದಿರಲಿ; ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹಳಾಗಿರುತ್ತಾಳೆ. ಪುತ್ರಿ ಜೀವಂತವಾಗಿಲ್ಲದಿದ್ದರೂ ಆಕೆಯ ಮಕ್ಕಳು ತಮ್ಮ ತಾಯಿಗೆ ಸಿಗಬೇಕಾದ ಹಕ್ಕುಗಳನ್ನು ಕೇಳಬಹುದು.