News

ನಿವಾರ್ ಚಂಡಮಾರುತದ ಪರಿಣಾಮವಾಗಿ ರಾಜ್ಯದಲ್ಲಿ ಗುರುವಾರ ಮಳೆಯಾಗುವ ಸಾಧ್ಯತೆ

26 November, 2020 9:47 AM IST By:

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿ ತತ್ತರಿಸಿದ ಜನತೆಗೆ ಈಗ ನಿವಾರ್ ಚಂಡಮಾರುತದ ಆತಂಕ ಶುರವಾಗಿದೆ.

‘ನಿವಾರ್’ ಚಂಡಮಾರುತದ ಪರಿಣಾಮವಾಗಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕು ದಿನ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ನ.26 ಮತ್ತು 28ರಂದು ಅಲ್ಲಲ್ಲಿ ಮಳೆಯಾಗಲಿದೆ.

ತಮಿಳುನಾಡು, ಪದುಚೇರಿ ಕರಾವಳಿಗೆ ಅಪ್ಪಳಿಸಿದ ನಿವಾರ್‌ ಚಂಡಮಾರುತ: ಬಿರುಗಾಳಿ, ಭಾರಿ ಮಳೆಗೆ ಬೆಚ್ಚಿಬಿದ್ದ ಜನ!

ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ತೀರಕ್ಕೆ ಬಂದು ನಿವಾರ್ ಚಂಡಮಾರು ಅಪ್ಪಳಿಸಿದೆ. ಇನ್ನು ಪ್ರಚಂಡ ಚಂಡಮಾರುತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿ ಸೃಷ್ಟಿಯಾಗಿದೆ.

ಪುದಚೇರಿ ಕರಾವಳಿಗೆ ರಾತ್ರಿ 11.30 ರಿಂದ 2.30 ರ ನಡುವೆ 120- 130 ಕಿಮೀ ವೇಗದಲ್ಲಿ ಬಂದು ಅಪ್ಪಳಿಸಿದೆ. ಸತತ ಮೂರು ಗಂಟೆಗೂ ಹೆಚ್ಚಿನ ಕಾಲ ಅಪ್ಪಳಿಸಿ ಮುಂದೆ ಸಾಗಲು ಅದು ಸಮಯ ತೆಗೆದುಕೊಂಡಿದೆ. ಗಾಳಿಯ ರಭಸಕ್ಕೆ ಹಲವು ಮರಗಳು ಧರೆಗೆ ಉರುಳಿದೆ. ಅಲ್ಲದೆ ಹಲವು ಸಾರ್ವಜನಿಕ ಆಸ್ತಿಗಳಿಗೂ ಹಾನಿಯಾಗಿದೆ. ಇನ್ನು ಸದ್ಯ ತಮಿಳುನಾಡು ಹಾಗೂ ಪುದುಚೇರಿ ಕಡಲತೀರವನ್ನು ಪಾಸ್‌ ಆಗಿ ನಿವಾರ್‌ ಚಂಡಮಾರುತ ಮುಂದೆ ಚಲಿಸಿದ್ದು, ಗುರುವಾರ ಸಂಜೆವರೆಗೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.