News

ಕರಾವಳಿ, ಮಲೆನಾಡು ಭಾಗದಲ್ಲಿ 16, 17 ರಂದು ಭಾರಿ ಮಳೆ ಸಾಧ್ಯತೆ-ರೆಡ್ ಅಲರ್ಟ್

14 May, 2021 9:39 AM IST By:
rain alert

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮೇ 16 ಮತ್ತು 17 ರಂದು ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿರುವುದರಿಂದ ರೆಡಲ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 16 ರಂದು, 17 ರಂದು ಹಾಗೂ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಮೇ 16 ರಂದು ವ್ಯಾಪಕ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ವೇಳೆ ಸರಾಸರಿ 20 ಸೆಂ.ಮೀ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ, ಈ ಭಾಗಗಳಲ್ಲಿ ಮೇ 14 ರಂದು ಯೆಲ್ಲೋ ಮಲ್ಲು 15 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.ಗಾಳಿ ವೇಗ ಹೆಚ್ಚಿರುವ ಹಿನ್ನೆಲೆಯಲ್ಲಿ ಸಮುದ್ರ ತೀರದ ನಿವಾಸಿಗಳು ಹಾಗೂ ಮೀನುಗಾರರು ಎಚ್ಚರಿಕೆಯಿಂದಿರಬೇಕು ಎಂದು ಇಲಾಖೆ ತಿಳಿಸಿದೆ.

ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೇ 18ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ.

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುರುವಾರ ಸಿಡಿಲು ಹಾಗೂ ಗುಡುಗಿನೊಂದಿಗೆ ಮಳೆ ಆರ್ಭಟಿಸಿದ್ದು, ಸಿಡಿಲಿಗೆ ಒಬ್ಬರು ಬಲಿಯಾಗಿದ್ದಾರೆ. ಹೊಸನಗರ ತಾಲೂಕು ಹೊಂಡ್ಲಗದ್ದೆ ಸಮೀಪದ ಹಾಡಿಗದ್ದೆ ಉಮೇಶ (47) ಮೃತ. ಸಂಜೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ.

ಮಿಂಚು-ಗುಡುಗು ಸಹಿತ ಧಾರಾಕಾರ ಮಳೆ

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳು ಸೇರಿ ರಾಜ್ಯದ ವಿವಿಧೆಡೆ ಗುರುವಾರ ಉತ್ತಮ ಮಳೆಯಾಗಿದೆ. ಹೊಸಸಕೊಟೋ ತಾಲೂಕು ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಆಲಿಕಲ್ಲು ಮಳೆಗೆ ಸಿಲುಕಿ 280 ಹೆಕ್ಟೇರ್ ದ್ರಾಕ್ಷಿ ಬೆಳೆ ಹಾನಿಯಾಗಿದೆ. ನಗರದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಬಿಟಿಎಂ ಲೇಔಟ್ನ ಗಂಗೋತ್ರಿ ಬಳಿ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ ಯಾವುದೇ ಅನಾಹುತ ಸಂಭವಿಸಿಲ್ಲ.

ಅರಬ್ಬಿ ಸಮುದ್ರ ಭಾಗದಲ್ಲಿ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.