News

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ- ಮೇ 15 ರಿಂದ ಭಾರಿ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ

14 May, 2021 9:14 AM IST By:

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರ ನಗರ ಸೇರಿದಂತೆ ಜಿಲ್ಲೆಯ ಕರಾವಳಿಯ ವಿವಿಧೆಡೆ ಮಳೆಯಾಗಲಿದೆ  ಸಮುದ್ರದ ಆಗ್ನೆಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೇ 14 ರ ನಂತರ ಚಂಡಮಾರುತವಾಗಿ ಪರಿವರ್ತನೆಯಾಗಬಹುದು.

ಹೀಗಾಗಿ ಮೇ. 15 ಹಾಗೂ 16 ರಂದು  ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಗಂಡೆಗೆ 70-80 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. 120-200 ಮಿ.ಮೀ ಮಳೆ ಬೀಳುವ ಮುನ್ಸೂಚನೆಯಿದ್ದು, ಜಿಲ್ಲೆಯ ಎಲ್ಲಾ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರದ ಕಡೆಗೆ ಬರದಿರುವಂತೆ ಎಚ್ಚರಿಕೆ ನೀಡಲಾಗಿದೆ.

ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕೂಡಲೇ ದಡಕ್ಕೆ ಮರಳುವಂತೆ ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕಾ ಇಲಾಖೆಯಿಂದ ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಗಾಳಿ, ಮಳೆ ಸಂದರಅಭದಲ್ಲಿ ಮಕ್ಕಳು ಸಾರ್ವಜನಿಕರು ಸಮುದ್ರದ ಕಡೆಗೆ ಬರಬಾರದು. ಜೊತೆಗೆ ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಹಾಗೂ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳಬೇಕು. ಮಳೆ, ಗಾಳಿಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಇರುವಂತಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಸಾರ್ವಜನಿಕರು ಇಂತಹ ಸಂದರ್ಭದಲ್ಲಿ ತುರ್ತು ಸೇವೆಗಾಗಿ ಇಲಾಖೆಯ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂನ ಟೋಲ್ ಫ್ರೀ ಸಂಖ್ಯೆ 1077 ಅಥವಾ ವ್ಯಾಟ್ಸಪ್ ನಂಬರ್ 9483511015 ಗೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಹೆಚ್.ಕೆ, ಕೃಷ್ಣಮೂರ್ತಿ ತಿಳಿಸಿದ್ದಾರೆ.

ಗುಜರಾತ್ ಭಾಗದ ಕರಾವಳಿಯಲ್ಲಿ ಉಂಟಾಗಿರುವ ವಾಯಭಾರ ಕುಸಿತದಿಂದಾಗಿ ಚಂಡಮಾರುತ ಉಂಟಾಗಲಿದ್ದು, ಮ್ಯಾನ್ಮಾರ್  ದೇಶವು ಅದಕ್ಕೆ ತೌಕ್ತೆ (ಹಲ್ಲಿ) ಎಂದು ಹೆಸರಿಟ್ಟಿದೆ.

ಕಳೆದ ವರ್ಷ ಸಂಭವಿಸಿದ ನಿಸರ್ಗ ಚಂಡಮಾರುತದಿಂದ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿತ್ತು.  ಈ ವರ್ಷ ಯಾವುದೇ ಹಾನಿಯನ್ನುಂಟು ಮಾಡದೆ ತೌಕ್ತೆ ಚಂಡಮಾರುತ ಹೋದರೆ ಸಾಕು. ಈಗಾಗಲೇ ಕೊರೋನಾದಿಂದಾಗಿ ಜನತೆ ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಮಹಾರಾಷ್ಟ್ರ ಗುಜರಾತಿನಲ್ಲಿ ಚಂಡಮಾರುತ-ಭಾರಿ ಮಳೆಯಾಗುವ ಸಾಧ್ಯತೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಈ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ..

ಅರೇಬಿಯನ್ ಸಮುದ್ರದ ಆಗ್ನೇಯ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದ್ದು, ಶುಕ್ರವಾರ ಬೆಳಗ್ಗೆ ಲಕ್ಷದ್ವೀಪ ತಲುಪಲಿದೆ. ಮುಂದಿನ 24 ತಾಸಿನಲ್ಲಿ ಮತ್ತಷ್ಟು ತೀವ್ರತೆಯ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಐಎಂಡಿ ತಿಳಿಸಿದೆ.

. ಮೇ 18ರ ಸಂಜೆ ವೇಳೆಗೆ ಗುಜರಾತ್ ಸಮೀಪ ತಲುಪುವ ನಿರೀಕ್ಷೆಯಿದೆ. ಈ ಕಾರಣದಿಂದಾಗಿ ದಕ್ಷಿಣ ಕೊಂಕಣ ಮತ್ತು ಗೋವಾ ಪ್ರದೇಶಗಳಲ್ಲಿ ಶನಿವಾರದಂದು ಮಳೆಯಾಗಲಿದ್ದು, ಭಾನುವಾರ ಹಾಗೂ ಸೋಮವಾರದಂದು ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಅದೇ ರೀತಿ ಮೇ 17ರಂದು ಗುಜರಾತ್ ಕರಾವಳಿಯಲ್ಲೂ ಮಳೆಯಾಗಲಿದೆ. ಮೇ 18ರ ವೇಳೆಗೆ ಸೌರಾಷ್ಟ್ರ, ಕಚ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮೇ 19ರಂದು ನೈಋತ್ಯ ರಾಜಸ್ಥಾನವನ್ನು ತಲುಪಲಿದೆ.