1. ಬಿಪರ್‌ಜಾಯ್ ಚಂಡಮಾರುತ; ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ!
2. ಎರಡು ದಿನಗಳಲ್ಲಿ ಕೇರಳಕ್ಕೆ ಮಾನ್ಸೂನ್ ಪ್ರವೇಶ: ವರದಿ
3. ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
4. ರಾಜ್ಯದ ವಿವಿಧೆಡೆ ಮುಂದುವರಿದ ಸಾಧಾರಣ ಮಳೆ
5. ರಾಜ್ಯದಲ್ಲಿ ಮೂರು ಕೃಷಿ ಕಾಯ್ದೆ ಹಿಂಪಡೆಯುವ ಕುರಿತು ಸಿ.ಎಂ ಚರ್ಚೆ
6. ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕಿ ಗೀತಾಂಜಲಿ ಅಯ್ಯರ್ ಇನ್ನಿಲ್ಲ
------------------
1. ಬಿಪರ್‌ಜಾಯ್ ಚಂಡಮಾರುತದಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಭಾರತದ ವಾಯು ಪ್ರದೇಶವನ್ನು ಬಿಪರ್‌ಜಾಯ್ ಚಂಡಮಾರುತ ಪ್ರವೇಶಿಸಿದ್ದು, ಉತ್ತರ ದಿಕ್ಕಿನ ಕಡೆಗೆ ವೇಗವಾಗಿ ಚಲಿಸುತ್ತಿದೆ.
ಮುಂದಿನ 24 ಗಂಟೆಯ ಅವಧಿಯಲ್ಲಿ ಚಂಡಮಾರುತವು ಉತ್ತರದ ಕಡೆಗೆ ಬಲವಾಗಿ ನುಗ್ಗಲಿದೆ ಎಂದು ಭಾರತೀಯ ಹವಾಮಾನ
ಇಲಾಖೆ ವರದಿ ಮುನ್ಸೂಚನೆ ನೀಡಿದೆ. ಅಲ್ಲದೇ ಎರಡು ದಿನಗಳಲ್ಲಿ ಬಿಪರ್‌ಜಾಯ್ ಚಂಡಮಾರುತವು ತೀವ್ರಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 135ರಿಂದ 145 ಕಿಮೀ ವೇಗ ಇರಲಿದೆ. ಅಲ್ಲದೇ, ಮುಂದಿನ ಮೂರರಿಂದ ನಾಲ್ಕು
ದಿನಗಳಲ್ಲಿ ಗಾಳಿಯ ವೇಗವು 160ಕಿ.ಮೀ ವರೆಗೂ ಬೀಸುವ ಸಾಧ್ಯತೆ ಇದೆ. ಹೀಗಾಗಿ, ಈ ಸಂದರ್ಭದಲ್ಲಿ
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಚಂಡಮಾರುತದಿಂದಾಗಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ
ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
------------------
2. ರಾಜ್ಯಕ್ಕೆ ಈ ಬಾರಿ ಮುಂಗಾರು ಅವಧಿಗಿಂತ ನಾಲ್ಕು ದಿನ ತಡವಾಗಿ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಮುಂಗಾರು ಅವಧಿಯ ಬಿತ್ತನೆ ಕಾರ್ಯವು ಪ್ರಾರಂಭವಾಗಬೇಕಾಗಿತ್ತು. ಆದರೆ ಮುಂಗಾರು ಪ್ರವೇಶ ವಿಳಂಬದಿಂದ ತಡವಾಗಿದೆ.
ಇನ್ನು ಎರಡು ದಿನಗಳಲ್ಲಿ ಮಾನ್ಸೂನ್ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ.
ನಂತರದಲ್ಲಿ ಕರ್ನಾಟಕ ಪ್ರವೇಶಿಸಲಿದ್ದು, ಉತ್ತಮ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
------------------
3. ರಾಜ್ಯದ ವಿವಿಧೆಡೆ ಸಾಧಾರಣ ಮಳೆ ಮುಂದುವರಿದಿದೆ. ಇನ್ನು ಮುಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಇನ್ನು ಹೊಳೆಹೊನ್ನೂರು, ಚನ್ನರಾಯಪಟ್ಟಣ, ಮಹಾಗಾವ್ ಹಾಗೂ ಶೋರಪುರದಲ್ಲಿ 3ರಿಂದ 1 ಸೆಂ.ಮೀರ ವರೆಗೆ ಮಳೆಯಾಗಿದೆ.
ಇನ್ನು ಗುರುವಾರ ಹಾಗೂ ಶುಕ್ರವಾರ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಒಂದೆರಡು
ಕಡೆಗಳಲ್ಲಿ ಮಿಂಚುಗುಡುಗ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಇನ್ನು ಎರಡು ದಿನ ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚು ಸಾಧ್ಯತೆ ಇದ್ದು,
ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ ತಲುಪುವ ಸಾಧ್ಯತೆ ಇದೆ.
ಅಲ್ಲದೇ ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ 39.9 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.
ಉಳಿದಂತೆ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮುನ್ಸೂಚನೆ ನೀಡಿದೆ.
------------------
4. ಕೇಂದ್ರ ಸರ್ಕಾರವು ರೈತರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಜೂನ್ 7ರಂದು ನಡೆದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಭತ್ತ,
ಹೆಸರುಬೇಳೆ ಹಾಗೂ ತೊಗರಿ ಬೇಳೆಗಳಿಗೆ ಎಂಎಸ್‌ಪಿ ಅಂದರೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.
ಈ ಮೂಲಕ ಮುಂಗಾರು ಬರುವುದಕ್ಕೂ ಮುನ್ನವೇ ಈ ಆದೇಶ ನೀಡಿದೆ. ಈಚೆಗೆ ನಡೆದ ಸಭೆಯಲ್ಲಿ ಭತ್ತ,
ಹೆಸರುಬೇಳೆ ಹಾಗೂ ತೊಗರಿ ಬೇಳೆಗಳಿಗೆ ಎಂಎಸ್‌ಪಿಯನ್ನು ಹೆಚ್ಚಿಸಲಾಗಿದೆ. ಅಲ್ಲದೇ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು
ಶೇ.3ರಿಂದ 8ರಷ್ಟು ಹೆಚ್ಚಳವಾಗಿದೆ. ತೊಗರಿ ಬೇಳೆಗೆ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 400 ರೂಪಾಯಿ ವರೆಗೆ ಹೆಚ್ಚಳ ಮಾಡಲಾಗಿದೆ.
ಇದಲ್ಲದೇ ಭತ್ತದ ಎಂಎಸ್‌ಪಿ ದರವನ್ನು ಪ್ರತಿ ಕ್ವಿಂಟಾಲ್‌ಗೆ 143 ರೂಪಾಯಿ, ಮೆಕ್ಕೆಜೋಳಕ್ಕೆ 128 ರೂಪಾಯಿ,
ತೊಗರಿ ಬೇಳೆಗೆ 400 ರೂಪಾಯಿ ಹೆಚ್ಚಳವಾಗಿದೆ. ಇನ್ನು ಉದ್ದಿನ ಬೇಳೆಯ ಕನಿಷ್ಠ ಬೆಂಬಲ ಬೆಲೆಯು 350 ರೂಪಾಯಿ ಹೆಚ್ಚಿಸಲಾಗಿದೆ.
------------------
5. ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಜಾನುವಾರು
ಹತ್ಯೆ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ಕಾಯ್ದೆಗಳ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಬುಧವಾರ ಬಡಗಲಾಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಜಿ.ಸಿ.ಬೈಯ್ಯಾರೆಡ್ಡಿ ನೇತೃತ್ವದ ರೈತ ಮುಖಂಡರ
ನಿಯೋಗದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ರೈತರಿಗೆ ಸಂಬಂಧಿಸಿದ್ದ ಮೂರು
ಕಾಯ್ದೆಗಳನ್ನು ವಾಪಾಸ್ ಪಡೆಯುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಾಯಿತು.
------------------
6. ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕಿಯರಲ್ಲಿ ಒಬ್ಬರಾಗಿದ್ದ ನಿರೂಪಕಿ ಗೀತಾಂಜಲಿ ಅಯ್ಯರ್ ಅವರು
ಬುಧವಾರ ಹೊಸದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಗೀತಾಂಜಲಿ ಅವರು ಸುದೀರ್ಘ 30 ವರ್ಷ ದೂರದರ್ಶನದ ಸುದ್ದಿ
ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಸುದೀರ್ಘ ವೃತ್ತಿಜೀವನದಲ್ಲಿ 4 ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಗೆ ಪಾತ್ರರಾಗಿದ್ದರು.
ಅಲ್ಲದೇ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಹಲವು ದಾಖಲೆಗಳನ್ನು ಸೃಷ್ಟಿಸಿದ್ದರು. ಗೀತಾಂಜಲಿ ಅವರ ಕಾರ್ಯ ಕ್ಷಮತೆ,
ಸಾಧನೆ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ, 1989ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ಲಭಿಸಿತ್ತು.
Image courtesy: pexels