News

ಒಡಿಸ್ಸಾ ಪಶ್ಚಿಮ ಬಂಗಾಳಕ್ಕೆ 'ಅಂಫನ್' ಚಂಡಮಾರುತ ಸಾಧ್ಯತೆ

17 May, 2020 6:40 PM IST By:

ಕೊರೋನಾ ಸಂಕಷ್ಟದ ನಡುವೆಯೇ ಪ್ರಕೃತಿ ಕೂಡ ತನ್ನ ಪ್ರಕೋಪ ಹೊರಹಾಕುವ ಸಾಧ್ಯತೆ ಇದೆ. ಇಡೀ ದೇಶಾದ್ಯಂತ ಹವಾಮಾನ ಸೂಕ್ಷ್ಮ ಸ್ಥಿತಿಯಲ್ಲಿರುವ ಕಾರಣ ಹಲವೆಡೆ ಸತತ ಬಿರುಗಾಳಿಯಿಂದ ಕೂಡಿದ ಮಳೆ ಬೀಳುತ್ತಿದೆ. ಏತನ್ಮಧ್ಯೆ ಇದೀಗ ಬಂಗಾಳ ಕೊಲ್ಲಿಯಲ್ಲಿ ಅಂಫನ್ ಹೆಸರಿನ ಚಂಡಮಾರುತದ ಆತಂಕ ಎದುರಾಗಿದೆ.
ದಕ್ಷಿಣ ರಾಜ್ಯಗಳಲ್ಲಿ ಈ ಪ್ರಭಾವ ತೀವ್ರಗೊಳ್ಳುವ ಸಾಧ್ಯತೆ ಇದೆ. ಆಗ್ನೇಯ ಬಂಗಾಳಕೊಲ್ಲಿ ಹಾಗೂ ನೆರೆಹೊರೆಯ ರಾಜ್ಯಗಳಲ್ಲಿ ತನ್ನ ಪ್ರಭಾವವನ್ನು ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಭಾರಿ ಚಂಡಮಾರುತದ ಹಿನ್ನೆಲೆ ಪಶ್ಚಿಮ ಬಂಗಾಳ ಹಾಗೂ ಕರಾವಳಿ ತೀರದಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಓಡಿಷಾ, ಚತ್ತೀಸಘಡ, ಬಂಗಾಳ ಹಾಗೂ ಆಂಧ್ರ ಪ್ರದೇಶದ ಕರಾವಳಿ ತೀರದ ಜನರಿಗೆ ಅಲರ್ಟ್ ಜಾರಿಗೊಳಿಸಲಾಗಿದೆ.

ಚಂಡಮಾರುತ ಅನಾಹುತ ತಡೆಗಟ್ಟಲು ಸಿದ್ದತೆ

ಚಂಡಮಾರುತದಿಂದಾಗುವ ಅನಾಹುತಗಳನ್ನು ತಡೆಗಟ್ಟಲು ಎಲ್ಲಾ ಸಿದ್ಧತೆ ಮಾಡಿಕೊಂಡಿವೆ. ಒಡಿಶಾ ಉತ್ತರ ಭಾಗದ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿದೆ. ಚಂಡಮಾರುತದಿಂದ ಹಾನಿ ಉಂಟಾದರೆ, ಆಶ್ರಯಕ್ಕಾಗಿ ಕಟ್ಟಡಗಳನ್ನು ಗುರುತಿಸುವಂತೆ ತಿಳಿಸಲಾಗಿದೆ. ಬಹುತೇಕ ಆಶ್ರಯ ಕಟ್ಟಡಗಳನ್ನು ಕೋವಿಡ್‌–19 ಕ್ವಾರಂಟೈನ್‌ ಕೇಂದ್ರಗಳಾಗಿ ಬಳಕೆ ಮಾಡಲಾಗುತ್ತಿದೆ.

ಮೀನುಗಾರರಿಗೆ ಕಡಲಿಗೆ ತೆರಳದಂತೆ ಮುನ್ಸೂಚನೆ

ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾಗಿರುವ ಉತ್ತರ ಮತ್ತು ದಕ್ಷಿಣ 24 ಪರಗನಾ, ಕೊಲ್ಕತ್ತಾ, ಪೂರ ಮತ್ತು ಪಶ್ಚಿಮ ಮಿಡ್ನಾಪುರ್, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಮೇ 19 ರಿಂದ 20ರ ನಡುವೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಮೇ 18 ರಿಂದ ಮೇ 21ರ ಅವಧಿಯಲ್ಲಿ ಪಶ್ಚಿಮ ಬಂಗಾಳ-ಓಡಿಷಾ ಕರಾವಳಿ ಮತ್ತು ಉತ್ತರ ಬಂಗಾಳ ಕೊಲ್ಲಿಯ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲ ಈಗಾಗಲೇ ಮೀನುಗಾರಿಕೆಗೆ ತೆರಳಿದವರು ಮೇ 17ರ ಸಂಜೆಯ ಒಳಗೆ ತೀರಕ್ಕೆ ಮರಳಲು ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶ ಮತ್ತು ಸುತ್ತಮುತ್ತಲಿನಪ್ರದೇಶಗಳಲ್ಲಿ  ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಮತ್ತು ನಂತರ ಮೇ 19 ರ ಮಧ್ಯಾಹ್ನದಿಂದ ಗಂಟೆಗೆ 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 20 ರ ಬೆಳಗ್ಗೆ ಬಿರುಗಾಳಿಯ ವೇಗ ಗಂಟೆಗೆ 75 ರಿಂದ 85 ಕಿ.ಮೀ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.