ವಿಮೆ ಸಂಸ್ಥೆಗಳ ಆಡಳಿತ ಮಂಡಳೀಯ ಕೆಲವೊಂದು ತಪ್ಪು ನಿರ್ಧಾರದಿಂದ ಬಾಕಿ ಉಳಿದ 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗಳ ವಿಮೆ ಮೊತ್ತ 180.90 ಕೋಟಿ ರೂಪಾಯಿಗಳನ್ನು ಅತೀ ಶೀಘ್ರವಾಗಿ ರೈತರಿಗೆ ಪಾವತಿಸಲು ಕ್ರಮ ವಹಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಅವರು ಕಲಬುರಗಿ ಕೃಷಿ ಮಹಾವಿದ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 1,33,717 ರೈತರ ಖಾತೆಗೆ ವಿಮೆ ಮೊತ್ತ ಜಮಾವಾಗಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಗೆ ಚಿಂತನೆ ನಡೆದಿದೆ ಎಂದರು.
ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಶೇ.104ರಷ್ಟು ಬಿತ್ತನೆಯಾಗಿದೆ. ಕೆಲವೆಡೆ ಅತಿವೃಷ್ಠಿಯಿಂದ 3.56 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿದ್ದು, ಕೇಂದ್ರ ಅಧ್ಯಯನ ತಂಡ ಸಮೀಕ್ಷೆ ಮಾಡುತ್ತಿದೆ. ಸಮೀಕ್ಷೆ ನಂತರ ಸೂಕ್ತ ಪರಿಹಾರಕ್ಕೆ ಕೇಂದ್ರ ಸರ್ಕಾವನ್ನು ಕೋರಲಾಗುವುದು. ರೈತರಿಗೆ ಸಹಾಯಧನದ ರೂಪದಲ್ಲಿ 3.87 ಲಕ್ಷ ಕ್ವಿಂಟಲ್ ಬೀಜಗಳನ್ನು ವಿತರಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ 6.15 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಪೂರೈಕೆ ಮಾಡಿದರೆ ಈ ವರ್ಷ 8.19 ಮೆ.ಟನ್ ಗೊಬ್ಬರ ಪೂರೈಸಲಾಗುತ್ತಿದೆ ಎಂದರು.
ಅನ್ನದಾತ ರೈತನಿಗೆ ವಿವಿಧ ಸವಲತ್ತು ಕಲ್ಪಿಸಲು ದೇಶದಲ್ಲೇ ಪ್ರಥಮ ಬಾರಿಗೆ ರೈತ ಬಂಧುಗಳೆ ಸ್ವತಃ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಕ್ರಾಪ್ ಸರ್ವೆ 2020-21 ಮೂಲಕ ತಮ್ಮ ಮೋಬೈಲ್‍ನಿಂದ ಬೆಳೆಗಳ ಭಾವಚಿತ್ರ ಹಾಗೂ ಇನ್ನಿತರ ಮಾಹಿತಿ ಅಪಲೋಡ್ ಮಾಡುವ ಕಾರ್ಯಕ್ಕೆ ಕಳೆದ ಆಗಸ್ಟ್ 15ಕ್ಕೆ ಚಾಲನೆ ನೀಡಲಾಗಿತ್ತು. ಕಳೆದ ಒಂದು ತಿಂಗಳಿನಲ್ಲಿ 81.79 ಲಕ್ಷ ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದರು.