News

Breaking News: ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಕ್ರಿಮಿನಲ್ ಕೇಸ್‌ ದಾಖಲು!

25 July, 2023 4:54 PM IST By: Kalmesh T
Criminal case will be registered if money is received for the application of Gruha lakshmi Yojana

ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಹಣ ಪಡೆದಿರುವ ಬಗ್ಗೆ ದೂರು ಹಾಗೂ ಸಾಕ್ಷಿ ಇದ್ದರೆ ಹಣ ಪಡೆದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳಿಗೆ ಸಚಿವರ ತಂಡದ ಭೇಟಿ ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದೆ. ಜೂನ್ ತಿಂಗಳಲ್ಲಿ  ಸ್ವಲ್ಪ ಕೊರತೆಯಾಗಿತ್ತು. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದೆ ಎಂದರು.

ಹಾವೇರಿಯಲ್ಲಿ ರೈತರು ಮರಣಹೊಂದಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡುತ್ತಿದ್ದು, ಮಳೆ ಹೆಚ್ಚಾಗಿ ಬಿದ್ದಿರುವ ಕಡೆ ತಂಡಗಳನ್ನು ಮಾಡಿಕೊಂಡು ಭೇಟಿ ನೀಡಲಾಗುವುದು.

ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು. ಇಂದು ಸಚಿವ ಕೃಷ್ಣ ಬೈರೇಗೌಡ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು.

ದಾವಣಗೆರೆ : 2023-24ನೇ ಸಾಲಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ 2000/- ರೂಪಾಯಿಗಳನ್ನು ಡಿ.ಬಿ.ಟಿ ಮೂಲಕ ನೇರವಾಗಿ ಅವರ ಬ್ಯಾಂಕ್‍ ಖಾತೆಗೆ ಜಮಾ ಮಾಡಲಾಗುವುದು.

ರೇಷನ್‍ಕಾರ್ಡ್‍ನಲ್ಲಿ ನಮೂದಿಸಿರುವ ಮನೆ ಯಜಮಾನಿಯನ್ನೇ ಗೃಹಲಕ್ಷ್ಮಿಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುವುದು. ಈ ಯೋಜನೆಗಾಗಿ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್, ಕರ್ನಾಟಕ ಓನ್ ಹಾಗೂ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಕಛೇರಿಗಳ ಮೂಲಕ ಪ್ರಾರಂಭಿಸುವ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಸಬಹುದು.

ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕವಾಗಿರುವ ಪ್ರಜಾಪ್ರತಿನಿಧಿಗಳು ಮನೆಮನೆಗೆ ತೆರಳಿ ಉಚಿತವಾಗಿ ಅರ್ಜಿಗಳ ನೋಂದಣಿಯನ್ನು ಮಾಡಿಸಿಕೊಳ್ಳುತ್ತಾರೆ.

ಈ ಕೇಂದ್ರಗಳಲ್ಲದೆ ಬೇರೆ ಇನ್ನಾವುದೇ ಕೇಂದ್ರಗಳಲ್ಲಾಗಲಿ ಅಥವಾ ಮೊಬೈಲ್ ಆ್ಯಪ್‍ಗಳ ಮುಖಾಂತರವಾಗಲಿ ನೋಂದಣಿ ಕಾರ್ಯ ಮಾಡಲಾಗುವುದಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನೋಂದಣಿಗಾಗಿ ಶುಲ್ಕವನ್ನು ಪಾವತಿಸುವಂತಿಲ್ಲ.

ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ರೇಷನ್‍ಕಾರ್ಡ್ ಪ್ರತಿ, ಯಜಮಾನಿ ಮತ್ತು ಆಕೆಯ ಪತಿಯ ಆಧಾರಕಾರ್ಡ್ ಪ್ರತಿ, ಯಜಮಾನಿಯ ಆಧಾರ ಲಿಂಕ್ ಆಗಿರುವ ಬ್ಯಾಂಕ್‌ ಖಾತೆ ಪುಸ್ತಕವನ್ನು ನೋಂದಣಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.

ಕಾರಣಾಂತರಗಳಿಂದ ಆಧಾರ್ ಲಿಂಕ್ ಆಗದೆ ಇರುವ ಯಜಮಾನಿಯ ಬ್ಯಾಂಕ್‍ಖಾತೆಗೆ ಹಣ ಸಂದಾಯವಾಗಬೇಕೆಂದು ಬಯಸಿದ್ದಲ್ಲಿ ಆ ಬ್ಯಾಂಕ್‍ಖಾತೆಯ ಪಾಸ್ ಪುಸ್ತಕವನ್ನು ತೆಗೆದುಕೊಂಡು ಹೋಗಿ ದಾಖಲೆ ನೀಡಿ ನೋಂದಣಿ ಮಾಡಿಸಬೇಕು.

ಗೃಹ ಲಕ್ಷ್ಮಿ ಯೋಜನೆಯ ನೋಂದಣಿಗಾಗಿ ಅರ್ಹ ಫಲಾನುಭವಿಯ ಮೊಬೈಲ್‍ಗೆ ಅವರು ಯಾವ ದಿನ ಅರ್ಜಿ ನೋಂದಣಿಗಾಗಿ ನೋಂದಣಿ ಕೇಂದ್ರಕ್ಕೆ ಹೋಗಬೇಕೆಂದು ಸಂದೇಶವನ್ನು ಕಳುಹಿಸಲಾಗುತ್ತದೆ. ಅದರಂತೆ ತಮಗೆ ತಿಳಿಸಿದ ದಿನಾಂಕದಂದು ಫಲಾನುಭವಿಯು ನೋಂದಣಿ ಕೇಂದ್ರಕ್ಕೆ ಹೋಗಿ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಸುವುದು.

ವೇಳಾಪಟ್ಟಿಯನ್ನು ತಿಳಿಯಲು ಫಲಾನುಭವಿಗಳು ಉಚಿತ ದೂರವಾಣಿ ಸಂಖ್ಯೆ : 1902ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು ಅಥವಾ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147500500ಗೆ ಎಸ್.ಎಂ.ಎಸ್ ಮಾಡಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯವನ್ನು ತಿಳಿದುಕೊಳ್ಳಬಹುದು.