ದೇಶದ ಮಕ್ಕಳು ಮತ್ತವರ ಹೆತ್ತವರಿಗೆ ಖುಷಿಯ ಜೊತೆ ಜೊತೆಗೆ ನೆಮ್ಮದಿಯನ್ನು ನೀಡುವ ಸುದ್ದಿಯೊಂದು ಅಹಮದಾಬಾದ್‌ನ ಔಷಧಿ ತಯಾರಕ ಕಂಪನಿಯ ಪ್ರಯೋಗಾಲಯದಿಂದ ಬಂದಿದೆ. ಅದೇನೆಂದರೆ 12ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಇನ್ನು ಕೆಲವೇ ದಿನಗಳಲ್ಲಿ ಕೋವಿಡ್ ನಿರೋಧಕ ಲಸಿಕೆ ಲಭ್ಯವಾಗಲಿದೆ.
ಹೌದು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಭಾರತ ಮೂಲಕ ಔಷಧ ತಯಾರಿಕಾ ಕಂಪನಿ (ಫಾರ್ಮಸುಟಿಕಲ್ ಕಂಪನಿ) ಝೈಡಸ್ ಕ್ಯಾಡಿಲಾದ ಪ್ರಯೋಗಾಲಯದಲ್ಲಿ ಮಕ್ಕಳಿಗಾಗಿ ಕೋವಿಡ್ ನಿರೋಧಕ ಲಸಿಕೆ ಸಿದ್ಧಪಡಿಸಲಾಗಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಎಂಬ ಫಾರ್ಮಾಸುಟಿಕಲ್ ಕಂಪನಿಯು 12ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕೊರೊನಾ ಲಸಿಕೆಯನ್ನು ಸಿದ್ಧಪಡಿಸಿದೆ. ಈಗಾಗಲೆ ಲಸಿಕೆಯ ಪ್ರಯೋಗ ಕೂಡ ಯಶಸ್ವಿಯಾಗಿದ್ದು, ಶೀಘ್ರವೇ, ಅಂದರೆ ಇನ್ನು ಕೆಲವೇ ದಿನಗಳಲ್ಲಿ ದೇಶದ ಮಕ್ಕಳಿಗೆ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದೆ.
ದೇಶದಲ್ಲಿ ಕೊರೊನಾ ಎರಡನೇ ಅಲೆಯ ಪ್ರಭಾವ ಇಳಿಮುಖವಾಗಿದ್ದು, ಶಾಲೆಗಳನ್ನು ಪುನರಾರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ಧತೆ ನಡೆಸಿವೆ. ಇದರೊಂದಿಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹತ್ತನೇ ತರಗತಿ ಪರೀಕ್ಷೆಗಳನ್ನು ನಡೆಸಲು ಕೂಡ ತರಾತುರುಯ ತಯಾರಿ ನಡೆಸಲಾಗುತ್ತಿದೆ. ಆದರೆ, ಮಕ್ಕಳಿಗೆ ಲಸಿಕೆ ಇಲ್ಲದೆ ಅವರನ್ನು ಶಾಲೆಗೆ ಕಳಿಸುವುದು ಹೇಗೆ ಎಂಬ ಚಿಂತೆ ಅವರ ಪೋಷಕರದ್ದಾಗಿತ್ತು. ಇದೀಗ ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್ಗೆ ನೀಡಿರುವ ಮಾಹಿತಿಯಿಂದಾಗಿ ದೇಶದ ಮಕ್ಕಳು ಮತ್ತು ಅವರ ಹೆತ್ತವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ದೇಶದಲ್ಲಿ ಕೊರೊನಾ 3ನೇ ಅಲೆ ಕೂಡ ಸಧ್ಯದಲ್ಲೇ ಶುರುವಾಗಲಿದೆ. ಈ ಬಾರಿ ಮಕ್ಕಳಿಗೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದರು. ಅದಕ್ಕೆ ಇಂಬು ನೀಡುವಂತೆ ಮಹಾರಾಷ್ಟçದಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ಈಗಾಗಲೇ ಮೂರನೆಯ ಅಲೆ ಪ್ರಾರಂಭವಾಗಿರುವ ಅನುಮಾನ ವ್ಯಕ್ತವಾಗಿದೆ. ಈ ನಡುವೆ, ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಅಗತ್ಯವಿರುವ ಕಟ್ಟುನಿಟ್ಟಿನ ಕ್ರಮಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮಹಾರಾಷ್ಟç ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಝೈಡಸ್ ಕ್ಯಾಡಿಲಾ ಶುಭ ಸುದ್ದಿ ನೀಡಿದೆ.
ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ
ಶಾಲೆಗಳನ್ನು ಆರಂಭಿಸುವ ಮೊದಲು ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವಂತೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ನಡುವೆ ಮಕ್ಕಳಿಗೆ ಲಸಿಕೆಯ ರಕ್ಷಣೆ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದ ಮೇಲ್ಮನವಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ ಅವರ ನೇತೃತ್ವದ ಸರ್ವೋಚ್ಛ ನ್ಯಾಯಾಲಯ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ತಿಳಿಸಿತ್ತು. ಅದರಂತೆ, ‘ಡಿಎನ್‌ಎ ವ್ಯಾಕ್ಸಿನ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವ ಝೈಡಸ್ ಕ್ಯಾಡಿಲಾ, ತನ್ನ ಪ್ರಯೋಗಾಲಯದಲ್ಲಿ ಸಿದ್ಧಪಡಿಸಿರುವ ಕೊರೊನಾ ನಿರೋಧಕ ಲಸಿಕೆಯನ್ನು ಈಗಾಗಲೇ 12ರಿಂದ 18 ವರ್ಷದ ಒಳಗಿನ ಹಲವು ಮಕ್ಕಳ ಮೇಲೆ ಪ್ರಯೋಗ ಮಾಡಿದೆ. ಅಗತ್ಯ ಪೂರ್ವಾನುಮತಿ ಪಡೆದು ನಡೆಸಲಾಗಿರುವ ಈ ಪ್ರಯೋಗ ಯಶಸ್ವಿಯಾಗಿದ್ದು, ಕೆಲವೇ ದಿನಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಹಾಗೇ ಪ್ರಸಕ್ತ ವರ್ಷ ಡಿಸೆಂಬರ್ 31ರ ಒಳಗಾಗಿ ದೇಶದ ಪ್ರತಿಯೊಬ್ಬ ವಯಸ್ಕರಿಗೂ (18+) ಲಸಿಕೆ ನೀಡುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
188 ಕೋಟಿ ಡೋಸ್ ಬೇಕು
ದೇಶದಲ್ಲಿ 18 ವರ್ಷ ಮೇಲ್ಪಟ್ಟವರೇ 93-94 ಕೋಟಿ ಜನರಿದ್ದು, ಮಕ್ಕಳೂ ಸೇರಿದಂತೆ ದೇಶದಲ್ಲಿರುವ ಎಲ್ಲ ನಾಗರಿಕರಿಗೆ ಕೊರೊನಾ ನಿರೋಧಕ ಲಸಿಕೆ ನೀಡಬೇಕೆಂದರೆ 186ರಿಂದ 188 ಕೋಟಿ ಡೋಸ್ ಕೋವಿಡ್ ವ್ಯಾಕ್ಸಿನ್ ಬೇಕಾಗುತ್ತದೆ. ಈ ಪೈಕಿ ಸುಮಾರು 51.6 ಕೋಟಿ ಡೋಸ್‌ನಷ್ಟು ಲಸಿಕೆ ಜುಲೈ 31ರ ಒಳಗೆ ಪೂರೈಕೆಯಾಗಲಿದೆ. ಇದರೊಂದಿಗೆ ಮುಂಬರುವ ಆಗಸ್ಟ್ ಮತ್ತು ಡಿಸೆಂಬರ್ ನಡುವೆ 50 ಕೋಟಿ ಡೋಸ್ ಕೋವಿಶೀಲ್ಡ್, 40 ಕೋಟಿ ಡೋಸ್ ಕೋವ್ಯಾಕ್ಸಿನ್, 30 ಕೋಟಿ ಡೋಸ್ ಬಯೋಇ ಜಬ್, 10 ಕೋಟಿ ಡೋಸ್ ಸ್ಪುಟ್ನಿಕ್ ಮತ್ತು 5 ಕೋಟಿ ಡೋಸ್‌ನಷ್ಟು ಝೈಡಸ್ ಕ್ಯಾಡಿಲಾ ಕಂಪನಿಯ ಡಿಎನ್‌ಎ ವ್ಯಾಕ್ಸಿನ್‌ಗಳನ್ನು ಒಳಗೊಂಡAತೆ ಸುಮಾರು 135 ಕೋಟಿ ಡೋಸ್‌ಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನಕಲಿ ಲಸಿಕೆ ಬಗ್ಗೆ ಇರಲಿ ಎಚ್ಚರ
ನಗರ ಪ್ರದೇಶಗಳಲ್ಲಿ ಕೆಲ ಅನಧಿಕೃತ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳಲ್ಲಿ ನಕಲಿ ಕೋವಿಡ್ ಲಸಿಕೆಗಳನ್ನು ಹಾಕುವ ಮೂಲಕ ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿದೆ. ಇಂತಹ ವಂಚಕರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಕೊರೊನಾ ಲಸಿಕೆ ಪಡೆಯಬಾರದು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಪಶ್ಚಿಮ ಬಂಗಾಳದ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ನಕಲಿ ಲಸಿಕೆ ಪಡೆದು ಅನಾರೋಗ್ಯಕ್ಕೀಡಾದ ಘಟನೆ ನಡೆದ ಬೆನ್ನಲ್ಲೇ, ನಕಲಿ ಲಸಿಕೆ ಬಗ್ಗೆ ಎಚ್ಚರ ವಹಿಸುವಂತೆ ಆರೋಗ್ಯ ಸಚಿವಾಲಯ ಸಾರ್ವಜನಿಕರಲ್ಲಿ ಮನವಿ ಮಾಡಿದೆ.