News

ಕೋವ್ಯಾಕ್ಸಿನ್ ಪ್ರಮಾಣಪತ್ರದಲ್ಲಿನ ತಪ್ಪುಗಳನ್ನು ನೀವೇ ಸರಿಪಡಿಸಿಕೊಳ್ಳಬಹುದು!

10 June, 2021 8:17 PM IST By:

ದೇಶದಾದ್ಯಂತ ಕೋವ್ಯಾಕ್ಸಿನ್ (ಕೋವಿಡ್ ವ್ಯಾಕ್ಸಿನ್) ಅಭಿಯಾನ ನಡೆಯುತ್ತಿದೆ. ಕೊರೊನಾ ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಿರುವ ಲಸಿಕೆ ಇದಾಗಿದ್ದು, ಎಲ್ಲ ರಾಜ್ಯಗಳಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ. ಇತ್ತೀಚೆಗಷ್ಟೇ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರವೇ ಕೊರೊನಾ ಲಸಿಕೆ ಪೂರೈಸಲಿದೆ ಎಂದು ಭರವಸೆ ನೀಡಿದ್ದಾರೆ. ಇದುವರೆಗೂ ಕೊರೊನಾ ಲಸಿಕೆ ಪೂರೈಕೆ, ಕೊರತೆಗೆ ಸಂಬAಧಿಸಿದAತೆ ಇದ್ದ ಎಲ್ಲ ಗೊಂದಲಗಳನ್ನು ಈ ಭರವಸೆಯು ಹೋಗಲಾಡಿಸಿದೆ.

ಆಗಲೇ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿ ಎರಡು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಹೀಗಾಗಿ 45 ವರ್ಷ ಮೇಲ್ಪಟ್ಟ ಬಹುತೇಕರು ಹಾಗೂ 18 ವರ್ಷ ಮೇಲ್ಪಟ್ಟ ಕೆಲ ಯುವಕ-ಯುವತಿಯರು ಈಗಾಗಲೇ ಲಸಿಕೆ ಪಡೆದಿದ್ದಾರೆ. ನೀವೂ ಕೂಡ ಲಸಿಕೆ ಪಡೆದಿರುವಿರಿ ಎಂದಾದರೆ ನೀವು ತಿಳಿದುಕೊಳ್ಳಬೇಕಾದ ಹಾಗೂ ಹೊಂದಿರಬೇಕಾದ ದಾಖಲೆಯೊಂದರ ಬಗ್ಗೆ ನಮಗೆ ಹೇಳಬೇಕಿದೆ. ಅದೇನೆಂದರೆ ಕೋವ್ಯಾಕ್ಸಿನ್ ಪ್ರಮಾಣಪತ್ರ. ಇದೀಗ ಈ ಪ್ರಮಾಣಪತ್ರದಲ್ಲಿನ ದೋಷಗಳನ್ನು ಕೋವಿನ್ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಪ್ರಮಾಣ ಪತ್ರ ಪಡೆದಿರಾ?

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಎಲ್ಲರಿಗೂ ಸರ್ಕಾರವೇ ಪ್ರಮಾಣಪತ್ರ ನೀಡುತ್ತಿದೆ. ಅಂದರೆ ಪ್ರಮಾಣಪತ್ರವನ್ನು ನೇರವಾಗಿ ವ್ಯಾಕ್ಸಿನ್ ಪಡೆದ ವ್ಯಕ್ತಿಯ ಕೈಗೆ ಇರಿಸುತ್ತಿಲ್ಲ. ಬದಲಿಗೆ, ಲಸಿಕೆ ಪಡೆದ ಬಳಿಕ ಸರ್ಕಾರದ ಕೋವಿನ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ನಿಮ್ಮ ವಿವರಗಳನ್ನು ದಾಖಲಿಸಿದ ಬಳಿಕ ನೀವು ಲಸಿಕೆ ಪಡೆದಿರುವುದನ್ನು ದೃಢೀಕರಿಸುವ ಪ್ರಮಾಣಪತ್ರದ ಸಾಫ್ಟ್ ಕಾಪಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ ಪ್ರಮಾಣಪತ್ರವನ್ನು ನೀವು ಡೌನ್‌ಲೋಡ್ ಮಾಡಿಕೊಂಡಿದ್ದೀರಾ? ಎಂಬುದು ಈಗ ನಾವು ಕೇಳುತ್ತಿರುವ ಪ್ರಶ್ನೆ.

ಬಹುತೇಕರಿಗೆ ಗೊತ್ತೇ ಇಲ್ಲ!

ವ್ಯಾಕ್ಸಿನ್ ಪಡೆದಿದ್ದಕ್ಕೆ ಸರ್ಕಾರದಿಂದ ಪ್ರಮಾಣಪತ್ರ ಕೊಡುತ್ತಿರುವ ವಿಷಯ ಬಹುತೇಕರಿಗೆ ತಿಳಿದೇ ಇಲ್ಲ. ಹಳ್ಳಿಗಳ ಜನರಿಗಂತೂ ಇದರ ಗಂಧ-ಗಾಳಿಯು ಗೊತ್ತಿಲ್ಲ. ಇನ್ನು ಪಟ್ಟಣ, ನಗರ ಪ್ರದೇಶಗಳಲ್ಲಿ ಲಸಿಕೆ ಪಡೆದ ಶ್ರಮಿಕ, ಕಾರ್ಮಿಕ ವರ್ಗದವರು, ಅಷ್ಟೇ ಏಕೆ ಕೆಲ ವಿದ್ಯಾವಂತರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಇದಕ್ಕೆ ಕಾರಣ ಈ ಬಗ್ಗೆ ಹೆಚ್ಚು ಪ್ರಚಾರ ಮಾಡದೇ ಇರುವುದು. ಗ್ರಾಮೀಣ ಭಾಗದ ಜನರನ್ನು ಪ್ರಮಾಣಪತ್ರದ ಬಗ್ಗೆ ಕೇಳಿದರೆ. ‘ಲಸಿಕೆ ಹಾಕಿಸಿಕೊಂಡಿದ್ದೇವಲ್ಲ. ಆ ಪ್ರಮಾಣಪತ್ರ ತೆಗೆದುಕೊಂಡು ಏನು ಮಾಡೋದು?’ ಎಂದು ಮರು ಪ್ರಶ್ನೆ ಹಾಕುತ್ತಾರೆ. ಆದರೆ ಈ ಪ್ರಮಾಣಪತ್ರ ಬಹುಮುಖ್ಯವಾದ ದಾಖಲೆಯಾಗಿದೆ.

ಪ್ರಮಾಣಪತ್ರ ಏಕೆಬೇಕು?

ಕೆಲವೇ ಕೆಲವರಿಗೆ ಕೋವ್ಯಾಕ್ಸಿನ್ ಸರ್ಟಿಫಿಕೇಟ್‌ನ ಮಹತ್ವದ ಅರಿವಿದೆ. ಅದರಲ್ಲೂ ವಿದೇಶ ಪ್ರಯಾಣ ಮಾಡುವ ವೃತ್ತಿಪರರು, ವ್ಯವಹಾರಸ್ಥರಂತೂ ಈ ಬಗ್ಗೆ ತುಸು ಹೆಚ್ಚೇ ಜಾಗರೂಕರಾಗಿದ್ದಾರೆ. ಶಿಕ್ಷಣ, ವೃತ್ತಿ, ವ್ಯವಹಾರ ಮತ್ತಿತರ ಯಾವುದೇ ಉದ್ದೇಶಕ್ಕಾಗಿ ನೀವು ವಿದೇಶಕ್ಕೆ ಹೋಗುವವರಿದ್ದರೆ, ನೀವು ಕೊರೊನಾ ವಿರುದ್ಧ ನೀಡಲಾಗುವ ಲಸಿಕೆಯನ್ನು ಪಡೆದಿದ್ದೀರ ಎಂಬುದನ್ನು ಭಾರತ ಸರ್ಕಾರವೇ ದೃಢೀಕರಿಸಿರುವ ಪ್ರಮಾಣಪತ್ರ ಬೇಕೇಬೇಕು. ಒಂದೊಮ್ಮೆ ನೀವು ಲಸಿಕೆ ಪಡೆದು ಈ ಪ್ರಮಾಣಪತ್ರ ಪಡೆಯದೇ ಇದ್ದರೆ, ವಿದೇಶಕ್ಕೆ ಹೋಗುವ ನಿಮ್ಮ ಕನಸು ಈಡೇರುವುದಿಲ್ಲ. ಅನ್ಯ ದೇಶಗಳಿಗೆ ಪ್ರಯಾಣಿಸುವಾಗ ಕೇಳುವ ಅಗತ್ಯ ದಾಖಲೆಗಳ ಪಟಟ್ಟಿಗೆ ಈಗ ಕೋವ್ಯಾಕ್ಸಿನ್ ಸರ್ಟಿಫಿಕೇಟ್ ಕೂಡ ಸೇರಿಕೊಂಡಿದೆ. ಹಾಗಾದರೆ ಈ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಪ್ರಮಾಣಪತ್ರ ಡೌನ್‌ಲೋಡ್ ಹೇಗೆ?

  1. ನಿಮ್ಮ ಬ್ರೌಸರ್‌ನಲ್ಲಿ www.cowin.gov.in/home ಎಂದು ಟೈಪ್ ಮಾಡಿ ಅಧಿಕೃ ಕೋವಿನ್ ವೆಬ್‌ಸೈಟ್ ಮುಖಪುಟಕ್ಕೆ ಹೋಗಿ
  2. ಸೈನ್-ಇನ್ ಬಟನ್ ಮೇಲೆ ಕ್ಲಿಕ್ ಮಾಡಿ, ವ್ಯಾಕ್ಸಿನ್ ಹಾಕಿಸುವಾಗ ನೀವು ನೀಡಿರುವ ಮೊಬೈಲ್ ಸಂಖ್ಯೆ (ನೋಂದಣಿಯಾದ ಮೊಬೈಲ್ ಸಂಖ್ಯೆ) ಬಳಸಿಕೊಂಡು ಲಾಗ್‌ಇನ್ ಆಗಬೇಕು.
  3. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸುತ್ತಿದ್ದಂತೆ ಆ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಒಟಿಪಿ ಎಂಟರ್ ಮಾಡಿದರೆ ನೀವು ಲಾಗ್‌ಇನ್ ಆಗುತ್ತೀರಿ.
  4. ಬಳಿಕ ನೀವು ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಪಡೆದ ದಿನಾಂಕ ಮತ್ತಿತರ ವಿವರಗಳು ನಿಮಗೆ ಕಾಣಸಿಗುತ್ತವೆ.
  5. ನಂತರ ಅಲ್ಲೇ ಬಲಭಾಗದಲ್ಲಿರವ ಸರ್ಟಿಫಿಕೇಟ್ ಬಟನ್ ಮೇಲೆ ಕಿಕ್ ಮಾಡಿದರೆ ಪ್ರಮಾಣಪತ್ರ ಡೌನ್‌ಲೋಡ್ ಆಗುತ್ತದೆ.

ತಪ್ಪು ತಿದ್ದಲು ಅವಕಾಶ

ಇದೀಗ ಬಂದಿರುವ ಸುದ್ದಿ ಏನೆಂದರೆ ಕೋವ್ಯಾಕ್ಸಿನ್ ಪ್ರಮಾಣಪತ್ರದಲ್ಲಿ ನಿಮ್ಮ ಹೆಸರು, ವಯಸ್ಸು, ಹುಟ್ಟಿದ ವರ್ಷ, ಲಿಂಗ ಮತ್ತಿತರ ಮಾಹಿತಿ ತಪ್ಪಾಗಿ ಪ್ರಕಟಗೊಂಡಿದ್ದರೆ ಅದನ್ನು ವೆಬ್‌ಸೈಟ್‌ನಲ್ಲಿ ನೀವೇ ಸರಿಪಡಿಸಿಕೊಳ್ಳಬಹುದು. ಪ್ರಮಾಣಪತ್ರದಲ್ಲಿನ ತಪ್ಪುಗಳ ತಿದ್ದುಪಡಿಗೆ ಸಾರ್ವಜನಿಕರಿಗೇ ಅವಕಾಶ ನೀಡಿ ಬುಧವಾರವಷ್ಟೇ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಹಲವರು ತಮ್ಮ ಪ್ರಮಾಣಪತ್ರದಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ ಕೂಡ. ಹಾಗಾದರೆ ಕೆಲವೇ ಹಂತಗಳಲ್ಲಿ ಪ್ರಮಾಣಪತ್ರದಲ್ಲಿನ ದೋಷ ಸರಿಪಡಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ತಪ್ಪುಗಳ ತಿದ್ದುಪಡಿ ಹೇಗೆ?

  1. ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ www.cowin.gov.in/home ಗೆ ಲಾಗಿನ್ ಆಗಿ, ‘ರೈಸ್ ಯಾನ್ ಇಶ್ಯು’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  2. ನಂತರ ತೆರೆದುಕೊಳ್ಳುವ ಪುಟದಲ್ಲಿ ‘ಕರೆಕ್ಷನ್ ಇನ್ ದ ಸರ್ಟಿಫಿಕೇಟ್’ (ಪ್ರಮಾಣಪತ್ರದಲ್ಲಿನ ದೋಷ ತಿದ್ದುಪಡಿ) ಆಯ್ಕೆ ಕ್ಲಿಕ್ ಮಾಡಿ.
  3. ಬಳಿಕ ನಿಮ್ಮ ಹೆಸರು, ಹುಟ್ಟಿದ ವರ್ಷ ಮತ್ತು ಲಿಂಗಕ್ಕೆ ಸಂಬAಧಿಸಿದ ದೋಷ ತಿದ್ದುಪಡಿ ಮಾಡಬಹುದು.
  4. ಕೇವಲ ಒಂದೇ ಒಂದು ಬಾರಿ ತಿದ್ದುಪಡಿ ಮಾಡಲು ಅವಕಾಶ ಇರುವುದರಿಂದ ಎಚ್ಚರಿಕೆಯಿಂದ ತಿದ್ದುಪಡಿ ಮಾಡಬೇಕು.
  5. ತಿದ್ದುಪಡಿ ಆದ ಬಳಿಕ ಹೊಸ ಪ್ರಮಾಣಪತ್ರವನ್ನು ಮತ್ತೊಮ್ಮೆ ಡೌನ್‌ಲೋಡ್ ಮಾಡಿಕೊಳ್ಳಬೇಕು.

6.     ಸುರಕ್ಷತೆ ದೃಷ್ಟಿಯಿಂದ ಪ್ರಮಾಣಪತ್ರವನ್ನು ಪ್ರಿಂಟ್ ಮಾಡಿಸಿ ಇರಿಸಿಕೊಂಡರೆ ಉತ್ತಮ. ಲ್ಯಾಮಿನೇಷನ್ ಮಾಡಿಸಿದರೆ ಪ್ರಮಾಣಪತ್ರ ಮತ್ತಷ್ಟು ಸುರಕ್ಷಿತ.