News

ಭಾನುವಾರ ಸಂಪೂರ್ಣ ಲಾಕ್ ಡೌನ್, ಮಂಗಳವಾರದಿಂದ ಬಸ್, ರಿಕ್ಷಾ ಓಡಾಟ, ಮಾಸ್ಕ್ ಕಡ್ಡಾಯ

19 May, 2020 1:58 PM IST By:

ಬಿಎಂಟಿಸಿ, ಕೆಎಸ್ಆರ್ ಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಬಸ್ ಸಂಚಾರ ಮಂಗಳವಾರದಿಂದಲೇ ಆರಂಭವಾಗಲಿದೆ. ಆದರೆ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಜನ, ಬಸ್ ಸಂಚಾರ ನಿಷೇಧವಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿಎಸ್‌ವೈ ಮಂಗಳವಾರದಿಂದ ರೆಡ್ ಜೋನ್ ಹಾಗೂ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಕೆಎಸ್ಆರ್ಟಿಸಿ ಬಿಎಂಟಿಸಿ ಬಸ್ ಸಂಚಾರ ಆರಂಭಗೊಳ್ಳಲಿದೆ. ಬಸ್ ನಲ್ಲಿ 30 ಜನರಿಗಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು.  ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಖಾಸಗಿ ಬಸ್ ಸಂಚಾರಕ್ಕೂ ಅವಕಾಶ ನೀಡಲಾಗುವುದು ಎಂದರು.

ಆಟೋ, ಕ್ಯಾಬ್ ಗಳಲ್ಲಿ ಚಾಲಕರ ಬಿಟ್ಟು ಇಬ್ಬರ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, ಖಾಸಗಿ ಟ್ಯಾಕ್ಸಿಗೂ ಅವಕಾಶ ನೀಡಲಾಗುವುದು. ರಾಜ್ಯದೊಳಗೆ ಮಾತ್ರ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆಟೋ ರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸ್ ಕ್ಯಾಬ್ ಓಡಾಟಕ್ಕೂ ಸರ್ಕಾರ ಅನುಮತಿ ನೀಡಿದೆ. ಆಟೋ ಮತ್ತು ಟ್ಯಾಕ್ಸಿ ಯಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು, ಮ್ಯಾಕ್ಸಿಕ್ಯಾಬ್ ನಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಪ್ರತೀ ಭಾನುವಾರ ಸಂಪೂರ್ಣ ಲಾಕ್ ಡೌನ್!

ರಾಜ್ಯದಲ್ಲಿ ಲಾಕ್‌‌ಡೌನ್ 4.0 ಜಾರಿಗೆ ಬಂದ ಪರಿಣಾಮ ಲಾಕ್‌ಡೌನ್ ಸಡಿಲಗೊಂಡರೂ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ಆ ದಿನ ಯಾರೂ ರಸ್ತೆಗೆ ಇಳಿಯುವ ಹಾಗಿಲ್ಲ, ವಾಹನ ಸಂಚಾರಕ್ಕೂ ಅವಕಾಶವಿರುವುದಿಲ್ಲ.

ಇನ್ನು ಸಿನಿಮಾ ಮಂದಿರ, ಮಾಲ್, ಹೋಟೆಲ್, ಜಿಮ್ ಗೆ ಮೇ 31 ವರೆಗೆ ತೆರೆಯಲು ಅವಕಾಶ ಇಲ್ಲ ಎಂದು ಸಿಎಂ ಬಿಎಸ್‌ವೈ ತಿಳಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಯಾರಾದರೂ ತೊಡಗಿಕೊಂಡರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.