News

ಕೊರೋನಾ ರುದ್ರನರ್ತನಕ್ಕೆ ದೇಶ ತತ್ತರ- ಆತಂಕ ಸೃಷ್ಟಿಸುತ್ತಿರುವ ಕೊರೋನಾ

18 April, 2021 8:36 PM IST By:
covid-19

ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ದೇಶದ ಎಲ್ಲಾ ರಾಜ್ಯಗಳ ಲ್ಲಿ ಕೊರೋನಾ ಆತಂಕ ಸೃಷ್ಟಿಮಾಡಿದೆ. ಸೋಂಕಿನ  ವೇಗದ ಹೆಚ್ಚಳಕ್ಕೆ ದೇಶ ಮಂಕು ಕವಿದ ವಾತಾವರಣ ನಿರ್ಮಾಣವಾಗಿದೆ.

ಸತತ ನಾಲ್ಕನೇ ದಿನವೂ ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆಯಲ್ಲಿ ಹೊಸ ದಾಖಲೆ ಬರೆದಿದೆ. ಸೋಂಕಿನ ಪ್ರಸರಣದ ವೇಗಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು ಮತ್ತು ಜನ ಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ. ಕೊರೋನಾ ಸೋಂಕು ತಡೆಯಲು ಮುನ್ನೆಚ್ಚರಿಕೆಯೇ ಮದ್ದು. ಇಲ್ಲದಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಆವರಿಸಲಿದೆ ಎನ್ನಲಾಗುತ್ತಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ 1,47,88,109 ಮಂದಿಗೆ ಸೋಂಕು ಏರಿಕೆಯಾಗಿದ್ದು ಸೋಂಕಿನಿಂದ ಇದುವರೆಗೆ ಚೇತರಿಕೆ ಪ್ರಮಾಣ 1,28,09,643 ಮಂದಿಗೆ ಏರಿಕೆಯಾಗಿದೆ. ಇಲ್ಲಿಯವರೆಗೆ 1,77,150 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸೋಂಕು ನಿಯಂತ್ರಣ ಮಾಡುವುದು ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ.

ಕರ್ನಾಟಕದಲ್ಲಿಯೂ  ಅಪಾಯದ ಮಟ್ಟ ಮೀರಿದ ಕೋವಿಡ್‌: 20 ಸಾವಿರ ಸಮೀಪಿಸಿದ ಸೋಂಕು!

ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭಯಾನಕ ರೀತಿಯಲ್ಲಿ ಹಬ್ಬುತ್ತಿದೆ. ಕಳೆದ 24 ಗಂಟೆಗಳಲ್ಲಿ (ಭಾನುವಾರ) ರಾಜ್ಯಾದ್ಯಂತ ಬರೋಬ್ಬರಿ 19,067 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,61,065ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರನಾ ಸೋಂಕಿನಿಂದಾಗಿ ರಾಜ್ಯದಲ್ಲಿ ಭಾನುವಾರ 81 ಮಂದಿ ಮೃತಪಟ್ಟಿದ್ದಾರೆ. 620 ಸೋಂಕಿತರ ಪರಿಸ್ಥಿತಿ ಗಂಭೀರವಾಗಿದ್ದು, ಕೋವಿಡ್‌ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣ ಏರಿಕೆಯಾಗುತ್ತಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಆಮ್ಲಜನಕ, ಔಷಧಿ, ಹಾಸಿಗೆ ಸಿಗದೆ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದಾಗಿ ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಭೀಕರವಾಗಿ ಗೋಚರಿಸುತ್ತಿದೆ. ಜನರು ಎಚ್ಚರಿಕೆ ವಹಿಸುವಂತೆ ಕೇಂದ್ರ ರಾಜ್ಯ ಸರ್ಕಾರಗಳು ಸೂಚನೆ ನೀಡುತ್ತಿವೆ.

ಸಕ್ರಿಯ ಪ್ರಕರಣ ಏರಿಕೆ

ದೇಶದಲ್ಲಿ ನಿತ್ಯ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮಿತಿ ಮೀರಿ ಹೋಗುತ್ತಿದೆ. ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಛತ್ತೀಸ್‌ಗಡ, ಚಂದಿಗಡ, ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್ ಸೇರಿದಂತೆ ವಿವಿದ ರಾಜ್ಯಗಳಲ್ಲಿ ಸೋಂಕು ನಿತ್ಯ ಏರಿಕೆಯಾಗುತ್ತಿದೆ.